12 ಲಕ್ಷ ಸರ್ಕಾರದ ನೆರವು | ಮಹಿಳೆಯರು ಆರ್ಥಿಕವಾಗಿ ಸಧೃಡವಾಗಿಸಲು ಸಹಕಾರಿ
ಬೀದರ : ಅಕ್ಕ ಕೆಫೆ ಮಹಿಳಾ ಸಬಲೀಕರಣಕ್ಕೆ ದಾರಿಯಾಗಲಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಅವರು ತಿಳಿಸಿದರು.
ಸೋಮವಾರ ಜಿಲ್ಲಾ ಪಂಚಾಯತ ಕಛೇರಿ ಆವರಣದಲ್ಲಿ ಸಂಜೀವಿನಿ – ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನ ಸಂಸ್ಥೆ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಜಿಲ್ಲಾ ಪಂಚಾಯತ ಹಾಗೂ ತಾ.ಪಂ. ಇವರ ಸಂಯುಕ್ತಾಶ್ರಯದಲ್ಲಿ ಅಕ್ಕ ಕೆಫೆ ಉದ್ಘಾಟಿಸಿ ಮಾತನಾಡಿದರು.
ಸಂಪೂರ್ಣವಾಗಿ ಮಹಿಳೆಯರಿಂದ ಕಾರ್ಯನಿರ್ವಹಿಸುವ ಅಕ್ಕ ಕೆಫೆ ಮಹಿಳಾ ಸಬಲೀಕರಣದ ಒಂದು ಭಾಗವಾಗಿದೆ. 12 ಲಕ್ಷ ಸರ್ಕಾರದ ನೆರವು ಹಾಗೂ ಕೆಫೆ ನಡೆಸಿಕೊಂಡು ಹೋಗಲು ಮಹಿಳಾ ಸ್ವಸಹಾಯ ಸಂಘಗಳ ಬಂಡವಾಳ ಹಾಕಿ ಕೆಫೆ ನಡೆಸಿಕೊಂಡು ಹೋಗುವುದು. ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಿ ಮಾಡುವುದು ಮತ್ತು ಮುಖ್ಯ ವಾಹಿನಿಗೆ ತರುವುದು ಈ ಕೆಫೆಯ ಮುಖ್ಯ ಉದ್ದೇಶವಾಗಿದೆ. ಮಹಿಳೆಯರ ಉದ್ಯಮಶೀಲತೆ ಹೆಚ್ಚಿಸಿ, ಅವರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅಕ್ಕ ಕೆಫೆ ನೆರವಾಗಲಿದೆ. ಮೊದಲಿನಿಂದಲೂ ಮಹಿಳೆಯರು ಶೋಷಣೆಗೆ ಒಳಗಿದವರು ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ ಕೆಳ ಹಂತದಲ್ಲಿದ್ದವು. ಆದರೆ ಇಂದು ಮಹಿಳೆಯರು ಪುರುಷರಷ್ಟೇ ಸಮಾನರಾಗಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಮಹಿಳೆಯರ ಕೊಡುಗೆ ಹಾಗೂ ಸಾಧನೆ ಅಪಾರವಾಗಿದೆ ಎಂದರು.
ತಮ್ಮ ಸರ್ಕಾರ ಯಾವುದೇ ಮಧ್ಯವರ್ತಿಗಳಿಲ್ಲದೆ ಗೃಹ ಲಕ್ಷ್ಮೀ ಯೋಜನೆಯಡಿ ನೇರವಾಗಿ ಮಹಿಳೆಯರ ಖಾತೆಗೆ 2000 ರೂಪಾಯಿ ಹಾಕುವುದರ ಮೂಲಕ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಲು ಕ್ರಮ ಕೈಗೊಳ್ಳಲಾಗುತ್ತಿದೆ. ಈ ಯೋಜನೆಗೆ ಪ್ರತಿ ವರ್ಷ 30,000 ಕೋಟಿ ರೂಪಾಯಿ 1.26 ಕೋಟಿ ಮಹಿಳೆಯರಿಗೆ ನೀಡಲಾಗುತ್ತಿದೆ ಹಾಗೂ ಶಕ್ತಿ ಯೋಜನೆಯಡಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿ, ಟಿಕೆಟ್ ಹಣ ಉಳಿತಾಯ ಮಾಡಿಕೊಳ್ಳುತ್ತಿದ್ದಾರೆ. ಇವರಿಗೆ 600 ಕೋಟಿ ಟಿಕೆಟ್ ಮಹಿಳೆಯರಿಗೆ ಉಚಿತವಾಗಿ ನೀಡಲಾಗಿದೆ. ಕೆಫೆಯಲ್ಲಿ ಗುಣಮಟ್ಟದ ಮತ್ತು ರುಚಿಕರವಾದ ಆಹಾರ ಹಾಗೂ ಸ್ವಚ್ಛತೆಯಿಂದ ನೋಡಿಕೊಳ್ಳಬೇಕು ಎಂದರು.
ಬೀದರ ದಕ್ಷಿಣ ಶಾಸಕ ಶೈಲೇಂದ್ರ ಕೆ.ಬೆಲ್ದಾಳೆ ಅವರು ಮಾತನಾಡಿ, ಅಕ್ಕ ಕೆಫೆ ಮಹಿಳೆಯರನ್ನು ಆರ್ಥಿಕವಾಗಿ ಸದೃಢರಾಗಲು ಹಾಗೂ ಉದ್ಯಮಶೀಲತೆ ಹೆಚ್ಚಿಸುವುದಾಗಿದೆ. ಕೆಫೆಯಲ್ಲಿ ವಿಶೇಷ ಹಾಗೂ ವಿವಿಧ ಬಗೆಯ ಭೋಜನ ವ್ಯವಸ್ಥೆ ಮಾಡಬೇಕು. ರಾಷ್ಟ್ರೀಯ ಜೀವನೋಪಾಯ ಯೋಜನೆಯಡಿ ಕೇಂದ್ರ ಸರ್ಕಾರದಿಂದ 60% ಹಾಗೂ ರಾಜ್ಯ ಸರ್ಕಾರದಿಂದ 40% ಹಣವನ್ನು ಇದಕ್ಕೆ ನೀಡಲಾಗುತ್ತದೆ ಎಂದರು.
ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಗಿರೀಶ್ ಬದೋಲೆ ಮಾತನಾಡಿ, ಅಕ್ಕ ಕೆಫೆ ಮೂಲಕ ಮಹಿಳೆಯರನ್ನು ಇನ್ನಷ್ಟು ಆರ್ಥಿಕ ಸದೃಢರಾಗಿಸಲು ಹಾಗೂ ಮಹಿಳಾ ಉದ್ಯಮಶೀಲತೆ ಹೆಚ್ಚಿಸುವುದು ಈ ಕೆಫೆಯ ಮುಖ್ಯ ಉದ್ದೇಶವಾಗಿದೆ. ಎರಡನೇ ಕೆಫೆ ಹುಮನಾಬಾದನಲ್ಲಿ ಆರಂಭದ ಹಂತದಲ್ಲಿದೆ. ಈ ಕಫೆಯಲ್ಲಿ ಆನ್‌ಲೈನ್ ಯುಪಿಆಯ್ (ಯುಪಿಐ) ಮೂಲಕ ಕೂಡ ಪಾವತಿ ಮಾಡಬಹುದಾಗಿದೆ.
ಇದೇ ಸಂದರ್ಭದಲ್ಲಿ ಸಚಿವರು ಬಗದಲನ ಗಣೇಶ ಸ್ವಸಹಾಯ ಸಂಸ್ಥೆಗೆ ಕೆಫೆಯ ಪರವಾನಗಿ ನೀಡಿದರು ಹಾಗೂ ಕೆಫೆ ಉಪಹಾರ ಸೇವಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಾಲಾ ನಾರಾಯಣರಾವ್, ಮಹಾನಗರ ಪಾಲಿಕೆಯ ಆಯುಕ್ತ ಮುಕುಲ್ ಜೈನ್, ಕೇಂದ್ರ ಸರ್ಕಾರದ ರಾಜ್ಯ ಅಭಿವೃದ್ಧಿ, ಸಮಾನ್ವಯ ಹಾಗೂ ಮೇಲುಸ್ತುವಾರಿ ಸಮಿತಿ ಸದಸ್ಯರಾದ ಶಿವಯ್ಯ ಸ್ವಾಮಿ, ಬೀದರ ತಾಲೂಕು ಪಂಚಾಯತ ಇಓ ಮಾಣಿಕರಾವ ಪಾಟೀಲ ಸೇರಿದಂತೆ ಇತರೆ ಅಧಿಕಾರಿಗಳು, ಸ್ವಸಹಾಯ ಸಂಘಗಳ ಪದಾಧಿಕಾರಿಗಳು ಮತ್ತು ಇತರರು ಉಪಸ್ಥಿತರಿದ್ದರು.
