ಬೀದರ್ ಕೋಟೆ ಮೇಲೆ ಸೂರ್ಯಕಿರಣ ಏರ್ ಶೋ | 9 ವಿಮಾನಗಳ ವಿವಿಧ ಸಾಹಸಮಯ ಕಸರತ್ತು
ಬೀದರ: ಬೀದರ್ ಕೋಟೆಯ ಮೇಲೆ ಭಾರತೀಯ ವಾಯುಪಡೆ ಬೀದರನ ಸೂರ್ಯಕಿರಣ ವಿಮಾನಗಳ ಏರೋಬ್ಯಾಟಿಕ್ ತಂಡದಿಂದ ಶುಕ್ರವಾರ ಅದ್ಬುತ್ ಏರ್ ಶೋ ಜರುಗಿತು.
ಸೂರ್ಯಕಿರಣ್ ಏರೋಬ್ಯಾಟಿಕ್ ತಂಡದ ಕಮಾಂಡಿಂಗ್ ಆಫೀಸರ್ ಗ್ರೂಪ್ ಕ್ಯಾಪ್ಟನ್ ಅಜಯ್ ದಾಸರಥಿ ನೇತೃತ್ವದಲ್ಲಿ ನಡೆದ ಏರ್ ಶೋ ಕಾರ್ಯಕ್ರಮದಲ್ಲಿ 9 ಸೂರ್ಯಕಿರಣ ವಿಮಾನಗಳು ವಿವಿಧ ಸಾಹಸಮಯ ಕಸರತ್ತುಗಳನ್ನು ಪ್ರದರ್ಶಿಸಿ ನೋಡುಗರ ಕಣ್ಮನ ಸೆಳೆದವು. ಬೀದರ ಕೋಟೆಯ ಮೇಲೆ ಲೋಹದ ಹಕ್ಕಿಗಳ ಕಲರವ ಮತ್ತು ಕಸರತ್ತು ನೋಡಿ ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಖುಷಿ ಪಟ್ಟರು.
ಸೂರ್ಯಕಿರಣ ವಿಮಾನಗಳು ಆಕಾಶದಲ್ಲಿ ಮೇಲಿನಿಂದ ಕೆಳಗೆ, ಪರಸ್ಪರ ಒಂದಾನೊಂದು ಎದುರಿಗೆ ಕ್ರಾಸಿಂಗ್, ಬ್ಯಾರಲ್ ರೋಲ್, ರಾಷ್ಟ್ರ ಧ್ವಜದ ಕೇಸರಿ, ಬಿಳಿ, ಹಸಿರು ಬಣ್ಣದ ಹೊಗೆ ಹೊರಹಾಕುತ್ತ ಚಿತ್ರಗಳನ್ನು ಬಿಡಿಸುವ ಮೂಲಕ ನೋಡುಗರನ್ನು ಮೂಕವಿಸ್ಮಿತರನ್ನಾಗಿ ಮಾಡುವ ಮೂಲಕ ಆಕಾಶದಲ್ಲಿ ಚಿತ್ತಾರಗಳನ್ನು ಮೂಡಿಸಿದವು. ಕೆಲವೊಂದು ಸಲ ಒಂಟಿಯಾಗಿ, ಜೋಡಿಯಾಗಿ ಮತ್ತು ತಂಡವಾಗಿ ಬರುತ್ತಿದ್ದ ವಿಮಾನಗಳು ಯಾವ ದಿಕ್ಕಿನಿಂದ ವಿಮಾನಗಳು ಆಕಾಶದಲ್ಲಿ ಬರುತ್ತಿವೆ ಎನ್ನುವುದನ್ನು ಜನರು ಕುತೂಹಲದಿಂದ ವೀಕ್ಷಿಸುತ್ತಿದ್ದರು.
ಏರ್ ಶೋ ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ, ಅಪರ ಜಿಲ್ಲಾಧಿಕಾರಿ ಶಿವಾನಂದ ಬಿ.ಕರಾಳೆ, ಬೀದರ್ ವಾಯುಪಡೆ ನಿಲ್ದಾಣದ ಕಮಾಂಡಿಂಗ್ನ ಏರ್ ಆಫೀಸರ್ ಏರ್ ಕಮೋಡೋರ್ ಪರಾಗ್ ಲಾಲ್, ವೈಶಾಲಿ ಲಾಲ್, ಅಧ್ಯಕ್ಷೆ ಎಎಫ್ಎಫ್ಡಬ್ಲೂö್ಯಎ (ಸ್ಥಳೀಯ), ಗ್ರೂಪ್ ಕ್ಯಾಪ್ಟನ್ ವಿವೇಕ್ ಅಗರ್ವಾಲ್, ಮುಖ್ಯ ಕಾರ್ಯಾಚರಣೆ ಅಧಿಕಾರಿ, ಎಎಫ್ಎಸ್ ಬೀದರ್, ಗ್ರೂಪ್ ಕ್ಯಾಪ್ಟನ್ ಬೀರೇಂದ್ರ ಸಿಂಗ್, ಮುಖ್ಯ ಎಂಜಿನಿಯರ್, ಗ್ರೂಪ್ ಕ್ಯಾಪ್ಟನ್ ಸಿ ಹರಿ, ಮುಖ್ಯ ಆಡಳಿತ ಅಧಿಕಾರಿ, ಜಿಪಿ ಕ್ಯಾಪ್ಟನ್ ಟಿಜೆ ಸಿಂಗ್, ಕಮಾಂಡಿಂಗ್ ಆಫೀಸರ್ ಹಾಟ್ಸ್ ಎ, ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರು, ಏರ್ ಫೋರ್ಸ್ ಸ್ಟೇಷನ್ ಅಧಿಕಾರಿಗಳು ಹಾಗೂ ಅವರ ಕುಟುಂಬದ ಸದಸ್ಯರು, ವಿವಿಧ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು ಸೇರಿದಂತೆ ಸಾವಿರಾರು ಜನರು ಭಾಗವಹಿಸಿದ್ದರು.
