ಬೀದರ್ ಜಿಲ್ಲಾ ಪಂಚಾಯತಿಯಲ್ಲಿ ಪ್ರಗತಿ ಪರಿಶೀಲನಾ ಸಭೆ | ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಕಳವಳ
ಮಕ್ಕಳಿಗೆ ಕೇವಲ ಶಿಕ್ಷಣ ನೀಡಿದರೇ ಜವಾಬ್ದಾರಿ ಪೂರ್ಣಗೊಳ್ಳುವುದಿಲ್ಲ, ಶಿಕ್ಷಣದ ಜತೆಗೆ ಮಕ್ಕಳ ರಕ್ಷಣೆಗೆ ಅಗತ್ಯ ಕಟ್ಟುನಿಟ್ಟಿನ ಕ್ರಮ ವಹಿಸಬೇಕು – ಶಶಿಧರ ಕೋಸಂಬೆ, ಅಧ್ಯಕ್ಷರು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಬೆಂಗಳೂರು.
ಬೀದರ್: ಜಿಲ್ಲೆಯಲ್ಲಿ ಪ್ರಸ್ತುತ ಸಾಲಿನಲ್ಲಿ 1 ರಿಂದ 10ನೇ ತರಗತಿ ವರೆಗೆ 3.11 ಲಕ್ಷ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಅದರಲ್ಲಿ 98090 ವಿದ್ಯಾರ್ಥಿಗಳು ಆಧಾರ್ ಸಿಡಿಂಗ್ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ನಡೆದ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯಿದೆ-೨೦೦೯ರ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದ ಅವರು, ಆಧಾರ್ ಸಿಡಿಂಗ್ ಸಮಸ್ಯೆಯಿಂದ ವಿದ್ಯಾರ್ಥಿಗಳು ಶಿಷ್ಯ ವೇತನ ಸೇರಿ ಸರಕಾರದ ವಿವಿಧ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ. ಇದಕ್ಕೆ ಯಾರು ಹೋಣೆ ಎಂದು ಪ್ರಶ್ನಿಸಿದರು.
ಯಾವೆಲ್ಲ ಕಾರಣಕ್ಕಾಗಿ ವಿದ್ಯಾರ್ಥಿಗಳ ಆಧಾರ್ ತಿದ್ದುಪಡಿ ಬಾಕಿ ಉಳಿದಿವೆ. ಮುಂದಿನ ೧೫ ದಿನಗೊಳಗೆ ಇರುವ ಸಮಸ್ಯೆ ಬಗೆ ಹರಿಸಿ ಆಯೋಗಕ್ಕೆ ವರದಿ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. ಎಸ್ಸೆಸ್ಸೆಲ್ಸಿಯಲ್ಲಿ ವ್ಯಾಸಂಗ ಮಾಡುತ್ತಿರುವ ೧೦೭೬ ವಿದ್ಯಾರ್ಥಿಗಳ ಹೆಸರು ಇನ್ನೂ ಪರೀಕ್ಷೆಗೆ ನೋಂದಣಿ ಆಗಿಲ್ಲ. ವಾರ್ಷಿಕ ಪರೀಕ್ಷೆಗೆ ಇನ್ನೂ ಕೆಲವು ತಿಂಗಳು ಅಷ್ಟೇ ಬಾಕಿ ಉಳಿದಿವೆ. ಕೂಡಲೇ ವ್ಯವಸ್ಥೆ ಸರಿಪಡಿಸಿ ಎಲ್ಲ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುವಂತೆ ನೋಡಿಕೊಳ್ಳಬೇಕು ಎಂದು ತಾಕೀತು ಮಾಡಿದರು.
ಯುಡೈಸ್ ಪ್ಲಸ್‌ನಲ್ಲಿ ಶೇ.೫೧ ರಷ್ಟು ವಿದ್ಯಾರ್ಥಿಗಳ ಮಾಹಿತಿ ಇನ್ನೂ ದಾಖಲೆ ಆಗದಿರುವುದು ತೀವ್ರ ಬೇಸರ ತರಿಸಿದೆ. ಇನ್ನಾದರೂ ಸಂಬಂಧಿತರು ಎಚ್ಚೆತ್ತುಕೊಂಡು ಅಭಿಯಾನ ರೂಪದಲ್ಲಿ ವಿದ್ಯಾರ್ಥಿಗಳ ಮಾಹಿತಿ ಸಂಗ್ರಹಿಸಿ ಯಡೈಸ್ ಪ್ಲಸ್‌ನಲ್ಲಿ ನಮೂದಿಸಿ ನಿಗದಿತ ಗುರಿ ಸಾಧಿಸಬೇಕು ಎಂದು ತಿಳಿಸಿದರು.
ಎಸ್ಸೆಸ್ಸೆಲ್ಸಿ ಫಲಿತಾಂಶ ಸುಧಾರಣೆಗೆ ಶ್ರಮಿಸಿ : ಎಸ್ಸೆಸ್ಸೆಲ್ಸಿ ಪರೀಕ್ಷೆ ಸಮೀಪಿಸುತ್ತಿದ್ದು ಫಲಿತಾಂಶ ಸುಧಾರಣೆಗೆ ಶಿಕ್ಷಣ ಇಲಾಖೆಯ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಅನುರಿಸಬೇಕು. ಹೆಚ್ಚುವರಿ ಬೋಧನೆ ತರಗತಿ, ನುರಿತ ಶಿಕ್ಷಕರಿಂದ ಬೋಧಿಸುವುದು ಸೇರಿ ಪರೀಕ್ಷೆ ಅವಧಿ ಮುಗಿಯುವ ವರೆಗೂ ಎಲ್ಲ ಶಿಕ್ಷಕರು ಕಾಳಜಿ ವಹಿಸಿ ಜಿಲ್ಲೆಯಲ್ಲಿ ಈ ಬಾರಿ ಹಿಂದಿಗಿಂತಲೂ ಹೆಚ್ಚಿನ ಫಲಿತಾಂಶ ಬರುವಂತೆ ನೋಡಿಕೊಳ್ಳಬೇಕು ಎಂದು ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಹೇಳಿದರು.
ಶಾಲಾ ಸಂಸ್ಥೆಯ ನಿರ್ಲಕ್ಷ್ಯದಿಂದ ಮಕ್ಕಳ ಸಾವು : ಜಿಲ್ಲೆಯಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯ ನಿರ್ಲಕ್ಷ್ಯದಿಂದ ಮೂರು ಮಕ್ಕಳು ಮೃತಪಟ್ಟಿವೆ ಎಂದು ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಕಳವಳ ವ್ಯಕ್ತ ಪಡಿಸಿದರು. ಕಟ್ಟು ನಿಟ್ಟಿನ ಕ್ರಮ ಕೈಗೊಂಡಿದ್ದರೆ ಔರಾದ್, ಬೀದರ್ ಮತ್ತು ಬಸವಕಲ್ಯಾಣ ತಾಲೂಕಿನಲ್ಲಿ ಮಕ್ಕಳ ಸಾವು ಆಗುತ್ತಿರಲಿಲ್ಲ. ಖಾಸಗಿ ಶಾಲಾ ವಾಹನದಲ್ಲಿ ಚಾಲಕ ಹೊರತು ಪಡಿಸಿ ಆಯಾ ಇರಲಿಲ್ಲ, ಆಯಾಗಳು ಇದ್ದಿದ್ದರೇ ಮಕ್ಕಳು ಸಾವಾಗುತ್ತಿರಲಿಲ್ಲ ಎಂದರು. ಇನ್ನು ಮುಂದೆಯಾದರೂ ಈ ರೀತಿ ಘಟನೆ ಮರುಕಳಿಸದಂತೆ ಎಚ್ಚರ ವಹಿಸಬೇಕು ಎಂದು ತಾಕೀತು ಮಾಡಿದರು. ಎಲ್ಲ ಶಾಲೆಗಳ ಗೋಡೆಗಳ ಮೇಲೆ ಮಕ್ಕಳ ಸಹಾಯವಾಣಿ 1098 ಮತ್ತು ಪೊಲೀಸ್ ಸಹಾಯ ವಾಣಿ 112 ಸಂಖ್ಯೆ ಕಡ್ಡಾಯವಾಗಿ ಬರೆಸಬೇಕು ಎಂದರು.
ಈ ಸಂದರ್ಭದಲ್ಲಿ ಡಿಡಿಪಿಐ ಸುರೇಶ್, ಡಿಸಿಪಿಒ ರೂಪಾ ಸೇರಿದಂತೆ ಜಿಲ್ಲಾ ಮತ್ತು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.
