ಡಿ.13 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್ | ಒಂದಾದ 9 ಜೋಡಿ ದಂಪತಿಗಳನ್ನು | ಪ್ರಕರಣಗಳ ಕುರಿತು ನ್ಯಾಯಾಧೀಶರ ಮಾಹಿತಿ

ಬೀದರ : ರಾಷ್ಟ್ರೀಯ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ನಿರ್ದೇಶನದಂತೆ ಜಿಲ್ಲೆಯಾದ್ಯಾಂತ ಡಿ.13 ರಂದು ನಡೆದ ರಾಷ್ಟ್ರೀಯ ಲೋಕ ಅದಾಲತ್‍ನಲ್ಲಿ 46,116 ಪ್ರಕರಣಗಳನ್ನು ಇತ್ಯರ್ಥಪಡಿಸಿ ಒಟ್ಟು 21,92,14,606 ರೂಪಾಯಿಗಳ ಪರಿಹಾರವನ್ನು ಕಕ್ಷಿದಾರರಿಗೆ ಒದಗಿಸಲಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷರಾದ ಎಸ್.ಬಿ. ರಹಮಾನ್ ಅವರು ತಿಳಿಸಿದರು.

ಶನಿವಾರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಭಾಂಗಣದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಜಿಲ್ಲೆಯ ಎಲ್ಲ ನ್ಯಾಯಾಲಯಗಳಲ್ಲಿ ಬಾಕಿಯಿರುವ ಒಟ್ಟು 13.902 (ಪೆಂಡಿಂಗನಲ್ಲಿನ) ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು, 13,41,40,509 ರೂ.ಗಳ ಹಣವನ್ನು ಕಕ್ಷಿದಾರರಿಗೆ ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ. ಹಾಗೂ 32,214 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು ಹಾಗೂ ಕಕ್ಷಿದಾರರಿಗೆ 8,50,74,097 ರೂ.ಗಳ ಹಣವನ್ನು ವಸೂಲಾತಿ ಮತ್ತು ಪರಿಹಾರ ಒದಗಿಸಲಾಗಿದೆ ಎಂದು ತಿಳಿಸಿದರು. ಜಿಲ್ಲೆಯಾಧ್ಯಾಂತ ಈ ಲೋಕ ಆದಾಲತನಲ್ಲಿ ವೈವಾಹಿಕ ವ್ಯಾಜ್ಯವನ್ನು ಇತ್ಯರ್ಥಪಡಿಸಿ ಸಂದಾನದ ಮೂಲಕ 09 ಜೋಡಿ ದಂಪತಿಗಳನ್ನು ರಾಜಿ ಸಂಧಾನದ ಮೂಲಕ ಒಂದು ಮಾಡಲಾಗಿದೆ.  ನ್ಯಾಯಲಯಗಳಲ್ಲಿ ಬಾಕಿ ಇರುವ ಒಟ್ಟು 13 ಹಳೆಯ ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದೆ. ಈ ಲೋಕ ಅದಾಲತನಿಂದಾಗಿ ಜಿಲ್ಲೆಯ ಪ್ರಕರಣಗಳಿಗೆ ಸಂಬಂಧಪಟ್ಟ ಕಕ್ಷಿದಾರರಿಗೆ ತುಂಬಾ ಲಾಭವಾಗಿದೆ. ಮುಂದಿನ ಲೋಕ ಅದಾಲತ ಲಾಭವನ್ನು ಇನ್ನು ಹೆಚ್ಚಿನ ಸಂಖ್ಯೆಯಲ್ಲಿ ಕಕ್ಷಿದಾರರು ಪಡೆದುಕೊಳ್ಳಬೇಕೆಂದು ತಿಳಿಸಿದರು.

ನ್ಯಾಯಾಲಯಗಳಿಗೆ ಪ್ರಕರಣಗಳು ಬರುವುದನ್ನು ತಡೆಯಲು, ನ್ಯಾಯಾಲಯಗಳಲ್ಲಿ ಪ್ರಕರಣಗಳ ಹೊರೆ ಕಡಿಮೆ ಮಾಡಲು, ವ್ಯಾಜ್ಯಗಳು ದೊಡ್ಡದಾಗುವುದಕ್ಕೆ ಮುನ್ನವೇ ಇತ್ಯರ್ಥಪಡಿಸಲು ವಿವಿಧ ಇಲಾಖೆಗಳಲ್ಲಿ ‘ವ್ಯಾಜ್ಯ ಪೂರ್ವ’ ಹಂತದಲ್ಲಿಯೇ ರಾಜಿ (Settlement) ಮತ್ತು ಮಧ್ಯಸ್ಥಿಕೆ (Mediation) ಮೂಲಕ ಪ್ರಕರಣಗಳನ್ನು ಬಗೆಹರಿಸುವ ಉತ್ತಮ ಪ್ರಯತ್ನವಾಗಿದೆ. ಇದು ಜನರಿಗೆ ಶೀಘ್ರ ಪರಿಹಾರ ಸಿಗುವಂತೆ ಮಾಡುತ್ತದೆ ಮತ್ತು ನ್ಯಾಯಾಲಯಗಳ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ ಎಂದು ತಿಳಿಸಿದರು.

ಬೀದರ ತಾಲೂಕಿನ ಒಂದು ಹಳ್ಳಿಯನ್ನು ಗುರುತಿಸಿ, ಹಳ್ಳಿಯ ಜನರ ಸಮಸ್ಯೆಗಳನ್ನು ಪಟ್ಟಿಮಾಡಿ ಸರ್ಕಾರ ಸೌಲಭ್ಯ ಹಾಗೂ ಕಾನೂನು ಸೇವೆಗಳನ್ನು ಒದಗಿಸುವ ನಿಟ್ಟಿನಲ್ಲಿ ಒಂದು ದೊಡ್ಡ ಪ್ರಮಾಣದ ಕಾನೂನು ಅರಿವು ಮತ್ತು ನೆರವು ಕಾರ್ಯಕ್ರಮ ಮಾಡುವುದಾಗಿ ತಿಳಿಸಿದರು. ಉಚ್ಚ ನ್ಯಾಯಮೂರ್ತಿಗಳಿಂದ ದಿನಾಂಕವನ್ನು ಪಡೆದು ದಿನಾಂಕವನ್ನು ನಿರ್ಧಾರಿಸಲಾಗುವುದು. ಜಿಲ್ಲೆಯ ವಿವಿಧ ಇಲಾಖೆಗಳ ಸಹಕಾರ ಮತ್ತು ಸಹಯೋಗ ಬಹಳ ಮುಖ್ಯವಾಗಿದೆ ಎಂದರು.

ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೋಡೆ ಮಾತನಾಡಿ, ಹಳ್ಳಿಯ ಜನರಿಗೆ ಇದು ಒಂದು ಉತ್ತಮ ಅವಕಾಶವಾಗಿದ್ದು, ಸ್ಥಳದಲ್ಲಿಯೇ ತಮ್ಮ ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು. ಸರ್ಕಾರದಿಂದಿರುವ ವಿವಿಧ ಸೌಲಭ್ಯಗಳು ಹಾಗೂ ಕಾನೂನು ನೆರವು ಪಡೆದುಕೊಳ್ಳಬಹುದು ಎಂದರು.

ಈ ಸಂದರ್ಭದಲ್ಲಿ ಹಿರಿಯ ಸಿವಿಲ್ ನ್ಯಾಯಧೀಶರು ಹಾಗೂ ಬೀದರ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಪ್ರಕಾಶ ಅರ್ಜುನ ಬನಸೋಡೆ ಸೇರಿದಂತೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!