ಯಾದಗಿರಿಧ್ವನಿ.ಕಾಮ್ ವರದಿ ಫಲ | ಗುರುಮಠಕಲ್ ಗೆ ಬಂತು ಅಗ್ನಿ ಶಾಮಕ ಠಾಣೆ | ಜಿಲ್ಲಾ ಉಸ್ತುವಾರಿ ಸಚಿವರು ಭಾಗಿ ಸಾಧ್ಯತೆ
ಗುರುಮಠಕಲ್: ಗಡಿ ಕ್ಷೇತ್ರ ಗುರುಮಠಕಲ್ ನಲ್ಲಿ ಅಭಿವೃದ್ಧಿಯ ಹೊಳೆಯೇ ಹರಿಯುತ್ತಿದ್ದು, 112.54 ಕೋಟಿ ವೆಚ್ಚದಲ್ಲಿ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ ಮತ್ತು ಚಾಲನೆ ಕಾರ್ಯಕ್ರಮಕ್ಕೆ ಕ್ಷಣಗಣನೆ ಆರಂಭವಾಗಿದೆ. ಮತಕ್ಷೇತ್ರದ ಆರೋಗ್ಯ, ಶಿಕ್ಷಣ, ಮೂಲಸೌಕರ್ಯ, ನೀರಾವರಿ, ವಸತಿ ಸೇರಿದಂತೆ ವಿವಿಧ ಇಲಾಖೆಗಳ ಅಭಿವೃದ್ಧಿ ಕಾಮಗಾರಿಗಳು ಒಳಗೊಂಡಿವೆ.
ಗುರುಮಠಕಲ್ ಸಮುದಾಯ ಆರೋಗ್ಯ ಕೇಂದ್ರಕ್ಕೆ 645 ಲಕ್ಷ: ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರವನ್ನು 30 ಹಾಸಿಗೆಯಿಂದ 50 ಹಾಸಿಗೆಯ ಆಸ್ಪತ್ರೆಯಾಗಿ ಮೇಲ್ದರ್ಜೆಗೇರಿಸಲು 645 ಲಕ್ಷ ಅನುದಾನ ಬಿಡುಗಡೆಯಾಗಿದೆ.
ಅಗ್ನಿ ಶಾಮಕ 216 ಲಕ್ಷ : ಪ್ರಮುಖವಾಗಿ ಅಗ್ನಿ ಶಾಮಕ ಠಾಣೆಗೆ ಸಾಕಷ್ಟು ಬೇಡಿಕೆಯಿತ್ತು. ಅಗ್ನಿ ಅವಘಡದ ಸಮಯದಲ್ಲಿ ಯಾದಗಿರಿ ಯಿಂದ ವಾಹನ ಬರುವವರೆಗೆ ಅವಘಡ ನಿಯಂತ್ರಣ ಸವಾಲಾಗಿತ್ತು. ಈ ಬಗ್ಗೆ ಯಾದಗಿರಿಧ್ವನಿ ಸರ್ಕಾರ, ಜಿಲ್ಲಾಡಳಿತ, ಶಾಸಕರ ಗಮನ ಸೆಳೆಯುವ ವರದಿ ಮಾಡಿತ್ತು. ಸರ್ಕಾರದ ಮಟ್ಟದಲ್ಲಿ ಶಾಸಕರು ಹೋರಾಡಿ ಅಗ್ನಿಶಾಮಕ ಠಾಣೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಗುರುಮಠಕಲ್ ಕ್ಷೇತ್ರದ ಜನರು ಶಾಸಕರ ಜನಪರ ಕಾಳಜಿಯ ಸ್ಪಂದನೆಗೆ ಅಭಿನಂದನೆ ಸಲ್ಲಿಸಿದ್ದಾರೆ.
ಹೆಚ್ಚಿನ ಪೊಲೀಸ್ ಬಂದೋಬಸ್ತ್: ಕಳೆದ ಬಾರಿ ಪ್ರಜಾಸೌದ ನಿರ್ಮಾಣದ ವೇಳೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ಪರ ವಿರೋಧ ಘೋಷಣೆ ಮೊಳಗಿ ತೀವ್ರ ಗೊಂದಲ ಸೃಷ್ಟಿಯಾದ ಹಿನ್ನೆಲೆ ಇಂದಿನ ಕಾರ್ಯಕ್ರಮಕ್ಕೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮುನ್ನೆಚ್ಚರಿಕೆಯಾಗಿ ಪೊಲೀಸರು ಅಗತ್ಯ ಕ್ರಮವಹಿಸುತ್ತಿದ್ದಾರೆ.
