ಎಸ್ಸೆಸ್ಸೆಲ್ಸಿ, ಪಿಯುಸಿ ಪರೀಕ್ಷೆ ಫಲಿತಾಂಶ ಸುಧಾರಣೆಗಾಗಿ ಶ್ರಮಿಸಿ | ಸಕಾಲದಲ್ಲಿ ಕಾಮಗಾರಿ ಪೂರ್ಣಗೊಳಿಸಿ | ಜಿಲ್ಲೆಯಲ್ಲಿ 277 ಕೋಟಿ ರೂ. ಬೆಳೆ ಪರಿಹಾರವನ್ನು 1.92 ಲಕ್ಷ ರೈತರ ಖಾತೆಗೆ ಜಮಾ | ಸಚಿವ ಈಶ್ವರ ಬಿ.ಖಂಡ್ರೆ ಮಾಹಿತಿ
ಬೀದರ: ಜಿಲ್ಲೆಯಲ್ಲಿ 277 ಕೋಟಿ ರೂ. ಬೆಳೆ ಪರಿಹಾರವನ್ನು 1.92 ಲಕ್ಷ ರೈತರಿಗೆ ಈಗಾಗಲೇ ಅವರ ಖಾತೆಗೆ ಜಮೆ ಆಗಿವೆ. 5 ಸಾವಿರ ರೈತರಿಗೆ 80 ಲಕ್ಷ ರೂ. ವಿವಿಧ ತಾಂತ್ರಿಕ ಕಾರಣಗಳಿಂದ ಜಮೆ ಆಗಬೇಕಿದೆ. ಅಧಿಕಾರಿಗಳು ನಿರಂತರವಾಗಿ ಬಗೆಹರಿಸಲು ಶ್ರಮಿಸುತ್ತಿದ್ದಾರೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ ಬಿ.ಖಂಡ್ರೆ ಹೇಳಿದರು.
ಸೋಮವಾರ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ ಜರುಗಿದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ (ಕೆಡಿಪಿ) ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿವಿಧ ಇಲಾಖೆ ಗಳ ಯೋಜನೆಗಳ ಅನುಷ್ಠಾನ ಅಧಿಕಾರಿಗಳು ಪ್ರಸಕ್ತ ಸಾಲಿನ ಎಲ್ಲ ಕಾಮಗಾರಿಗಳನ್ನು ಮಾರ್ಚ ಒಳಗಾಗಿ ಪೂರ್ಣಗೊಳಿಸಿ ಗುರಿ ಸಾಧಿಸಬೇಕೆಂದು ಸೂಚಿಸಿದರು. ಪ್ರಸಕ್ತ ಸಾಲಿನ ವಾರ್ಷಿಕ ಅಂತ್ಯ ಸಮೀಪಿಸುತ್ತಿದೆ. ಎಲ್ಲ ಅಧಿಕಾರಿಗಳು ಕ್ರೀಯಾಶೀಲರಾಗಿ ಬಾಕಿ ಇರುವ ಎಲ್ಲ ಯೋಜನಾ ಕಾರ್ಯಕ್ರಮಗಳನ್ನು ಹಾಗೂ ಕಾಮಗಾರಿಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಲು ಹೇಳಿದರು.
ಬೀದರ ಜಿಲ್ಲೆಯ ಶೈಕ್ಷಣಿಕ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ಕ್ರೀಯಾಶೀಲರಾಗಿ ತೊಡಗಿಸಿಕೊಳ್ಳಬೇಕು. ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ಪರೀಕ್ಷೆಗಳು ಹತ್ತಿರಗೊಳ್ಳುತ್ತಿವೆ. ಫಲಿತಾಂಶ ಸುಧಾರಣೆಗೆ ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕೆಂದರು.
ಈ ವರ್ಷ ಕೊನೆಗೊಳ್ಳುವ ಹಂತದಲ್ಲಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯಿಂದ ಹಂಚಿಕೆ ಆಗಿರುವ ಅನುದಾನವನ್ನು ಸರಿಯಾಗಿ ಬಳಕೆಯಾಗಬೇಕು. ಮೈಕ್ರೋದಲ್ಲಿ ಎಲ್ಲ ಶಾಸಕರು ಪ್ರಸ್ತಾವನೆ ನೀಡಿದ್ದು ಮರುಪರಿಶೀಲನೆ ಮಾಡಲು ಬಂದಿದ್ದು ಅಧಿಕಾರಿಗಳಿಂದ ವಿಳಂಭ ಆಗುತ್ತಿರುವ ಬಗ್ಗೆ ಗಮನಕ್ಕೆ ಬಂದಿದೆ. ಅಧಿಕಾರಿಗಳು ತಕ್ಷಣವೇ ಮರುಶೀಲಿಸಿ 5 ದಿನದೊಳಗಾಗಿ ಪ್ರಸ್ತಾವನೆಗಳನ್ನು ಕಳಿಸಬೇಕೆಂದು ಸಚಿವರು ತಿಳಿಸಿದರು.
ಈಗಾಗಲೇ ಕೆ.ಪಿ.ಎಸ್. ಶಾಲೆಗಳನ್ನು ಮಂಜೂರಾತಿ ಮಾಡಲಾಗಿದೆ. ಇದಕ್ಕೆ ವಿಸ್ತೃತವಾದ ಯೊಜನಾ ವರದಿಯೊಂದನ್ನು ಸಿದ್ಧಪಡಿಸಿ ಅನುಮೋದನೆ ಪಡೆಯಲಾಗುವುದು. ನೀರಾವರಿ ಯೋಜನೆಗಳು ಪೂರ್ಣಗೊಳ್ಳಬೇಕಿವೆ. ಜಲಜೀವನ ಮಿಷನ್ (ಜೆಜೆಎಂ) ಕಾಮಗಾರಿಗಳ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿವೆ. ಅಧಿಕಾರಿಗಳು ಸಮಸ್ಯೆಗಳನ್ನು ಪರಿಶೀಲಿಸಿ ಯಾರಿಗೂ ತೊಂದರೆ ಆಗದಂತೆ ಗುಣಮಟ್ಟದ ಕಾಮಗಾರಿಗೆ ಕ್ರಮ ವಹಿಸಬೇಕು.
ಕೆಲ ಕಾಮಗಾರಿಗಳಿಗೆ ಭೂಮಿ ಗುರುತಿಸಲು ಜಿಲ್ಲಾಡಳಿತಕ್ಕೆ ತಿಳಿಸಿದ್ದೇನೆ. ಡಾ.ಬಾಬಾಸಾಹೇಬ ಅಂಬೇಡ್ಕರ ಅಧ್ಯಯನ ಕೇಂದ್ರಕ್ಕೆ ಶೀಘ್ರವೇ 10 ಎಕರೆ ಜಮೀನು ಹಸ್ತಾಂತರಗೊಳ್ಳಬೇಕು ಎಂದರು. ಜಿಲ್ಲಾ ಕ್ರೀಡಾಂಗಣ ನಿರ್ಮಾಣಕ್ಕೂ ಸಹ ಭೂಮಿ ಗುರುತಿಸಲಾಗಿದೆ. ಅನೇಕ ಕಾಮಗಾರಿಗಳ ಭೂಮಿ ಗುರುತಿಸುವ ಕಾರ್ಯ ಆದ್ಯತೆ ನೀಡುವಂತೆ ಸೂಚಿಸಲಾಗಿದೆ.
ಶಿಥಿಲಾವಸ್ಥೆಯಲ್ಲಿರುವ ಶಾಲಾ ಕೋಠಡಿಗಳನ್ನು ನೆಲಸಮ ಮಾಡುವಂತೆ ಈ ಹಿಂದೆಯೇ ಸೂಚಿಸಲಾಗಿತ್ತು. ಜಿಲ್ಲಾಡಳಿತ ಸಂಕೀರ್ಣ ನೆಲಸಮಗೊಳಿಸಿದಂತೆ ಲೋಕೋಪಯೋಗಿ ಇಲಾಖೆ ಶಿಥಿಲಾವಸ್ಥೆಯ ಕೊಠಡಿಗಳನ್ನು ನೆಲಸಮ ಮಾಡಬೇಕು ಎಂದರು. ಜಿಲ್ಲೆಯ ಎಲ್ಲ ಶಾಲಾ ಕೊಠಡಿ ರಿಪೇರಿಗೆ 10 ಕೋಟಿ ರೂ. ಅಗತ್ಯವಿದೆ. ಕೆಕೆಆರ್‌ಡಿಬಿ ಅನುದಾನದಡಿ ಕ್ರಮಕೈಗೊಳ್ಳಲಾಗುವುದು. 1317 ಕೊಠಡಿಗಳನ್ನು ಅವಿಷ್ಕಾರ ಯೋಜನೆಯಡಿ ರಿಪೇರಿ ಮಾಡಲಾಗುತ್ತಿದೆಯೆಂದು ತಿಳಿಸಿದರು.
ಜಿಲ್ಲಾ ನಗರಾಭಿವೃದ್ಧಿ ಕೋಶದ ಅನೇಕ ಕಾಮಗಾರಿಗಳನ್ನು ಮಾರ್ಗಸೂಚಿಯನ್ವಯ ಕೈಗೊಳ್ಳಬೇಕು. ವಿವಿಧ ನಿಗಮಗಳ ಫಲಾನುಭವಿಗಳನ್ನು ಆಯ್ಕೆ ಮಾಡಿ ಸರಿಯಾಗಿ ಸಹಾಯ ಸೌಲಭ್ಯಗಳನ್ನು ತಲುಪಿಸಬೇಕು. ವಿದ್ಯುತ್ ಇಲಾಖೆಯಿಂದ ಸಂಭವಿಸಿದ ಅವಘಡಗಳಲ್ಲಿ ಎಷ್ಟು ಜನ ಮೃತಪಟ್ಟಿದ್ದು ಎಷ್ಟು ಪರಿಹಾರ ನೀಡಲಾಗಿದೆ ಎಂಬುವುದರ ಬಗ್ಗೆ ಅಧಿಕಾರಿಗಳು ವಿವರ ನೀಡಬೇಕು.
ಒಟ್ಟಾರೆಯಾಗಿ ಎಲ್ಲ ಇಲಾಖೆಗಳ ಅದಿಕಾರಿಗಳು ಆಸಕ್ತಿಯಿಂದ ಕ್ರೀಯಾಶೀಲರಾಗಿ ಬಡವರ, ರೈತರ, ಮಹಿಳೆಯರ, ಹಿಂದುಳಿದ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಎಲ್ಲ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕೆಂದು ಸಚಿವರು ತಿಳಿಸಿದರು.
ಸಭೆ ಆರಂಭದಲ್ಲಿ ವಿವಿಧ ಇಲಾಖೆಯ ಯೋಜನಾ ಕಾರ್ಯಕ್ರಮಗಳ ಫಲಾನುಭವಿಗಳಿಗೆ ಸಹಾಯಧನದ ವಿವಿಧ ಸಹಾಯ ಸೌಲಭ್ಯಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಪೌರಾಡಳಿತ ಹಾಗೂ ಹಜ್ ಸಚಿವರಾದ ರಹೀಂ ಖಾನ್, ಬೀದರ ದಕ್ಷಿಣ ಶಾಸಕ ಡಾ.ಶೈಲೇಂದ್ರ ಕೆ.ಬೆಲ್ದಾಳೆ, ಹುಮನಾಬಾದ ಶಾಸಕರಾದ ಡಾ.ಸಿದ್ಧಲಿಂಗಪ್ಪ ಎನ್.ಪಾಟೀಲ್, ವಿಧಾನ ಪರಿಷತ್ ಶಾಸಕರುಗಳಾದ ಡಾ.ಚಂದ್ರಶೇಖರ ಬಿ.ಪಾಟೀಲ್, ಭೀಮರಾವ ಬಿ.ಪಾಟೀಲ್, ಕರ್ನಾಟಕ ಮಿನುಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ ಮಾಲಾ ಬಿ.ನಾರಾಯಣರಾವ, ಬೀದರ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಮೃತರಾವ ಚಿಮಕೋಡೆ, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೆಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಅರಣ್ಯ ಉಪ ಸಂರಕ್ಷಣಾಧಿಕಾರಿ ಆಶೀಶ್ ರೆಡ್ಡಿ, ಮಹಾನಗರ ಪಾಲಿಕೆ ಆಯುಕ್ತರಾದ ಮುಕುಲ್ ಜೈನ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
