ಟಿಟಿಡಿ ಕಾರ್ಯಕ್ಕೆ ಆಂಧ್ರ ಸಿಎಂ ಎನ್. ಚಂದ್ರಬಾಬು ನಾಯ್ಡು ಶ್ಲಾಘನೆ | 25 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ನೀರು – ಆಹಾರ ವಿಶ್ಲೇಷಣಾ ಪ್ರಯೋಗಾಲ | AI ಆಧಾರಿತ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಗೆ ಭೇಟಿ

ಶ್ರೀ ವೆಂಕಟೇಶ್ವರ ಸ್ವಾಮಿಯ ಭಕ್ತನಾಗಿ, ಶುದ್ಧತೆ, ಆಧ್ಯಾತ್ಮಿಕತೆ, ಸೌಕರ್ಯ ಮತ್ತು ನೆಮ್ಮದಿಯಂತಹ ವಿಷಯಗಳಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ಕೋಟ್ಯಂತರ ಭಕ್ತರ ಭಾವನೆಗಳನ್ನು ಕಾಪಾಡುವಲ್ಲಿ ಟಿಟಿಡಿ ಹಲವು ಪ್ರಯತ್ನ ಮಾಡುತ್ತಿದೆ – ಎನ್. ಚಂದ್ರಬಾಬು ನಾಯ್ಡು, ಮುಖ್ಯಮಂತ್ರಿ.

ತಿರುಪತಿ: ತಿರುಮಲದ ಪಾವಿತ್ರ್ಯವನ್ನು ಕಾಪಾಡಿಕೊಂಡು ಶ್ರೀವಾರಿ ಭಕ್ತರಿಗೆ ಉತ್ತಮ ಗುಣಮಟ್ಟದ ಸೇವೆಗಳನ್ನು ಒದಗಿಸಲು ಟಿಟಿಡಿ ಉತ್ತಮ ಪ್ರಯತ್ನಗಳು ಮಾಡುತ್ತಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು ಅವರು ಶ್ಲಾಘಿಸಿದ್ದಾರೆ.

ಶನಿವಾರ ತಿರುಪತಿಯಲ್ಲಿ ಟಿಟಿಡಿ ಸಹಯೋಗದಲ್ಲಿ ರಾಜ್ಯ ಆಹಾರ ಪ್ರಯೋಗಾಲಯ ಮತ್ತು ಎಫ್‌ಎಸ್‌ಎಸ್‌ಎಐ ₹25 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಅತ್ಯಾಧುನಿಕ ನೀರು – ಆಹಾರ ವಿಶ್ಲೇಷಣಾ ಪ್ರಯೋಗಾಲಯವನ್ನು ಉದ್ಘಾಟಿಸಿರುವ ಕುರಿತು ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ತಿರುಮಲಕ್ಕೆ ಭೇಟಿ ನೀಡುವ ಕೋಟ್ಯಂತರ ಭಕ್ತರ ವಿಶ್ವಾಸ ಮತ್ತಷ್ಟು ಹೆಚ್ಚಿಸಲು ಟಿಟಿಡಿ ಮತ್ತೊಂದು ಐತಿಹಾಸಿಕ ಹೆಜ್ಜೆ ಇಟ್ಟಿದೆ ಎಂದಿದ್ದಾರೆ. ಅತ್ಯುನ್ನತ ಗುಣಮಟ್ಟವನ್ನು ಹೊಂದಿರುವ ಈ ಪ್ರಯೋಗಾಲಯದ ಮೂಲಕ, ಪ್ರಸಾದ ತಯಾರಿಕೆಯಲ್ಲಿ ಬಳಸುವ ಕಚ್ಚಾ ವಸ್ತುಗಳ ಗುಣಮಟ್ಟವನ್ನು ಸೂಕ್ಷ್ಮ ಮಟ್ಟದಲ್ಲಿ ಪರೀಕ್ಷಿಸಬಹುದು. ಇ-ನಾಲಿಗೆ ಮತ್ತು ಇ-ಮೂಗಿನಂತಹ ಅತ್ಯಾಧುನಿಕ ಸೌಲಭ್ಯಗಳ ಮೂಲಕ, ಆಹಾರದ ರುಚಿ ಮತ್ತು ವಾಸನೆಯನ್ನು ಡಿಜಿಟಲ್ ರೂಪದಲ್ಲಿ ನಿಖರವಾಗಿ ವಿಶ್ಲೇಷಿಸಿ ಬಹುದಾಗಿದೆ.

ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಗೆ ಭೇಟಿ : ಭಕ್ತರಿಗೆ  ತ್ವರಿತ ದರ್ಶನವನ್ನು ಖಚಿತಪಡಿಸಿಕೊಳ್ಳಲು ಜನಸಂದಣಿ ನಿಯಂತ್ರಣಕ್ಕಾಗಿ ತರಲಾದ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ ಗೆ ಭೇಟಿ ನೀಡಿದರು. ದರ್ಶನ ತ್ವರಿತವಾಗಿ ಮತ್ತು ಆರಾಮಾಗಿಸುವುದನ್ನು ಖಚಿತಪಡಿಸಿ ಕೊಳ್ಳಲು ಈ ಕಮಾಂಡ್ ಕಂಟ್ರೋಲ್ ಕಾರ್ಯನಿರ್ವಹಿಸುತ್ತದೆ. AI ಆಧಾರಿತ ಇಂಟಿಗ್ರೇಟೆಡ್ ಕಮಾಂಡ್ ಕಂಟ್ರೋಲ್ ಸೆಂಟರ್ (ICCC) ಒಂದೇ ವೇದಿಕೆಯ ಮೂಲಕ ಜನಸಂದಣಿ ಸಾಂದ್ರತೆ, ದರ್ಶನ ಕಾಯುವ ಸಮಯ, ವಾಹನ ಚಲನವಲನ, ವಸತಿ, ವೈದ್ಯಕೀಯ ತುರ್ತು ಪರಿಸ್ಥಿತಿಗಳು ಇತ್ಯಾದಿಗಳನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಲು ಸಹಕಾರಿಯಾಗಲಿದೆ.

ಭಕ್ತರಿಗೆ ಅನ್ನಪ್ರಸಾದ ಬಡಿಸಿದ ಮುಖ್ಯಮಂತ್ರಿ ಮತ್ತು ಕುಟುಂಬ ಸದಸ್ಯರು : ತಿರುಮಲ ಶ್ರೀವರ ದರ್ಶನದ ನಂತರ, ಮುಖ್ಯಮಂತ್ರಿ ನಾರಾ ಚಂದ್ರಬಾಬು ನಾಯ್ಡು ತಮ್ಮ ಕುಟುಂಬ ಸದಸ್ಯರೊಂದಿಗೆ ಮಾತೃಶ್ರೀ ತರಿಗೊಂಡ ವೆಂಗಮಾಂಬ ಅನ್ನಪ್ರಸಾದ ಭವನದಲ್ಲಿ ಭಕ್ತರಿಗೆ ಅನ್ನಪ್ರಸಾದ ಬಡಿಸಿದರು. ಈ ಸಂದರ್ಭದಲ್ಲಿ ಟಿಟಿಡಿ ಒದಗಿಸಿರುವ ಸೌಲಭ್ಯಗಳ ಕುರಿತು ಅವರ ಅಭಿಪ್ರಾಯಗಳನ್ನು ಪಡೆದರು. ಸೌಲಭ್ಯಗಳು ಅತ್ಯುತ್ತಮವಾಗಿವೆ ಎಂದು ಭಕ್ತರು ಮುಖ್ಯಮಂತ್ರಿಯವರೊಂದಿಗೆ ಮಾತನಾಡಿ ತೃಪ್ತಿ ವ್ಯಕ್ತಪಡಿಸಿದರು. ನಂತರ, ಅವರು ಭಕ್ತರೊಂದಿಗೆ ಪ್ರಸಾದ ಸೇವಿಸಿದರು. ಮುಖ್ಯಮಂತ್ರಿಗಳ ಭೇಟಿ ವೇಳೆ ಸಚಿವರು, ಶಾಸಕರು ಹಾಗೂ ಟಿಟಿಡಿ ಮಂಡಳಿ ಪ್ರಮುಖರು, ಅಧಿಕಾರಿಗಳು ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.

ಇದೇ ವೇಳೆ ಮುಖ್ಯಮಂತ್ರಿ ಅವರ ಮೊಮ್ಮಗ ನಾರಾ ದೇವಾಂಶ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ, ನಾರಾ ಲೋಕೇಶ್ ತಿರುಮಲದಲ್ಲಿ ಒಂದು ದಿನದ ಅನ್ನಪ್ರಸಾದಕ್ಕಾಗಿ ಖರ್ಚು ಮಾಡಿದ 44 ಲಕ್ಷ ರೂ.ಗಳನ್ನು ದಾನ ಮಾರುವ ಕುರಿತು ಟಿಟಿಡಿ ಮಾಹಿತಿ ಹಂಚಿಕೊಂಡಿದೆ.

Spread the love

Leave a Reply

Your email address will not be published. Required fields are marked *

error: Content is protected !!