ಅ.31ರಂದು ಗುರುಮಠಕಲ್ ನಲ್ಲಿ ಆರ್ಎಸ್ಎಸ್ ಪಥಸಂಚಲನ | ಅನುಮತಿ ನೀಡಿದ ಜಿಲ್ಲಾಧಿಕಾರಿ | ಕಾರ್ಯಕ್ರಮಕ್ಕೆ ಸಿದ್ದತೆ ಶುರು
ಯಾದಗಿರಿ: ಅ.31ರಂದು ಗುರುಮಠಕಲ್ ನಲ್ಲಿ ಆರ್ ಎಸ್ ಎಸ್ ಪಥ ಸಂಚಲನ ನಡೆಸಲು ಜಿಲ್ಲಾಡಳಿತ ಷರತ್ತು ಬದ್ಧ ಅನುಮತಿ ನೀಡಿದೆ. ಇದರಿಂದ ಸಂಘದ ಕಾರ್ಯಕರ್ತರಲ್ಲಿ ಸಂತೋಷದ ವಾತಾವರಣ ನಿರ್ಮಾಣವಾಗಿದ್ದು, ಎಲ್ಲಾ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶತಮಾನೋತ್ಸವದ ಅಂಗವಾಗಿ ಅಕ್ಟೋಬರ್ 31ರಂದು ಗುರುಮಠಕಲ್ ಪಟ್ಟಣದಲ್ಲಿ ಪಥಸಂಚಲನ ನಡೆಸಲು ಅನುಮತಿ ಕೋರಿ ಅರ್ಜಿ ಸಲ್ಲಿಸಲಾಗಿತ್ತು. ಅದನ್ನು ಪರಿಗಣಿಸಿ, ಗೃಹ ಇಲಾಖೆಯ ಆದೇಶ ಮತ್ತು ಯಾದಗಿರಿ ಜಿಲ್ಲಾ ಪೊಲೀಸ್ ಅಧೀಕ್ಷಕರ ಶಿಫಾರಸ್ಸಿನ ಆಧಾರದ ಮೇಲೆ ಅನುಮತಿ ನೀಡಲಾಗಿದೆ ಎಂದು ತಿಳಿದು ಬಂದಿದೆ.
ಪಥ ಸಂಚಲನವು ಪಟ್ಟಣದ ಯಾದಗಿರಿ – ಹೈದ್ರಾಬಾದ್ ರಸ್ತೆಯ ಪಕ್ಕದ ಖಾಸಗಿ ಲೇಔಟ್ನಿಂದ ಆರಂಭವಾಗಿ ಸಾಮ್ರಾಟ್ ವೃತ್ತ, ಬಸವೇಶ್ವರ ವೃತ್ತ (ಎಪಿಎಂಸಿ ವೃತ್ತ) ಹನುಮಾನ್ ದೇವಸ್ಥಾನ (ಬಸ್ ನಿಲ್ದಾಣ ಹತ್ತಿರ), ಮಲ್ಲಯ್ಯ ಕಟ್ಟಾ, ನೀರೆಟಿ ಓಣಿ, ಬಡಿಗೇರ್ ಓಣಿ, ನಗರೇಶ್ವರ ದೇವಸ್ಥಾನ, ವೀರಭದ್ರೇಶ್ವರ ದೇವಸ್ಥಾನ, ನಾನಾಪೂರ್ ಓಣಿ, ಕುಂಬಾರವಾಡಿ, ಮರಾಠವಾಡಿ, ಪೊಲೀಸ್ ಠಾಣೆ ರಸ್ತೆ, ಮಿಲನ ಚೌಕ್, ಸಿಹಿ ನೀರಿನ ಬಾವಿ, ಹಾಗೂ ಮಾರ್ಕೆಟ್ ಮುಖ್ಯರಸ್ತೆಯ ಮೂಲಕ ಬಸ್ ನಿಲ್ದಾಣದ ಮುಖ್ಯರಸ್ತೆ ಮಾರ್ಗವಾಗಿ ಸಾಗಲಿದೆ.
ಪಥ ಸಂಚಲನಕ್ಕೆ 10 ಷರತ್ತು : ಶಾಂತಿ, ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಪಥಸಂಚಲನಕ್ಕೆ ಷರತ್ತು ವಿಧಿಸಿಸಲಾಗಿದ್ದು, ಸಾರ್ವಜನಿಕ ಅಥವಾ ಖಾಸಗಿ ಆಸ್ತಿಗೆ ಹಾನಿಯಾಗದಂತೆ ನೋಡಿಕೊಳ್ಳುವುದು, ನಿಗದಿತ ಮಾರ್ಗದಷ್ಟೇ ಬಳಸುವುದು, ರಸ್ತೆ ತಡೆದು ಸಂಚಾರಕ್ಕೆ ತ್ಂದರೆಯಾಗದಂತೆ, ಜಾತಿ ಅಥವಾ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ಘೋಷಣೆಗಳನ್ನು ಕೂಗದಿರುವುದು ಮತ್ತು ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸದಂತೆ ಸೂಚಿಸಲಾಗಿದೆ. ಕಾನೂನು ನಿಯಮ ಪಾಲಿಸದಿದ್ದರೆ ಕ್ರಮವಹಿಸುವ ಬಗ್ಗೆ ಜಿಲ್ಲಾಡಳಿತ ನೀಡಿರುವ ಅನುಮತಿ ಪತ್ರದಲ್ಲಿ ತಿಳಿಸಲಾಗಿದೆ.
