ಕಾಂಗ್ರೆಸ್ ಪಕ್ಷ ಕಾರ್ಯಕರ್ತರ ಜೆಡಿಎಸ್ ಸೇರ್ಪಡೆ ಕಾರ್ಯಕ್ರಮ | ಗುರುಮಠಕಲ್ ಶಾಸಕರ ಜನ ಸಂಪರ್ಕ ಕಚೇರಿಯಲ್ಲಿ ತೆನೆ ಹೊತ್ತ ಮಹಿಳೆ ಯತ್ತ 7 ಗ್ರಾಮದ ನೂರಾರು ಜನ | ಸಂಘಟನೆಯಲ್ಲಿ ತೊಡಗಿಕೊಳ್ಳಲು ಕಂದಕೂರ ಸಲಹೆ | ಪಟ್ಟಣದಲ್ಲಿ 40 ಸಾವಿರ ನೋಂದಣಿಗೆ ಶ್ಲಾಘನೆ
ಕಾಂಗ್ರೆಸ್ ನವರು 50 ವರ್ಷ ಶಾಸಕ, ಮಂತ್ರಿಯಾಗಿ ಒಮ್ಮೆಯಾದರೂ ಹತ್ತಿಕುಣಿ, ಸೌದಾಗರ ಡ್ಯಾಂ ಬಗ್ಗೆ ಮಾತನಾಡಿದ್ದಾರಾ?.ಈಗ ಬಹಳ ಜನ ಹೊಸ ಹೊಸ ಬಟ್ಟೆ ಹಾಕಿ ಏನೇನೊ ಹೇಳ್ತಿದ್ದಾರೆ ಶುಭವಾಗಲಿ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಹಿಂದೆ ಜನ ಗುರುಮಠಕಲ್ ಎಂದು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದರು. ತಲೆತಗ್ಗಿಸುವ ಪರಿಸ್ಥಿತಿಯಿತ್ತು, ಇಂದು ರಾಜ್ಯದ ಯಾವುದೇ ಮೂಲೆಗೆ ಹೋಗಿ ಗುರುಮಠಕಲ್ ಹೆಸರು ಹೇಳಿದರೆ ಗೌರವ ಸಿಗುವ ಕೆಲಸ ಮಾಡಿರುವೆ – ಶರಣಗೌಡ ಕಂದಕೂರ, ಶಾಸಕರು.
ಗುರುಮಠಕಲ್: ಯಾರದೊ ಹೆಸರು ಹೇಳಿಕೊಂಡು, ಸಿಂಪತಿ ಗಿಟ್ಟಿಸಿಕೊಂಡು ಶಾಸಕರಾಗಿಲ್ಲ. ಸುಮಾರು ವರ್ಷಗಳಿಂದ ಸತತ ಹೋರಾಟ ಮಾಡಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ಬಂದಿರುವುದಾ ಗಿ ಶಾಸಕ ಶರಣಗೌಡ ಕಂದಕೂರ ಹೇಳಿದರು.
ಶಾಸಕರ ಜನಸಂಪರ್ಕ ಕಚೇರಿಯಲ್ಲಿ ಹೋರುಂಚಾ, ಯರಗೋಳ, ಗ್ರಾಮ ಸೈದಾಪುರ, ಬದ್ದೇಪಲ್ಲಿ, ತುರಕನದೊಡ್ಡಿ, ಸಂಗ್ವಾರ , ಹಿರೆನೂರ 7 ಗ್ರಾಮದ 250 ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದರು.
ಪಕ್ಷದ ಕಾರ್ಯಕರ್ತರು ನಮ್ಮ ಕುಟುಂಬದ ಸದಸ್ಯರಂತೆ, ನಿಮ್ಮ ಕಷ್ಟ ಸುಖದಲ್ಲಿ ಜೊತೆಗಿರುತ್ತೆನೆ. ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಕಾರ್ಯ ಮುಖಂಡರು ಮಾಡಬೇಕು ಎಂದು ಹೇಳಿದರು. ನಾನೀಗ ಚುನಾವಣೆ ಮೂಡಲಿಲ್ಲ, ಅಭಿವೃದ್ಧಿ ಮೂಡಲ್ಲಿದ್ದೇನೆ ಎಂದರು.
ಹಿಂದಿನ ತಮ್ಮ ಹೇಳಿಕೆಗಳಿಗೆ ಈಗಲೂ ಬದ್ಧ. ಕಡೇಚೂರು – ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಕೆಮಿಕಲ್ ಫ್ಯಾಕ್ಟರಿಯಿಂದ ತೊಂದರೆ ಬಗ್ಗೆ ಸದನದಲ್ಲಿ ಗಮನ ಸೆಳೆದಿದ್ದರಿಂದ ಕೈಬಿಡಲಾಗಿದೆ. ಬೇರೆಯವರು ತಾವು ಮಾಡಿರಿ ಎಂದು ಹೇಳಿಕೊಳ್ಳುತ್ತಿದ್ದಾರೆ ಕ್ಷೇತ್ರದ ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ ಎಂದರು.
ಬ್ಲಾಕ್ ಮೇಲ್ ಮಾಡಿ ಹೊರ ಹೋಗುವವರನ್ನು ನಿಲ್ಲಿಸಿಲ್ಲ. ಪಕ್ಷ ಮತ್ತು ಕ್ಷೇತ್ರದ ಅಭಿವೃದ್ಧಿಗೆ ತಮ್ಮ ಜೊತೆಗಿರುವವರ ಪರವಾಗಿರುವೆ. ರಾಜಕೀಯ ಹಣೆಬರಹ ಯಾವ ಒಬ್ಬ ಮುಖಂಡ ಬರೆಯಲು ಸಾಧ್ಯವಿಲ್ಲ. ಕ್ಷೇತ್ರದ ಜನರು, ಕಾರ್ಯಕರ್ತರು ಬರೆಯಲು ಸಾಧ್ಯ ಎಂದರು.
ಮೂರು ವರ್ಷದಿಂದ ಕುಡಿಯಾಕ್ ನೀರ್ ಕೊಟ್ಟಿಲ್ಲ, 72 ಕೋಟಿ ಕೊಡ್ತಿರಾ? : ಕ್ಷೇತ್ರದ ಜನರಿಗೆ ಕುಡಿಯಾಕ್ ನೀರ್ ಕೊಟ್ಟಿಲ್ಲ ನೀವು, ಹತ್ತಿಕುಣಿ, ಸೌದಾಗರ ಜಲಾಶಯಕ್ಕೆ 72 ಕೋಟಿ ಕೊಡ್ತೀರಾ ಎಂದು ವ್ಯಂಗ್ಯವಾಡಿದರು. ಈ ಅನುದಾನ ಬಿಡುಗಡೆಯಾಗಲು ಸಚಿವ ವಿ. ಸೋಮಣ್ಣ ಅವರ ಆಶೀರ್ವಾದ ಎಂದು ಹೇಳಿದರು. ಉಪ ಮುಖ್ಯಮಂತ್ರಿ ಅವರ ಗಮನಕ್ಕೆ ತಂದಾಗ ಆಯ್ತು ಮಾಡೋಣ ಎಂದಿದ್ದರು ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಬಂದ ಮೇಲೆ ಯಾವ ಸಚಿವರು ತೊಂದರೆ ಕೊಟ್ಟಾರ, ಯಾರು ಅಭಿವೃದ್ಧಿಯಲ್ಲಿ ಕೈಯಾಡಿಸಿದ್ದಾರೆ ಎನ್ನುವದು ಜನರ ಬಳಿಯೇ ಬಂದು ಹೇಳುವೆ. ಪಿಡಿಓಗಳು ಮೊಬೈಲ್ ಎತ್ತಲ್ಲ, ತಾಲೂಕು ಪಂಚಾಯತ್ ಅಧಿಕಾರಿ ಮಾತು ಪಿಡಿಓ ಕೇಳುತ್ತಿಲ್ಲ, ಜಿಲ್ಲಾ ಪಂಚಾಯತ್ ಅಧಿಕಾರಿ ಮಾತು ತಾಲೂಕು ಅಧಿಕಾರಿ ಕೇಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಭವಿಷ್ಯ ಹಾಳು ಮಾಡಿಕೊಳ್ಳುವ ನಿರ್ಧಾರ ತೆಗೆದುಕೊಳ್ಳದಿರಿ: ಅನೇಕರು ವಿಷ ಬೀಜ ಬಿತ್ತುವ ಕೆಲಸ ಮಾಡಿ, ತಲೆ ಕೆಡಿಸಲು ಬರುತ್ತಾರೆ, ಶರಣಗೌಡ ನಂತಹ ಶಾಸಕ ಬೇಕಾ ಇಲ್ಲವೇ ಎನ್ನುವುದನ್ನು ನಿರ್ಧಾರ ಮಾಡಿ ಎಂದರು. ಜನರು ತಲೆತಗ್ಗಿಸುವ ಕೆಲಸ ತಮ್ಮ ತಂದೆ ಮಾಜಿ ಶಾಸಕರಾದ ದಿ.ನಾಗನಗೌಡ ಅವರೂ ಮಾಡಿಲ್ಲ, ತಾನು ಮಾಡಲ್ಲ ಎಂದರು.
ಆರ್ ಎಸ್ ಎಸ್, ಬಿಜೆಪಿ ಜೊತೆ ಬಾಂಧವ್ಯದಿಂದಿರಿ : ರಾಜ್ಯದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿ ಇದ್ದು, ಕಾರ್ಯಕರ್ತರು ಹಾಗೂ ಮುಖಂಡರು ಆರ್ ಎಸ್ ಎಸ್ ಮತ್ತು ಬಿಜೆಪಿ ಅವರೊಂದಿಗೆ ಬಾಂಧವ್ಯದಿಂದಿರಲು ಶಾಸಕರು ಕರೆ ನೀಡಿದರು. ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಣ್ಣ ಇರಲಿ ಎನ್ನುವ ಅಭಿಪ್ರಾಯ ವ್ಯಕ್ತಪಡಿಸಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಶುಭಾಷಶ್ಚಂದ್ರ ಕಟಕಟಿ ಮಾತನಾಡಿ, ಶಾಸಕರ ಬಗ್ಗೆ ಆಧಾರ ರಹಿತ ಆರೋಪ ಮಾಡಿದರೆ ಸುಮ್ಮನಿರಲ್ಲ ಎಂದು ಗುಡುಗಿದರು. ಕಾಂಗ್ರೆಸ್ ನಾಯಕರು ಟೀಕೆ ಟಿಪ್ಪಣಿ ಮಾಡುವ ಮೊದಲು ನಿಜಾಂಶ ತಿಳಿದುಕೊಳ್ಳಲು ಸಲಹೆ ನೀಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷರು ಮೊದಲು ಕನ್ನಡ ಕಲಿಯಬೇಕು. ಮಾತನಾಡುವ ಪದ್ಧತಿ ಕಲಿಯಲಿ. ನಾಲಿಗೆ ಹಿಡಿತದಲ್ಲಿಟ್ಟು ಕೊಂಡು ಮಾತನಾಡಿ ಎಂದು ಎಚ್ಚರಿಕೆ ನೀಡಿದರು. 40% ಮಾತನಾಡುವವರು ತಾಕತ್ತಿದ್ದರೆ ಸಾಬೀತು ಮಾಡಲಿ ಎಂದರು. ಕಲ್ಯಾಣ ಕರ್ನಾಟಕದಲ್ಲಿ ಹೆಸರು ಮಾಡಿರುವ ಯುವ ನಾಯಕನ ಯಶಸ್ಸ ಸಹಿಸಲು ಆಗದೇ ಈ ರೀತಿ ಮಾತನಾಡುತ್ತಿದ್ದಾರೆ ಎಂದು ಕೈ ನಾಯಕರು ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟಣ ಪಂಚಾಯಿತಿ ಮಾಜಿ ಅಧ್ಯಕ್ಷ ಭೀಮಶಪ್ಪ ಗೂಡ್ಸೆ ಮಾತನಾಡಿ, ಬೇರೆ ಪಕ್ಷ ಗಳಿಂದ ನೊಂದು ಜೆಡಿಎಸ್ ಶಾಸಕರ ಕಾರ್ಯವೈಖರಿ ಮೆಚ್ಚಿ ಜನರು ಸೇರ್ಪಡೆಯಾಗುತ್ತಿದ್ದಾರೆ ಎಂದರು. ಕೇವಲ ಅಭಿವೃದ್ಧಿಯೇ ಶಾಸಕ ಮಂತ್ರ, ಮಿನಿ ವಿಧಾನಸೌಧ ತಂದು ಈಗಾಗಲೇ ಕಾಮಗಾರಿ ನಡೆಯುತ್ತಿದೆ. ಕ್ಷೇತ್ರದ ಜನರ ಪುಣ್ಯ, ಈ ಕ್ಷೇತ್ರಕ್ಕೆ ಸ್ಥಳೀಯ ಶಾಸಕರು ಸಿಕ್ಕಿದ್ದಾರೆ. ಜನಪರ ಕಾಳಜಿಯುಳ್ಳರಾಗಿದ್ದಾರೆ ಎಂದರು. ಟೀಮ್ ಎಸ್ ಎನ್ ಕೆ ಅಧ್ಯಕ್ಷ ನರಸಪ್ಪ ಬದ್ದೇಪಲ್ಲಿ ಮಾತನಾಡಿದರು.
ಪುರಸಭೆ ಮಾಜಿ ಅಧ್ಯಕ್ಷ ಪಾಪಣ್ಣ ಮನ್ನೆ, ಶರಣು ಅವಂಟಿ, ಬ್ಲಾಕ್ ಅಧ್ಯಕ್ಷ ಪ್ರಕಾಶ್ ನೀರಟಿ, ರವಿಂದ್ರ ರೆಡ್ಡಿ ಗೋವಿನೋಳ್, ರಾಮಣ್ಣ, ಬಸ್ಸಣ್ಣ ದೇವರಹಳ್ಳಿ. ಮಲ್ಲನಗೌಡ ಕೌಳುರ, ಅಜಯ್ ರೆಡ್ಡಿ ಯಲ್ಹೇರಿ, ಈಶ್ವರ ನಾಯಕ, ಗುರುನಾಥ ರೆಡ್ಡಿ ಸೇರಿದಂತೆ ಹಿರಿಯ ಮುಖಂಡರು ವೇದಿಕೆಯಲ್ಲಿದ್ದರು. ಯುವ ಮುಖಂಡ ಮಲ್ಲಿಕಾರ್ಜುನ ಅರುಣಿ ಅವರು ಸ್ವಾಗತಿಸಿ, ನಿರೂಪಿಸಿದರು.

ಕಾಂಗ್ರೆಸ್ ನವರು 50 ವರ್ಷ ಶಾಸಕ, ಮಂತ್ರಿಯಾಗಿ ಒಮ್ಮೆಯಾದರೂ ಹತ್ತಿಕುಣಿ, ಸೌದಾಗರ ಡ್ಯಾಂ ಬಗ್ಗೆ ಮಾತನಾಡಿದ್ದಾರಾ?.ಈಗ ಬಹಳ ಜನ ಹೊಸ ಹೊಸ ಬಟ್ಟೆ ಹಾಕಿ ಏನೇನೊ ಹೇಳ್ತಿದ್ದಾರೆ ಶುಭವಾಗಲಿ. ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ. ಹಿಂದೆ ಜನ ಗುರುಮಠಕಲ್ ಎಂದು ಹೇಳಿಕೊಳ್ಳಲು ಮುಜುಗರ ಪಡುತ್ತಿದ್ದರು. ತಲೆತಗ್ಗಿಸುವ ಪರಿಸ್ಥಿತಿಯಿತ್ತು, ಇಂದು ರಾಜ್ಯದ ಯಾವುದೇ ಮೂಲೆಗೆ ಹೋಗಿ ಗುರುಮಠಕಲ್ ಹೆಸರು ಹೇಳಿದರೆ ಗೌರವ ಸಿಗುವ ಕೆಲಸ ಮಾಡಿರುವೆ – ಶರಣಗೌಡ ಕಂದಕೂರ, ಶಾಸಕರು.