ಚೆನೈ-ಸೂರತ್ ಭಾರತ ಮಾಲಾ ಹೆದ್ದಾರಿ ಯೋಜನೆಗೆ ವಿರೋಧ |ರೈತರೊಂದಿಗೆ ಉಮೇಶ್ ಮುದ್ನಾಳ್ ಪ್ರತಿಭಟನೆ
ಯಾದಗಿರಿ: ಚೆನೈ ಟು ಸೂರತ್ ಭಾರತ ಎಕ್ಸ್ಪ್ರೆಸ್ ಹೆದ್ದಾರಿ ಯೋಜನೆಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಕಡಿಮೆ ಬೆಲೆಗೆ ರೈತರ ಜಮೀನು ವಸಕ್ಕೆ ಪಡೆದುಕೊಂಡಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಇದೀಗ ರೈತರೊಟ್ಟಿಗೆ ಚೆಲ್ಲಾಟ ಆಡುತ್ತಿದ್ದಾರೆ ಎನ್ನುವ ಆರೋಪ ಕೇಳಿ ಬಂದಿದೆ.
ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ವ್ಯಾಪ್ತಿಗೆ ಬರುವ ಮಳಳ್ಳಿ ಗ್ರಾಮದ ರೈತರ 150ಕ್ಕು ಅಧಿಕ ಎಕರೆ ಜಮೀನಿಗೆ ದಾರಿ ಇಲ್ಲದಂತ್ತಾಗಿದೆ ಎಂದು ರೈತರು ಗೋಳು ತೋಡಿಕೊಂಡಿದ್ದಾರೆ. ಮೊದಲು ಜಮೀನಿಗೆ ಹೋಗಲು ದಾರಿ ಮಾಡಿ ಕೊಡುತ್ತೇವೆ ಎಂದು ಹೇಳಿದ ಅಧಿಕಾರಿಗಳು ಈಗ ಉಲ್ಟಾ ಹೊಡೆದಿದ್ದು, ರೈತರ ಜಮೀನಿಗೆ ದಾರಿ ಕೊಡದೇ ಕಾಂಪೌಂಡ್ ನಿರ್ಮಾಣ ಮಾಡುತ್ತಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಈ ವಿಚಾರ ರೈತರು ಸಾಮಾಜಿಕ ಹೋರಾಟಗಾರ ಉಮೇಶ್ ಮುದ್ನಾಳ್ ಅವರ ಗಮನಕ್ಕೆ ತರುತ್ತಿದ್ದಂತೆ ಸ್ಥಳಕ್ಕೆ ಭೇಟಿ ನೀಡಿ ರೈತರೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಅಲ್ಲದೇ ಕೂಡಲೇ ಅಧಿಕಾರಿಗಳು, ಜಿಲ್ಲಾಡಳಿತ ರೈತರಿಗೆ ಸರ್ವೀಸ್ ರಸ್ತೆ ಬಿಡಬೇಕು ಎಂದು ಆಗ್ರಹಿಸಿದರು. ಮುಂದಿನ ದಿನಗಳಲ್ಲಿ ರೈತರೊಂದಿಗೆ ಹೆದ್ದಾರಿ ಕಾಮಗಾರಿ ತಡೆದು ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ರೈತರಾದ ನಿಂಗಪ್ಪ, ನಾಗಪ್ಪ, ಶಿವಪ್ಪ, ಮಲ್ಲಯ್ಯ, ಸುರೇಂದ್ರ, ಬಸಲಿಂಗಪ್ಪ, ದೇವರಾಜ ಗೌಡ, ಮುನಿಯಪ್ಪ ಗೌಡ, ಭೀಮಾಶಂಕರ, ಶರಣು, ಮುದುಕಪ್ಪ, ಹಣಮಂತ, ಮಲ್ಲು, ಬಸ್ಸು , ದೇವಪ್ಪ , ನಿಂಗಪ್ಪ, ಮಹೇಶ, ಭೀಮಣ್ಣ, ತಾಯಪ್ಪ, ದೇವೀಂದ್ರಪ್ಪ, ಬಸಪ್ಪ ರಡ್ಡಿ , ಮಲ್ಲಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.
