ಬೀದರ : ತ್ರಿಭಾಷಾ ವಚನ ಗಾಯನದ ಪರಿಣಿತಿಯನ್ನು ಪರಿಗಣಿಸಿ ಬೀದರಿನ ವಿಶ್ವ ಕನ್ನಡಿಗರ ಸಂಸ್ಥೆಯಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿವೃತ್ತ ಉಪನಿರ್ದೇಶಕ ಜಿ.ಚಂದ್ರಕಾಂತ ಅವರಿಗೆ ಗುರುವಾರ ಬೀದರಿನ ಅವರ ಸ್ವಗೃಹದಲ್ಲಿ ಕರ್ನಾಟಕ ಕಾಯಕ ರತ್ನ ಮತ್ತು ರಾಷ್ಟ್ರೀಯ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.
ವಿಶ್ವ ಕನ್ನಡಿಗರ ಸಂಸ್ಥೆಯ ಅಧ್ಯಕ್ಷ ಡಾ. ಸುಬ್ಬಣ್ಣ ಕರಕನಳ್ಳಿ, ಚಿಟ್ಟಾ ಹಿರಿಯ ರಂಗಭೂಮಿ ಕಲಾವಿದ ಶೇಷಪ್ಪ, ಹಿರಿಯ ಜಾನಪದ ಗಾಯಕ ಶಂಭುಲಿಂಗ ವಾಲ್ದೊಡ್ಡಿ ಮತ್ತು ಜೈ ಹನುಮಾನ ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ರಮೇಶ ಇಟಗಿಕರ್ ಮತ್ತು ಚಂದ್ರಕಾಂತ ಪತ್ನಿ ಮೌನೇಶ್ವರಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಗೋರಚಿಂಚೋಳಿ ಗ್ರಾಮದಲ್ಲಿ ಜನಿಸಿದ ಇವರು ಬಾಲ್ಯದಿಂದಲ್ಲೇ ಭಜನೆ ಮತ್ತು ನಾಟಕದ ಬಗ್ಗೆ ಒಲವು ಹೊಂದಿದರು. “ಸೌಭಾಗ್ಯ ಲಕ್ಷ್ಮೀ” ಸಾಮಾಜಿಕ ನಾಟಕದಲ್ಲಿ ಬಾಲ ನಾಟನಾಗಿ ನಟಿಸಿದ್ದಾರೆ. ಮಹಾನ್ ಮಾನವತಾವಾದಿ ಬಸವೇಶ್ವರರ ವಚನಗಳ ಸಾರವನ್ನು ಇತರ ಭಾಷಿಕರಿಗೆ ಮತ್ತು ಧಾರ್ಮಿಕರಿಗೂ ತಲುಪಿಸುವ ಉದ್ದೇಶದಿಂದ, ಪಂಚ ಭಾಷೆಗಳಲ್ಲಿ ವಿವಿಧ ರಾಗಗಳಲ್ಲಿ ಸುಮಾರು 20-25 ವಚನಗಳನ್ನು ಹಾಡುವರು.
ಇದಲ್ಲದೆ ಅವರು ಗಜಲ್, ಜಾನಪದ ಗೀತೆ, ಕನ್ನಡ ಗೀತೆ ಮತ್ತು ಮರಾಠಿ ಅಭಂಗಗಳನ್ನು ಸಹ ಹಾಡುತ್ತಾರೆ. ಅವರು ರಾಜ್ಯ ಮಟ್ಟದ ವಿವಿಧ ಉತ್ಸವಗಳಲ್ಲಿ ತ್ರಿಭಾಷಾ ವಚನ ಮತ್ತು ಗಜಲ್‌ಗಳ ಗಾಯನ ಮಾಡಿದ್ದಾರೆ. ಅವರು ಆಕಾಶವಾಣಿಯಿಂದ ಹಿಂದೂಸ್ತಾನಿ ಸುಗಮ ಸಂಗೀತದಲ್ಲಿ “ಬಿ” ದರ್ಜೆಯ ಕಲಾವಿದರಾಗಿಯೂ ಆಯ್ಕೆಯಾಗಿದ್ದಾರೆ.
