ಬಡಾವಣೆ ದತ್ತು ಪಡೆದು ಸ್ವಚ್ಛತೆ | ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಎನ್ ಎಸ್ ಎಸ್ ಶಿಬಿರ
ಗುರುಮಠಕಲ್: ‘ದೇಶದ ಗಡಿಯನ್ನು ಕಾಯುವುದು ಮಾತ್ರ ದೇಶಭಕ್ತಿಯಲ್ಲ. ಗ್ರಾಮಗಳ ಉದ್ಧಾರ, ಸ್ವಸ್ಥ ಸಮಾಜ ನಿರ್ಮಾಣಕ್ಕಾಗಿ ಶ್ರಮಿಸುವುದೂ ಗಡಿ ಕಾಯ್ದಂತೆ ದೇಶಭಕ್ತಿ’ ಎಂದು ಪ್ರೊ. ಜೆ.ವಿ.ಪುರುಷೋತ್ತಮ ಅಭಿಪ್ರಾಯಪಟ್ಟರು.
ಪಟ್ಟಣದ ಹರಿಜನವಾಡದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್.ಎಸ್.ಎಸ್.ಎ ಘಟಕದಿಂದ ಆಯೋಜಿಸಿದ್ದ ರಾಷ್ಟ್ರೀಯ ಸೇವಾ ಯೋಜನೆಯ ವಾರ್ಷಿಕ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ವೈಯಕ್ತಿಕ ಬೆಳವಣಿಗೆ ಜತೆಗೆ ಸಾಮಾಜಿಕ ಜವಾಬ್ದಾರಿ. ನಾಯಕತ್ವ ಮತ್ತು ನಾಗರಿಕರ ಭಾಗವಹಿಸುವಿಕೆಯನ್ನು ಉತ್ತೇಜಿಸುವ ವೇದಿಕೆಯಾಗಿದೆ ಎಂದರು.
ನಮ್ಮದು ಹಳ್ಳಿಗಳ ರಾಷ್ಟ್ರ, ಗ್ರಾಮಗಳು ಅಭಿವೃದ್ಧಿಯಾದರೆ ದೇಶ ತಾನಾಗಿಯೇ ಅಭಿವೃದ್ಧಿಯಾಗಲಿದೆ. ಹಳ್ಳಿಗಳ ಉದ್ಧಾರವಾಗದೇ ದೇಶದ ಉನ್ನತಿ ಸಾಧ್ಯವಿಲ್ಲ ಎಂದು ಎನ್ ಎಸ್ ಎಸ್ ಸಂಯೋಜನಾ ಅಧಿಕಾರಿ ಬಾಬುರಾಯ ದೊರೆ ಅಭಿಪ್ರಾಯಪಟ್ಟರು. ಗಾಂಧೀಜಿ ಕನಸಿನ ಗ್ರಾಮ ವಿಕಾಸಕ್ಕೆ ಪೂರಕವಾಗಿ ಎನ್ಎಸ್ಎಸ್ ಆರಂಭಿಸಲಾಗಿದೆ ಎಂದರು.
ಈ ವಿಶೇಷ ಶಿಬಿರವನ್ನು ಖಾಸಗಿ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರಾದ ಮಂಜುಳಾ ರವೀಂದ್ರರೆಡ್ಡಿ ಚಾಲನೆ ನೀಡಿ, ಎನ್ ಎಸ್ ಎಸ್ ರಾಷ್ಟ್ರೀಯ ಪ್ರಜ್ಞೆ ಬೆಳೆಸಲು ಸಹಾಯ ಮಾಡುತ್ತದೆ. ದೇಶದ ಉದ್ಧಾರಕ್ಕೆ ನಿಸ್ವಾರ್ಥ ಸೇವೆ ಬಹಳ ಮುಖ್ಯ. ಶಿಸ್ತು, ಸೇವಾ ಮನೋಭಾವ,ಜ್ಞಾನ ಸಂಪಾದನೆ ನಿಮ್ಮ ಗುರಿಯಾಗಬೇಕು ಎಂದರು.
ಭೀಮಶಪ್ಪ ಗುಡಿಸೆ, ಲಾಲಪ್ಪ ತಲಾರಿ ಹರಿಜನವಾಡವನ್ನು ದತ್ತು ಗ್ರಾಮವನ್ನಾಗಿ ಸ್ವೀಕರಿಸಿದ್ದಕ್ಕೆ ಧನ್ಯವಾದ ಅರ್ಪಿಸಿದರು. ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯರಾದ ಗೋವಿಂದ ಮೇಂಗಜಿ, ಎಸ್ ಡಿ ಎಂ ಸಿ ಅಧ್ಯಕ್ಷ ಭೀಮಶಪ್ಪ ಮಿನಿಂಟಿ, ಮಾಜಿ ಪ. ಪಂ. ಅಧ್ಯಕ್ಷ ಭೀಮಶಪ್ಪ ಗುಡಿಸೆ, ಲಾಲಪ್ಪ ತಲಾರಿ, ಉಪನ್ಯಾಸಕರಾದ ಮಹ್ಮದ್ ಇಮ್ರಾನ್ ಖಾಜಿ, ಮಹೇಶ್ ಚಂದಾಪೂರ, ಶ್ವೇತಾ ಎಂ.ಬಿ, ಬಿಚ್ಚಪ್ಪ. ಕೆ, ಕೃಷ್ಣ ಕೆ, ಬಾಲಪ್ಪ ಕಟ್ಟೆಲ್, ಸಂಗೀತಾ ನಾಗೂರ್, ವಿಜಯಲಕ್ಷ್ಮೀ ಪಾಟೀಲ್, ಇಮ್ತಾಯಾಜ್, ಪ್ರೇಮಲತಾ, ಶ್ರೀನಿವಾಸ, ಪ್ರವೀಣ. ಉಪಸ್ಥಿತರಿದ್ದರು. ಶಿಬಿರಾರ್ಥಿಗಳಾದ ಜ್ಯೋತಿ ಅವರ ತಂಡ ಶಿಬಿರ ಗೀತೆ ಹಾಡಿ, ರವಿ ಕಾರ್ಯಕ್ರಮ ನಿರ್ವಹಿಸಿ, ವಾಸುದೇವ ಸ್ವಾಗತಿಸಿ, ಅನುಷಾ ವಂದಿಸಿದರು.
