ದೋರನಹಳ್ಳಿಯಲ್ಲಿ ಜಿಲ್ಲಾ ಬಿಜೆಪಿಯಿಂದ ಪ್ರತಿಭಟನೆ |ರಸ್ತೆ ದುರಸ್ಥಿ ಆಗದಿದ್ದರೇ ಉಸ್ತುವಾರಿ ಸಚಿವರಿಗೆ ಘೇರಾವ್ | ವಿಭೂತಿಹಳ್ಳಿ ಎಚ್ಚರಿಕೆ
ಯಾದಗಿರಿ: ಕೊಡಂಗಲ್ – ಸಿಂಧಗಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿರುವುದು, ನಿತ್ಯ ಇಲ್ಲಿಂದಲೇ ಸಂಚರಿಸುವ ಶಾಸಕ, ಸಚಿವರಿಗೆ ಕಾಣುತ್ತಿಲ್ಲ ಎಂದು ಬಿಜೆಪಿ ಜಿಲ್ಲಾ ಅಧ್ಯಕ್ಷ ಬಸವರಾಜ ವಿಭೂತಿಹಳ್ಳಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ದೋರನಹಳ್ಳಿ ಗ್ರಾಮದಲ್ಲಿ ಬುಧವಾರ ಬೆಳಗ್ಗೆ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ರಸ್ತೆ ದುಸ್ಥಿತಿ ಖಂಡಿಸಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಪಾಲ್ಗೊಂಡು ರಾಜ್ಯ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಅಭಿವೃದ್ಧಿ ಪದದ ಅರ್ಥವೇ ಗೊತ್ತಿಲ್ಲದಂತೆ ಆಗಿದೆ ಎಂದರು.
ಬಿಜೆಪಿ ಯುವ ನಾಯಕ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಗ್ಯಾರಂಟಿ ಕೊಟ್ಟ ನೆಪದಲ್ಲಿ ರಾಜ್ಯದ ಅಭಿವೃದ್ಧಿಯೇ ಮರೆತು ಸಾರ್ವಜನಿಕರ ಜೀವ ಹಿಂಡುವಂತಾಗಿದೆ. ಉಚಿತ ಬಸ್ ಪ್ರಯಾಣ ಕೊಟ್ಟು ದುಸ್ಥಿತಿ ರಸ್ತೆಗಳನ್ನು ಇಟ್ಟು ಬಸ್ ಬಾರದಂತೆ ಮಾಡಿ ಒಣ ಜಂಭ ಪ್ರದರ್ಶನ ಮಾಡುತ್ತಿದೆ ಎಂದು ಹರಿಹಾಯ್ದುರು.
ರಸ್ತೆ, ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತೀವ್ರಗತಿಯಲ್ಲಿ ರಸ್ತೆ ದುರಸ್ಥಿ ಮಾಡದಿದ್ದರೆ ಲೋಕೊಪಯೋಗಿ ಇಲಾಖೆ ಮುಂದೆ ರಸ್ತೆ ದುರಸ್ಥಿ ಆಗೋವರಗೂ ಧರಣ ಕೂರಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯನ್ನು ಅತಿವೃಷ್ಟಿ ಪೀಡಿತ ಎಂದು ಘೋಷಿಸಿವುದರ ಜೊತೆಗೆ ಎಕರೆಗೆ ಐವತ್ತು ಸಾವಿರ ಪರಿಹಾರ ನೀಡಬೇಕು. 2023-24 ನೇ ಸಾಲಿನ 291 ಕೋಟಿ, 2024-25 ನೇ ಸಾಲಿನ 326 ಕೋಟಿ ಪರಿಹಾರ ಬಿಡುಗಡೆ ಮಾಡಿ. ವಿಮೆ ಇಲ್ಲದ ರೈತರನ್ನು ವಿಮಾ ವ್ಯಾಪ್ತಿಗೆ ತಂದು, ಸಾಲ ಮನ್ನಾ ಮಾಡಿ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.
ಮಾಜಿ ಬಿಜೆಪಿ ಜಿಲ್ಲಾ ಅಧ್ಯಕ್ಷ ಅಮೀನರಡ್ಡಿ ಯಾಳಗಿ ಮಾತನಾಡಿದರು. ನಂತರ ಡಿಟಿ ಸಂಗಮೇಶ ನಾಯಕ ಅವರಿಗೆ ಮನವಿ ಪತ್ರ ಸಲ್ಲಿಸಲಾಯಿತು. ಈ ವೇಳೆ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಕುರಕುಂದಿ,ಪ್ರಭುರಾಯ ಮಲಗೊಂಡ, ಗ್ರಾಮೀಣ ಮಂಡಲ ಅಧ್ಯಕ್ಷ ರಾಜಶೇಖರ ಕಾಡಂನೋರ, ಶಿವುಕುಮಾರ ಕೊಂಕಲ್, ಶರಣಗೌಡ ಹಬ್ಬಳ್ಳಿ,ಗೋವಿಂದಪ್ಪ ಕೊಂಚೆಟ್ಟಿ, ನಿಂಗಣ್ಣಗೌಡ ಪೋ ಪಾಟೀಲ್, ಕಲ್ಲಪ್ಪ ಖಾನಾಪುರ, ಶಿವಾನಂದ ಗೋಲಗೇರಿ, ಖಾದರ ಜಮಾದರ, ಬಸವರಾಜ ಅನವಾರ, ಗುರುನಾಥ ಕಶೇಟ್ಟಿ, ಬಸವರಾಜ ಹುಡೇದ್, ಸಾಯಬಣ್ಣ ಹಲಗಿ, ಮಂಜುನಾಥ ಕಂಚಗಾರ, ವೆಂಕಟೇಶ ಕಶೇಟ್ಟಿ, ವಿರೇಶ ಕಂಬಾರ, ರವಿ ಪಾಲ್ಕಿ, ಸೇರಿದಂತೆ ಇತರರು ಇದ್ದರು.
