ರೈತ ತರಬೇತಿ, ಶೇಂಗಾ ಸಂಸ್ಕರಣಾ ಘಟಕಕ್ಕೆ ಚಾಲನೆ ನೀಡಿದ ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ | ಶಾಸಕರು ಸಙರಿ ಸ್ಥಳೀಯ ಜನಪ್ರತಿನಿಧಿಗಳು ಭಾಗಿ | ಶಾಸಕರು ಶರಣಗೌಡ ಕಂದಕೂರರಿಂದ ಮನವಿ ಸಲ್ಲಿಕೆ
ಯಾದಗಿರಿ: ಕೇಂದ್ರ ಸರ್ಕಾರದ ಮಹತ್ವಕಾಂಕ್ಷಿ ಜಿಲ್ಲೆಯ ಗುರುಮಠಕಲ್ ಕ್ಷೇತ್ರದ ಬದ್ದೇಪಲ್ಲಿ ಗ್ರಾಮದಲ್ಲಿ ರೈತರ ತರಬೇತಿ ಮತ್ತು ಸಾಮಾನ್ಯ ಸೌಲಭ್ಯ ಕೇಂದ್ರದ ಉದ್ಘಾಟನೆ ಸಮಾರಂಭವನ್ನು ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಸಚಿವೆ ಶ್ರೀಮತಿ ನಿರ್ಮಲಾ ಸೀತಾರಾಮನ್ ಉದ್ಘಾಟನೆ ನೆರವೇರಿಸಿದರು.
ತಾಲ್ಲೂಕಿನ ಬದ್ದೇಪಲ್ಲಿ ಗ್ರಾಮದಲ್ಲಿ ನಿರ್ಮಿಸಲಾದ ಕೃಷಿ ಸಂಸ್ಕರಣೆಗಾಗಿ (ಶೇಂಗಾ ಸಂಸ್ಕರಣಾ ಘಟಕ) ರೈತ ತರಬೇತಿ ಹಾಗೂ ಸಾಮಾನ್ಯ ಸೌಲಭ್ಯ ಕೇಂದ್ರವನ್ನು (ಸಿಎಫ್‌ಸಿ) ಯು ಬದ್ದೇಪಲ್ಲಿ ಗ್ರಾಮದಲ್ಲಿ ₹ 2.19 ಕೋಟಿ ವೆಚ್ಚದ ಸಿಎಫ್‌ಸಿ ನಿರ್ಮಾಣ ಮಾಡಲಾಗಿದ್ದು, ಸಂಸತ್ ಸದಸ್ಯರ ಸ್ಥಳೀಯ ಪ್ರದೇಶಾಭಿವೃದ್ಧಿ ನಿಧಿ ಯೋಜನೆಯಡಿ (ಎಂಪಿಎಲ್‌ಎಡಿಎಸ್) ₹ 50 ಲಕ್ಷ ಹಾಗೂ ಉಳಿದ ಹಣವನ್ನು ನಬಾರ್ಡ್ ಸಹಾಯಧನದ ರೂಪದಲ್ಲಿ ನೀಡಿದೆ.
ಇದಕ್ಕೂ ಮೊದಲು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಶಾಸಕ ಶರಣಗೌಡ ಕಂದಕೂರ ಹೂಗುಚ್ಛೆ ನೀಡಿ ಸ್ವಾಗತಿಸಿದರು. ವೇದಿಕೆಯಲ್ಲಿ ಸನ್ಮಾನಿಸಿ ಪ್ರಮುಖ ಬೇಡಿಕೆಗಳ ಮನವಿಯನ್ನು ಸಚಿವರಿಗೆ ಸಲ್ಲಿಸಿದರು. ಬಳಿಕ ಮಾತನಾಡಿದ ಅವರು, ಕಡೇಚೂರು ಕೆಮಿಕಲ್ಸ್ ಕಾರ್ಖಾನೆಗಳ ಕುರಿತು ಜನರಿಗಾಗುತ್ತಿರುವ ಸಮಸ್ಯೆ, ಗುಳೆ ಸಮಸ್ಯೆ ಸೇರಿದಂತೆ ಈ ಭಾಗದಿಂದ 50 ವರ್ಷಗಳಿಂದ ಆರಿಸಿ ಹೋಗಿ ಅಧಿಕಾರಕ್ಕೆ ಏರಿದವರು ನಮ್ಮ ಜನರಿಗೆ ಸಮರ್ಪಕ ಮೂಲಭೂತ ಸೌಕರ್ಯವೂ ನೀಡಿಲ್ಲ. ಶುದ್ಧ ಕುಡಿಯುವ ನೀರು ನೀರಿನ ಸಮಸ್ಯೆ ಇದೆ. ಕಟ್ಟಡಗಳಿವೆ ಆದರೇ ವೈದ್ಯರು, ಶಿಕ್ಷಕರಿಲ್ಲದೆ ಸಾಕಷ್ಟು ತೊಂದರೆ ಅನುಭವಿಸುತ್ತಿದ್ದೇವೆ. ಜಿಲ್ಲೆಯಲ್ಲಿ ಶಿಶು ಮರಣ ಪ್ರಮಾಣ ಹೆಚ್ಚಾಗಿದೆ ಎಂದು ಕೇಂದ್ರ ಸಚಿವರೆದುರು ಸಮಸ್ಯೆಗಳನ್ನು ಬಿಚ್ಚಿಟ್ಟು ಸೂಕ್ತ ಕ್ರಮಕ್ಕೆ ಮನವಿ ಮಾಡಿದರು.
ಪ್ರಧಾನ ಮಂತ್ರಿ ನರೇಂದ್ರ ನೇತೃತ್ವದ ಸರ್ಕಾರ ಸಾಕಷ್ಟು ಅಭಿವೃದ್ಧಿ ಯೋಜನೆ ರೂಪಿಸಿ, ವಿಶ್ವ ಗುರು ವಾಗುವ ನಿಟ್ಟಿನಲ್ಲಿ ಕಾರ್ಯ ಮಾಡುತ್ತಿದೆ. ಸರ್ಕಾರದ ಮೇಲೆ ನಂಬಿಕೆಯಿದೆ, ಮಹತ್ವಾಕಾಂಕ್ಷೆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಬಿ.ಜಿ. ಪಾಟೀಲ, ಹಣಕಾಸು ಸಚಿವಾಲಯದ ಕಾರ್ಯದರ್ಶಿ ಸಂಜಯ್ ಲೋಹಿಯಾ, ಆಪ್ತ ಕಾರ್ಯದರ್ಶಿ ಅನಿರುದ್ಧ ಶ್ರವಣ್, ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಶಾಜಿ ಕೃಷ್ಣನ್, ಜಿಲ್ಲಾಧಿಕಾರಿ ರಾಹುಲ್ ಪಾಂಡೈ, ಜಿಲ್ಲಾ ಪಂಚಾಯಿತಿ ಸಿಇಒ ಲವೀಶ್ ಓರಾಡಿಯಾ, ಎಸ್ಪಿ ಪೃಥ್ವಿಕ್ ಶಂಕರ್ ಸೇರಿದಂತೆ ಅಧಿಕಾರಿಗಳು ಇದ್ದರು.
