AIDSO ಜಿಲ್ಲಾ ಸಂಚಾಲಕಿಯಿಂದ ಮೊಹರಂ ಶೈಲಿಯಲ್ಲಿ ಕೆಪಿಎಸ್ ಮ್ಯಾಗ್ನೆಟ್ ಶಾಲೆಯ ಕುರಿತ ಸ್ವರಚಿತ ಹಾಡು ವೈರಲ್ | ಶಿಲ್ಪಾ ಬಿಕೆ ಹಾಡಿಗೆ ಶಿಕ್ಷಣ ಪ್ರೇಮಿಗಳ ಮೆಚ್ಚುಗೆ | ಎಪ್ರಿಲ್ 10 ರಂದು ಫ್ರೀಡಂ ಪಾರ್ಕ್ ನಲ್ಲಿ ನಡೆಯಲಿದೆ ರಾಜ್ಯ ಮಟ್ಟದ ಜನ ಸಮಾವೇಶ
ಅನೀಲ ಬಸೂದೆ, ಯಾದಗಿರಿ: ರಾಜ್ಯ ಸರ್ಕಾರದ ಕೆಪಿಎಸ್ ಮ್ಯಾಗ್ನೆಟ್ ಶಾಲೆ ಯೋಜನೆಗೆ ಎಐಡಿಎಸ್ ಓ ಸಂಘಟನೆ ತೀವ್ರವಾಗಿ ವಿರೋಧಿಸುತ್ತಿದ್ದು, ಈಗಾಗಲೇ ಗ್ರಾಮೀಣ ಹಂತದಲ್ಲಿ ವಿದ್ಯಾರ್ಥಿ ಮತ್ತು ಪಾಲಕರೊಟ್ಟಿಗೆ ಸಾಕಷ್ಟು ಹೋರಾಟ ರೂಪಿಸಿ ಯೋಜನೆಗೆ ವಿರೋಧ ವ್ಯಕ್ತಪಡಿಸಲಾಗಿದೆ.
ಬಣ್ಣ ಬಣ್ಣದ ಹೆಸರೇಳಿ ತಂದಾರ ಕಾನೂನ, ಕೆಪಿಎಸ್ ಮ್ಯಾಗ್ನೆಟ್ ಇದರೆಸರಣ್ಣ ..ಇಂತಹ ಕಾನೂನ ತಂದು 40 ಸಾವಿರ ಸಾಲಿ ಮುಚ್ಚಕ್ ಮಾಡ್ಯಾರ ಪ್ಲಾನ್….! ಶ್ರೀಮಂತರ ಉಡಿಗೆ ಹಾಕ್ತಾರ ಸಾಲಿನ .. ನಮ್ಮ ಕಥಿ ಏನ, ಬಡವರು ಓದೋದು ಬ್ಯಾಡಂತೋ ಇನ್ನ, ಪಂಚಾಯಿತಿಗೊಂದು ಸಾಲಿ ಮಾಡಾಕ ಅಣ್ಣ, ತಂದಾರಾ ಸಾಲಾ ನಾ ….!
ಹೀಗೆ ಥೇಟ್ ಜನಪದ ಶೈಲಿಯ ಹಾಡು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಹಾಡಿಗೆ ಸಾಕಷ್ಟು ಮೆಚ್ಚುಗೆ ಸಹ ವ್ಯಕ್ತವಾಗಿದೆ. https://www.instagram.com/reel/DWSugVvz1fU/igsh=MWN0aTBjYWVxc2k4bQ==
ಕರ್ನಾಟಕದಾದ್ಯಂತ ಜನರ ತೀವ್ರ ವಿರೋಧದ ನಡುವೆಯೂ ಈ ಬಾರಿ ಬಜೆಟ್ ನಲ್ಲಿ ಮುಖ್ಯಮಂತ್ರಿಗಳು ಕೆಪಿಎಸ್ ಶಾಲೆಗಳ ಸ್ಥಾಪನೆಯ ಕುರಿತು ಹಾಗೂ ಕಲ್ಯಾಣ ಕರ್ನಾಟಕದಲ್ಲಿ ಈ ಶಾಲೆಗಳನ್ನು ಸ್ಥಾಪಿಸಲು ಕೆಕೆಆರ್ಡಿಬಿಯ ಹಣವನ್ನು ಬಳಸುತ್ತೇವೆಂದು ಹೇಳಿದ್ದಾರೆ. ಮೇಲ್ನೋಟಕ್ಕೆ ಈ ಹಣವನ್ನು ಹೊಸ ಶಾಲೆಗಳ ಸ್ಥಾಪನೆಗಾಗಿ ಬಳಸಲಾಗುತ್ತದೆ ಎಂದು ಬಿಂಬಿಸಲಾಗುತ್ತಿದೆ.
ಆದರೆ, ವಾಸ್ತವದಲ್ಲಿ 15 ಅಕ್ಟೋಬರ್ 2025 ರಂದು ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ ಗ್ರಾಮ ಪಂಚಾಯಿತಿಗೊಂದು ಕೆಪಿಎಸ್ ಶಾಲೆಯನ್ನು ನಿರ್ಮಿಸಿ ಅದರ ಸುತ್ತ 3 ರಿಂದ 5 ಕಿ.ಮೀ ವ್ಯಾಪ್ತಿಯಲ್ಲಿರುವ ಶಾಲೆಗಳನ್ನು ಮುಚ್ಚುಲಾಗುತ್ತದೆ ಎಂಬುದನ್ನು ಉಲ್ಲೇಖಿಸಲಾಗಿದೆ. ಅರ್ಥಾತ್ ಗ್ರಾ.ಪಂ ಗೆ ಒಂದು ಶಾಲೆ ಎಂದರೆ ಕೇವಲ 6000 ಶಾಲೆಗಳನ್ನು ಉಳಿಸಿ 40 ಸಾವಿರಕ್ಕೂ ಹೆಚ್ಚು ಸರ್ಕಾರಿ ಶಾಲೆಗಳನ್ನು ಶಾಶ್ವತವಾಗಿ ಮುಚ್ಚುವ ಉದ್ದೇಶ ಮೇಲ್ನೋ ಟಕ್ಕೆ ಕಾಣುತ್ತಿದೆ ಎನ್ನುವುದು ಎಐಡಿಎಸ್ ಓ ವಾದವಾಗಿದೆ. ಅಲ್ಲದೆ ಕೆಪಿಎಸ್ ಶಾಲೆಗಳ ನಿರ್ವಹಣೆಯನ್ನು ಹೊರಗುತ್ತಿಗೆ ಕೊಡಲಾಗುವುದು ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಮೂಲಕ ಕೆಪಿಎಸ್ ಶಾಲೆಗಳನ್ನು ಸರ್ಕಾರವೇ ಸ್ಥಾಪಿಸಿ ಕ್ರಮೇಣವಾಗಿ ಖಾಸಗಿ ಕಂಪನಿಗಳ ಮಡಿಲಿಗೆ ಹಾಕಲಾಗುತ್ತದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರಿಯಾಗಿ ಕಟ್ಟಡಗಳಿಲ್ಲದೇ ಸಾವಿರಾರು ಶಾಲೆಗಳು ಕುಸಿಯುವ ಹಂತದಲ್ಲಿವೆ. ರಾಜ್ಯದಲ್ಲಿ 59,000ಕ್ಕೂ ಅಧಿಕ ಶಿಕ್ಷಕರ ಹುದ್ದೆಗಳು ಖಾಲಿ ಇದ್ದು, ಅದರಲ್ಲಿ ಬಹುಪಾಲು ಕಲ್ಯಾಣ ಕರ್ನಾಟಕ ಭಾಗದ್ದಾಗಿವೆ. ಅಲ್ಲದೇ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಏಕೋಪಾದ್ಯಾಯ ಶಾಲೆಗಳಿರುವುದು ಈ ಭಾಗದಲ್ಲಿಯೇ. ಶುದ್ಧ ಕುಡಿಯುವ ನೀರಿಲ್ಲದೇ, ವಿದ್ಯುತ್ ಸೌಲಭ್ಯವಿಲ್ಲದೇ, ಕನಿಷ್ಠ ಬಳಕೆಗೆ ಯೋಗ್ಯವಾದ ಶೌಚಾಲಯಗಳು ಸಹ ಇಲ್ಲದೇ ನಲುಗುತ್ತಿರುವ ನಮ್ಮ ಭಾಗದ ಸರ್ಕಾರಿ ಶಾಲೆಗಳನ್ನು ಬಲಪಡಿಸುವುದು ಸರ್ಕಾರದ ಆದ್ಯ ಕರ್ತವ್ಯವಾಗಬೇಕಿತ್ತು.
ಕಿತ್ತು ತಿನ್ನುವ ಬಡತನ, ನಿರುದ್ಯೋಗ, ಅನಕ್ಷರತೆಗಳಂತಹ ಅನೇಕ ಕಾರಣಗಳಿಂದ ಹಿಂದುಳಿದ ಜಿಲ್ಲೆಗಳು ಎಂಬ ಹಣೆಪಟ್ಟಿ ಹೊತ್ತುಕೊಂಡಿರುವ ಈ ಭಾಗಕ್ಕೆ ನೈಜ ಜನಪರ ಕಾಳಜಿಯಿಂದ ಸರ್ಕಾರ ಅತಿಹೆಚ್ಚು ಮುತುವರ್ಜಿ ವಹಿಸಿ ಈ ಭಾಗದ ಶೈಕ್ಷಣಿಕ ಅಭಿವೃದ್ಧಿಗೆ ಆದ್ಯತೆ ನೀಡಬೇಕಿತ್ತು.
ಪ್ರತಿಯೊಂದು ಮಗುವಿಗೂ ಉಚಿತವಾಗಿ ಶಿಕ್ಷಣ ಸಿಗಬೇಕು ಎಂಬ ಜ್ಯೋತಿಬಾ ಫುಲೆ, ಸಾವಿತ್ರಿಬಾಯಿ ಫುಲೆ, ಈಶ್ವರ ಚಂದ್ರ ವಿದ್ಯಾಸಾಗರ್, ಪಂಡಿತ್ ತಾರಾನಾಥ್, ಕುದ್ಮುಲ್ ರಂಗರಾವ್ ರಂತಹ ಮಹಾನ್ ವ್ಯಕ್ತಿಗಳ ಆಶಯಗಳನ್ನು ಗಾಳಿಗೆ ತೂರಿ ತರುತ್ತಿರುವ ಯೋಜನೆ, ಬಡ ಮಕ್ಕಳನ್ನು ಶಾಶ್ವತವಾಗಿ ಶಿಕ್ಷಣದಿಂದ ದೂರ ಇಡುವ ಕೆಪಿಎಸ್ ಮ್ಯಾಗ್ನೆಟ್ ಯೋಜನೆಯ ವಿರುದ್ಧ ಇಡೀ ರಾಜ್ಯದಾದ್ಯಂತ ಹೋರಾಟದ ಅಲೆ ಎದ್ದಿದೆ. ಕಲ್ಯಾಣ ಕರ್ನಾಟಕ ಜಿಲ್ಲೆಗಳಾದ ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು, ವಿಜಯಪುರ, ಬಳ್ಳಾರಿ, ಕೊಪ್ಪಳ ಹಾಗೂ ವಿಜಯನಗರದ ನೂರಾರು ಹಳ್ಳಿಗಳಲ್ಲಿ ಹೋರಾಟಗಳು ನಡೆಯುತ್ತಿರುವುದು ಗಮನಾರ್ಹ.
