ಸರ್ವರ್ ಸಮಸ್ಯೆ ಗಣತಿದಾರರಿಂದ ತಹಸೀಲ್ದಾರ್ ಗೆ ತರಾಟೆ | ಓಟಿಪಿ ಹೇಳಲು ಜನರ ಹಿಂದೇಟು ? | ಡ್ರಾಫ್ಟ್ ನಲ್ಲಿ ಉಳಿಯುತ್ತಿದೆ ಡೇಟಾ
ಯಾದಗಿರಿ : ರಾಜ್ಯ ಹಿಂದುಳಿದ ವರ್ಗಗಳ ಆಯೋಗದಿಂದ ನಡೆಯುತ್ತಿರುವ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಮಾಡುತ್ತಿರುವ ಗಣತಿದಾರರಿಗೆ ಸರ್ವರ್ ಶಾಕ್ ಕಾಡುತ್ತಿದೆ.
ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ಸರ್ವರ್ ಸಮಸ್ಯೆಯಿಂದಾಗಿ ಸಮೀಕ್ಷೆಗೆ ಅಡೆತಡೆಯಾಗುತ್ತಿದೆ ಎಂದು ತಹಸೀಲ್ದಾರ್ ಕಚೇರಿಗೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರ ಜೊತೆ ತೆರಳಿ ತಹಸೀಲ್ದಾರ್ ಶಾಂತಗೌಡ ಬಿರಾದಾರ ಅವರನ್ನು ತರಾಟೆಗೆ ತೆಗೆದುಕೊಂಡ ಘಟನೆ ಬೆಳಕಿಗೆ ಬಂದಿದೆ.
ನೆಟ್ವರ್ಕ್ ಸಮಸ್ಯೆ ಗಣತಿದಾರರಿಗೆ ತಲೆನೋವಾಗಿ ಪರಿಣಮಿಸಿದ್ದು, ದಿನಕ್ಕೆ ಕೇವಲ ಒಂದೆರಡು ಕುಟುಂಬಗಳ ಸಮೀಕ್ಷೆ ಮಾಡುವಂತಾಗಿದೆ. ಸೆ. 24 ರಂದು 3.3 ತಂತ್ರಾಂಶ ನೀಡಲಾಗಿತ್ತು, ಇಂದು 3.4 ಅಪ್ಡೇಟ್ ಆಗಿದ್ದು ನಿನ್ನೆ ಕಷ್ಟ ಪಟ್ಟಿದ್ದು ವ್ಯರ್ಥವಾಗಿದೆ ಎಂದು ಗಣತಿದಾರರು ಬೇಸರ ವ್ಯಕ್ತಪಡಿಸಿದ್ದಾರೆ.
ಗಣತಿ ಆರಂಭವಾಗಿ 3 ದಿನ ಆದ್ರೂ 2 ಮನೆ ಗಣತಿ ಮಾಡಲು ಸರ್ವರ್ ಸಮಸ್ಯೆಯಿಂದಾಗಿ ಸಾಹಸ ಪಡುವಂತಾಗಿದೆ ಎಂದು ಗಣತಿದಾರರು ಅಳಲು ತೋಡಿಕೊಂಡರು. ವೈಯಕ್ತಿಕ 40 ಪ್ರಶ್ನೆ, ಕುಟುಂಬಕ್ಕೆ ಸಂಬಂಧಿಸಿದ 20 ಪ್ರಶ್ನೆಗೆ ಉತ್ತರ ನೀಡಲು ಜನರು ಅಯ್ಯಪ್ಪಾ ಎನ್ನುವಂತಾಗಿದೆ.
ಓಟಿಪಿ ಹೇಳಲು ಹಿಂದೇಟು ?: ಸಮೀಕ್ಷೆಯಲ್ಲಿ ಮೊಬೈಲ್ ಸಂಖ್ಯೆ ನಮೂದಿಸಿದ ಬಳಿಕ ದಾಖಲೆ ಸಂಪೂರ್ಣವಾಗಲು ಓಟಿಪಿ ನೀಡುವುದು ಕಡ್ಡಾಯವಾಗಿದೆ. ಕೆಲವು ಜನರು ಸೈಬರ್ ವಂಚನೆಯಂತಹ ಪ್ರಕರಣಗಳನ್ನು ಊಹಿಸಿಕೊಂಡು ಗಣತಿದಾರರಿಗೆ ಓಟಿಪಿ ಹೇಳಲೂ ಹಿಂದೇಟು ಹಾಕುತ್ತಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ. ಇದರಿಂದ ಸಮೀಕ್ಷೆಯ ಡೇಟಾ ಡ್ರಾಫ್ಟ್ ನಲ್ಲಿ ಉಳಿಯುತ್ತಿದೆ.
ರಾತ್ರಿ 8 ರೈ ವರೆಗೆ ಸಮೀಕ್ಷೆ ಯಲ್ಲಿ ಸಿಬ್ಬಂದಿ: ರಾತ್ರಿ 8 ಗಂಟೆ ಆದರೂ ಶಿಕ್ಷಕರು ಗಣತಿಯಲ್ಲಿ ತೊಡಗಿದ್ದು ಕಂಡು ಬಂತು. ಸರ್ವರ್ ಸಮಸ್ಯೆಯಿಂದಾಗಿ ಕೆಲಸವಾಗದಿರುವುದು ಹೇಗಾದ್ರೂ ಮಾಡಿ ಪ್ರೊಗ್ರೇಸ್ ತೋರಿಸಬೇಕು ಎನ್ನುವ ಛಲದಿಂದ ಸಿಬ್ಬಂದಿಗಳು , ಒಂದು ಕುಟುಂಬಕ್ಕೆ ಕನಿಷ್ಟ 1 ತಾಸು ಸಮಯವಾದರೂ ಸಮೀಕ್ಷೆಯಲ್ಲಿ ತೊಡಗಿದ್ದು ಕಂಡು ಬಂತು.
ಯಾದಗಿರಿ ಸೇರಿ ನಗರ ಪ್ರದೇಶಗಳಲ್ಲಿ ಈ ಸಮಸ್ಯೆ ಎದುರಾಗಿದೆ. ಇನ್ನು ಗ್ರಾಮೀಣ ಭಾಗದಲ್ಲಿ ಕಾರ್ಯ ನಿರ್ವಹಿಸುವವರ ಗತಿ ಏನಾಗಬೇಕು ಎನ್ನುವ ಮಾತು ವ್ಯಕ್ತವಾಗಿದೆ.
