ಐತಿಹಾಸಿಕ ನವರಾತ್ರಿ ಉತ್ಸವಕ್ಕೆ ತೆರೆ | ಶ್ರೀ ಯಲ್ಲಮ್ಮ ದೇವಿ ಪಲ್ಲಕ್ಕಿ ಉತ್ಸವ, ಸರಪಳಿ ಹರಿಯುವಿಕೆ, ಧಾರ್ಮಿಕ ಕಾರ್ಯಕ್ರಮ
ಯಾದಗಿರಿ : ಘಂಟೆ, ಜಾಗಟೆ, ಡೊಳ್ಳು, ಬಾಜಾ ಭಜಂತ್ರಿ ನಾದ ನಿನಾದದೊಂದಿಗೆ ಜರುಗಿದ ನವರಾತ್ರಿ ಉತ್ಸವ ವಡಗೇರಾ ತಾಲೂಕಿನ ದೇವರ ಹಾಲಗೇರಾ ಐತಿಹಾಸಿಕ ದಸರಾ ಹಬ್ಬವು ಅತ್ಯಂತ ಶ್ರದ್ಧೆ ಭಕ್ತಿ ಸಂಭ್ರಮದಿಂದ ಸಹಸ್ರಾರು ಭಕ್ತರ ಮಧ್ಯೆ ಜರುಗಿತು.
ಗ್ರಾಮದ ಹನುಮಾನ್ ದೇವಸ್ಥಾನದ ಆವರಣದಲ್ಲಿ ನಡೆದ ಸರಪಳಿ ಹರಿಯುವ ಕಾರ್ಯಕ್ರಮದಲ್ಲಿ ಗ್ರಾಮದ ನಿಂಗಪ್ಪ ಪೂಜಾರಿ ಸರಪಳಿ ಹರಿಯುವುದರೊಂದಿಗೆ ಸಂಭ್ರಮದ ಹಬ್ಬದ ಕಾರ್ಯಕ್ರಮಕ್ಕೆ ತೆರೆ ಎಳೆದರು
ದೇವರ ಹಾಲಗೇರಾ ಹಿನ್ನಲೆ : ಗ್ರಾಮದ ಶೇ.80ರಷ್ಟು ಮನೆಗಳಲ್ಲಿ ದೇವರ ಮೂರ್ತಿಯನ್ನು ಹೊಂದಿದ್ದ ಗ್ರಾಮದಲ್ಲಿ ಹಲವು ಮಂದಿರಗಳಿವೆ. ಸುತ್ತಲಿನ ನೂರು ಹಳ್ಳಿಗಳಲ್ಲಿ ದೇವರ ಹಾಲಗೇರಾವೆಂದೆ ಪ್ರಸಿದ್ದವಾದ ಈ ಗ್ರಾಮದಲ್ಲಿ ದಸರಾ ಹಬ್ಬ ಅತ್ಯಂತ ಸಂಭ್ರಮದಿಂದ ಜರುಗುವುದರಿಂದ ಗ್ರಾಮವೂ ಸುತ್ತಲಿನ ಗ್ರಾಮಗಳಿಗೆ ಇದು ದೇವರ ಹಾಲಗೇರಾವೆಂದೇ ಖ್ಯಾತಿ ಪಡೆದಿದೆ.
ಹಾಲಗೇರಾ ಗ್ರಾಮದ ಪ್ರತಿಯೊಂದು ಮನೆಯಲ್ಲಿ ಸಂಭ್ರಮವಿರಲಿ ಎನ್ನುವ ದೃಷ್ಠಿಯಿಂದ ದಸರಾ ವೈಭವಕ್ಕೆ ಕಳೆ ತರಲು ಮನೆ ಮನೆಯಿಂದ ದೇವರ ಪಲ್ಲಕ್ಕಿಯನ್ನು ಹೊತ್ತು ಎಲ್ಲಾ ದೇವರ ಪಲ್ಲಕ್ಕಿಗಳನ್ನು ಹೊತ್ತವರು ಸೇರಿದಂತೆ ಎಲ್ಲರಿಂದ ವಿಜಯದಶಮಿ ದಿನವಾದ ಗುರುವಾರ ರಾತ್ರಿ ಬನ್ನಿ ಮುಡಿಯಲು ಶಿಬಿರ ಮಲ್ಲಯ್ಯನ ಕಟ್ಟೆ ಹತ್ತಿರವಿರುವ ಬನ್ನಿಗಿಡಕ್ಕೆ ವಿಶೇಷ ಪೂಜೆ ಸಲ್ಲಿಸಿದರು.
ಅಂದು ರಾತ್ರಿ ಎಲ್ಲ ದೇವರ ಪಲ್ಲಕ್ಕಿಗಳೊಂದಿಗೆ ಗ್ರಾಮದ ಹನುಮಾನ್ ದೇವರ ಮಂದಿರಕ್ಕೆ ತೆರಳಿ ಅಲ್ಲಿ ರಾತ್ರಿ ತಂಗಿ ನಂತರ ಶುಕ್ರವಾರ ಬೆಳಗ್ಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಸಾವಿರಾರು ಜನರ ದೇವ ಘೋಷಣೆಗಳೊಂದಿಗೆ ಪೂಜಾರಿಯಿಂದ ಸರಪಳಿ ಹರಿಯುವ ಧಾರ್ಮಿಕ ಕಾರ್ಯಕ್ರಮ ಜರುಗಿತು.
ಅದ್ದೂರಿ ಪಲ್ಲಕ್ಕಿ ಉತ್ಸವ : ವಿಜಯದಶಮಿ ದಿನ ಗುರುವಾರದಂದು ಪ್ರಾರಂಭವಾದ ಪಲ್ಲಕ್ಕಿ ಉತ್ಸವ ಮೆರವಣಿಗೆ ಮರುದಿನ ಶುಕ್ರವಾರ ಸಂಜೆವರೆಗೆ ನಡೆಯಲಿದ್ದು, ಗ್ರಾಮದೇವತೆ ಯಲ್ಲಮ್ಮದೇವಿ ದೇವಸ್ಥಾನದಿಂದ ಶ್ರೀಯಲ್ಲಮ್ಮ ದೇವಿ ಉತ್ಸವ ಮೂರ್ತಿಯ ಪಲ್ಲಕ್ಕಿ ಹೊರಬರಲಿದ್ದು, ನಂತರ ಗ್ರಾಮದ ಸಿದ್ದೇಶ್ವರ ಉತ್ಸವ ಮೂರ್ತಿಯ ಪಲ್ಲಕ್ಕಿ ಹೊರಬರಲಿದೆ. ತದ ನಂತರ ಪಲ್ಲಕ್ಕಿ ಮೆರವಣಿಗೆ ವಿಶ್ವಕರ್ಮ ಸಮುದಾಯದವರು ತಯಾರಿಸಿದ ವಿಶೇಷ ಸರಪಳಿಗೆ ಪೂಜೆ ಸಲ್ಲಿಸಿ ನಂತರ ಆ ಸರಪಳಿಯನ್ನು ಶ್ರೀಯಲ್ಲಮ್ಮ ದೇವಿ ಉತ್ಸವ ಮೂರ್ತಿಯ ಪಲ್ಲಕ್ಕಿಯಲ್ಲಿಟ್ಟು ತರಲಾಗುತ್ತದೆ.
ಅಲ್ಲಿಂದ ತೆರಳಿದ ಮೆರವಣಿಗೆ ಅಂಬಾಭವಾನಿ ಮತ್ತು ಹನುಮಾನ್ ದೇವಸ್ಥಾನದ ಆವರಣದಲ್ಲಿ ಗ್ರಾಮದ ಹಲವು ಭಕ್ತರ ಮನೆಗಳಲ್ಲಿರುವ ಶ್ರೀ ಮೈಲಾರಲಿಂಗೇಶ್ವರನ ಉತ್ಸವ ಮೂರ್ತಿ ಹೊತ್ತ ಭಕ್ತರು ಆವರಣಕ್ಕಾಗಮಿಸಿದ ನಂತರ ವಿಜಯ ದಶಮಿ ಮೆರವಣಿಗೆ ಆರಂಭವಾಗಲಿದ್ದು, ಮೆರವಣಿಗೆಯಲ್ಲಿ ಗ್ರಾಮಸ್ಥರು ಭಾಗವಹಿಸಿದ್ದರು.
ಬನ್ನಿ ಮಹಾಕಾಳಿಗೆ ಪೂಜೆ : ಗ್ರಾಮದಲ್ಲಿ ಎಲ್ಲ ಸಮುದಾಯಗಳೊಂದಿಗೆ ಉತ್ತಮ ಸಂಬಂಧವಿರಲಿ ಎನ್ನುವ ಉದ್ದೇಶದಿಂದ ಪ್ರಾರಂಭವಾದ ಈ ಬನ್ನಿ ಬಂಗಾರ ಸಂಪ್ರದಾಯವು ವಿಜಯದಶಮಿಯ ದಿನವು ಗ್ರಾಮದ ಯಲ್ಲಮ್ಮದೇವಿ ಬನ್ನಿ ಪೂಜೆಯ ನಂತರ ಗ್ರಾಮಸ್ಥರೆಲ್ಲರೂ ಬನ್ನಿ ವಿನಿಮಯ ಮಾಡಿಕೊಳ್ಳುತ್ತಾರೆ.
ಗ್ರಾಮದ ಪೊಲೀಸ್ಗೌಡರು, ಮಾಲಿಗೌಡರು, ವಿಶ್ವಕರ್ಮ ಸಮುದಾಯ, ಕುರುಬ ಸಮುದಾಯ, ಕಬ್ಬಲಿಗ ಸಮುದಾಯ, ಮಡಿವಾಳ, ಮಾತಂಗ ಸಮುದಾಯ ಹೀಗೆ ಪ್ರತಿಯೊಂದು ಸಮುದಾಯವು ಒಂದೊಂದು ಸಂಪ್ರದಾಯ ಬದ್ಧವಾದ ಕಾರ್ಯಗಳನ್ನು ಮಾಡುವುದರೊಂದಿಗೆ ದಸರಾ ಹಬ್ಬಕ್ಕೆ ಕಳೆ ತರುತ್ತಾರೆ. ಹತ್ತು ಹಲವು ಧಾರ್ಮಿಕ ಕಾರ್ಯಗಳನ್ನು ಒಬ್ಬೊಬ್ಬರಾಗಿ ತಲಾ ಆಯ್ಕೆಯೊಂದಿಗೆ ಪ್ರಾರಂಭವಾದ ವೈಭವದ ದಸರಾ ಸರಪಳಿ ಹರಿಯುವುದರೊಂದಿಗೆ ಸಂಪನ್ನಗೊಂಡಿತು.
ಪರಸ್ಪರ ಬನ್ನಿ ವಿನಿಮಯ : ಭಕ್ತಿ ಭಾವನೆಗಳ ಸಂಕೇತವಾದ ಮಹಾನವಮಿ ಹಬ್ಬದಲ್ಲಿ ಗ್ರಾಮದ ಸಮಸ್ತ ಜನತೆ ಜಾತಿ, ಮತ, ಪಂಥ, ಬೇಧ ಮರೆತು ಬನ್ನಿ ವಿನಿಮಯ ಮಾಡಿಕೊಂಡರು.
ಈ ಸಂಭ್ರಮದಲ್ಲಿ ದೊಡಪ್ಪ ಮುತ್ಯಾ, ಪರಪ್ಪ ಮುತ್ಯಾ, ಅಹಿಂದ ಮುಖಂಡರಾದ ಹನುಮೇಗೌಡ ಬಿರನಕಲ್, ಬಸ್ಸುಗೌಡ ಬಿಳ್ಹಾರ, ಡಾ.ಉಮೇಶ ಮುದ್ನಾಳ, ಮುಖಂಡರಾದ ಮಲ್ಲಣ್ಣ ಮಾಲಿಪಾಟೀಲ, ಚಂದ್ರುಗೌಡ ಹಾಲಗೇರಾ, ನರಸರಡ್ಡಿ ದೇಸಾಯಿ, ಬಾಪುಗೌಡ ಪೊಲೀಸ್ ಪಾಟೀಲ, ಮಲ್ಲಣಗೌಡ ಕೆಳಮನಿ, ಭೀಮರಾಯ ನಾಟೇಕಾರ, ಹುಸೇನ್ಸಾಬ ನಾಶಿ, ಸಂಗಪ್ಪ ಕರಡಿ, ಅಯ್ಯಣ್ಣ ಜೇರಬಂಡಿ, ಅಯ್ಯಪ್ಪ ನಾಯ್ಕೋಡಿ, ರೆಡ್ಡೆಪ್ಪ ನಾಟೇಕಾರ, ರಾಮು ನಾಟೇಕಾರ, ಆವಣ್ಣ ಪೂಜಾರಿ, ಸಣ್ಣ ಬಸಪ್ಪ ಪೂಜಾರಿ, ಹಣಮಂತ ಪೂಜಾರಿ, ಯಲ್ಲಪ್ಪ ನಾಯ್ಕೋಡಿ, ಬಸವಲಿಂಗಪ್ಪ ಕಲಾಲ, ಭೀಮರಾಯ ನಾಯ್ಕೋಡಿ, ಹಣಮಂತ ಪೂಜಾರಿ, ಯಲ್ಲಪ್ಪ ಸಾಧು, ರಾಜಶೇಖರ ಕಲ್ಮನಿ ಸೇರಿದಂತೆ ಗ್ರಾಮದ ಸುತ್ತಮುತ್ತಲಿನ ಗ್ರಾಮಸ್ಥರು ಆಗಮಿಸಿ ಹಬ್ಬದ ಸಂಭ್ರಮದಲ್ಲಿ ಭಾಗವಹಿಸಿದ್ದರು.
