ಯಾದಗಿರಿ: ಗೋಟಗಿ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸೇರಿದಂತೆ ಸುತ್ತಲಿನ ಇನ್ನಿತರ ಶಾಲೆಗಳನ್ನು ಮ್ಯಾಗ್ನೆಟ್ ಯೋಜನೆಯಡಿ ಬೇರೆ ಶಾಲೆಗಳಿಗೆ ವಿಲೀನಗೊಳಿಸುವ ಸರ್ಕಾರದ ನಿರ್ಧಾರವನ್ನು ವಿರೋಧಿಸಿ ಎಐಡಿಎಸ್‌ಓ ನೇತೃತ್ವದಲ್ಲಿ ತಾಂಡಾದ ಗ್ರಾಮಸ್ಥರು ಮತ್ತು ವಿದ್ಯಾರ್ಥಿಗಳು ಶನಿವಾರ ಬೃಹತ್ ಪ್ರತಿಭಟನೆ ನಡೆಸಿದರು.
ಊರಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯು ಹಲವಾರು ವರ್ಷಗಳಿಂದ ಮಕ್ಕಳಿಗೆ ಶಿಕ್ಷಣದ ಆಧಾರ ಸ್ತಂಭವಾಗಿದೆ. ಹೀಗಾಗಿ ತಮ್ಮ ಊರಿನ ಶಾಲೆಯನ್ನು ಯಾವುದೇ ಕಾರಣಕ್ಕೂ ಇನ್ನೊಂದು ಶಾಲೆಗೆ ವಿಲೀನಗೊಳಿಸುವುದನ್ನು ಒಪ್ಪುವುದಿಲ್ಲ. ಆದಕಾರಣ ಸರ್ಕಾರ ಕೂಡಲೇ ಈ ವಿಲೀನದ ನಿರ್ಧಾರವನ್ನು ಕೈಗಿಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಎಐಡಿಎಸ್‌ಓ ಜಿಲ್ಲಾ ಸಂಚಾಲಕಿ ಶಿಲ್ಪಾ ಬಿ.ಕೆ ಮಾತನಾಡಿ, ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಹೆಸರಿನಲ್ಲಿ ರಾಜ್ಯದಾದ್ಯಂತ 40 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಯೋಜನೆಯ ಭಾಗವನ್ನಾಗಿ ಅನೇಕ ಶಾಲೆಗಳನ್ನು ಮ್ಯಾಗ್ನೆಟ್ ಶಾಲೆಯನ್ನಾಗಿ ಮಾಡಿ, ಗೋಟಗಿ ಗ್ರಾಮದ ಶಾಲೆ ಸೇರಿದಂತೆ ಸುತ್ತಮುತ್ತಲಿನ ಹಲವು ಶಾಲೆಗಳನ್ನು ಆ ಮ್ಯಾಗ್ನೆಟ್ ಶಾಲೆಗಳಿಗೆ ಸೇರಿಸಲು ಮುಂದಾಗಿದೆ ಎಂದು ಆರೋಪಿಸಿದರು.
ಸರ್ಕಾರದ ಆದೇಶದ ಪ್ರಕಾರ ಈ ಶಾಲೆಗಳ ನಿರ್ವಹಣೆಯು ಹೊರಗುತ್ತಿಗೆಯಿಂದ ನಡೆಯಬೇಕು, ತಮ್ಮ ಆದಾಯವನ್ನು ತಾನೇ ಸೃಷ್ಟಿಸಿಕೊಳ್ಳಬೇಕು ಎಂದಿದೆ. ಮಂಡ್ಯದಲ್ಲಿರುವ ಕೆಪಿಎಸ್ ಶಾಲೆಗೆ ಬರುವ ಮಕ್ಕಳು ತಿಂಗಳಿಗೆ ರೂ.4,800 ಕೊಟ್ಟು ಬಸ್ ಗಳಲ್ಲಿ ಶಾಲೆಗೆ ಬರಬೇಕು. ಗೋಟಗಿ ಶಾಲೆಗೂ ಇದೇ ಗತಿ ಬರಲಿದೆ. ಸರ್ಕಾರಿ ಶಾಲೆಗಳು ನಮ್ಮ ಹಕ್ಕು, ಅವುಗಳನ್ನು ಮುಚ್ಚಬಾರದು ಎಂದು ಆಗ್ರಹಿಸಿದರು.
ಗೋಟಗಿ ಗ್ರಾಮದ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಮನೋಹರ್ ಮಾತನಾಡಿ, ನಮಗೆ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಬೇಡ. ಇದು ಬಡವರ ವಿರೋಧಿ ಯೋಜನೆ. ಏನೇ ಆದರೂ ನಮ್ಮೂರ ಸರಕಾರಿ ಶಾಲೆ ಮುಚ್ಚಲು ನಾವು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಇನ್ನೋರ್ವ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಸದಸ್ಯರಾದ ಸೋನುಬಾಯಿ ಅವರು ಮಾತನಾಡಿ, ನಾವು ಬಡವರು ಅದಕ್ಕೆ ನಮ್ಮ ಮಕ್ಕಳನ್ನ ನಾವು ಸರಕಾರಿ ಶಾಲೆಗೆ ಕಳುಹಿಸುತ್ತೇವೆ. ನಮ್ಮ ತೆರಿಗೆಯ ಹಣದಲ್ಲಿ ಸರ್ಕಾರ ಶಾಲೆಗಳನ್ನು ನಡೆಸಲಿ. ನಾವು ಒಂದೇ ಒಂದು ರೂಪಾಯಿ ಸಹ ಕೊಡುವುದಿಲ್ಲ, ಯಾರೇ ಬಂದರೂ ನಮ್ಮೂರ ಶಾಲೆಯನ್ನು ಮುಚ್ಚಲು ನಾವು ಬಿಡುವುದಿಲ್ಲ ಎಂದು ಎಚ್ಚರಿಸಿದರು.
ಈ ಪ್ರತಿಭಟನೆಯ ಅಧ್ಯಕ್ಷತೆಯನ್ನು ಎಐಡಿಎಸ್‌ಓ ನ ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ನಾಗರಾಜ್ ರವರು ವಹಿಸಿದ್ದರು. ಪ್ರತಿಭಟನೆಯಲ್ಲಿ ಕುಮಾರ್,ದಿನೇಶ್,ಆಕಾಶ್, ಸುಭಾಷ್, ಅರುಣ್,ಚೆನ್ನಪ್ಪ, ಕಾರ್ತಿಕ್, ನಂದಿನಿ, ರವೀನಾ, ಶಿವಾನಿ ಸೇರಿದಂತೆ ನೂರಾರು ಪೋಷಕರು ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
