ಗುರುಮಠಕಲ್: ಕೆಲಸ ಹುಡುಕಿಕೊಂಡು ಮಹಾನಗರಗಳಿಗೆ ವಲಸೆ ಹೋಗಬೇಡಿ ನಿಮ್ಮೂರಲ್ಲಿಯೇ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡಿ ಎಂದು ಪುಟಪಾಕ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಭೀಮರಾಯ ಅವರು ತಿಳಿಸಿದರು.
ಗುರುಮಠಕಲ್ ತಾಲೂಕಿನ ಪುಟಪಾಕ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಂದಕ ಹೂಳು ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ಮಾತನಾಡಿ, ಮಹಾನಗರಗಳಿಗೆ ವಲಸೆ ಹೋಗುವುದನ್ನು ತಪ್ಪಿಸಲು ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ. ಎಲ್ಲರೂ ಕಾಮಗಾರಿಯಲ್ಲಿ ಭಾಗವಹಿಸಿ ಎಂದರು.
ಒಂದು ಕುಟುಂಬಕ್ಕೆ ನೂರು ದಿನಗಳ ಕೆಲಸ, ಗಂಡು ಹೆಣ್ಣಿಗೂ ಸಮಾನ ಕೂಲಿ ದರ 370 ರೂಪಾಯಿ, ಎರಡು ಬಾರಿ ಎನ್ಎಂಎಂಎಸ್ ಹಾಜರಾತಿ ಕಡ್ಡಾಯ ಎಂದರು. ಕೂಸಿನ ಮನೆಯಲ್ಲಿ ತಮ್ಮ ಮಕ್ಕಳನ್ನು ಬಿಟ್ಟು ಬನ್ನಿ, ತಾಪಮಾನ ಹೆಚ್ಚಾಗಿರುವುದರಿಂದ ಬೆಳಿಗ್ಗೆ ಬೇಗ ಬಂದು ಕೆಲಸ ಮುಗಿಸುವಂತೆ ಹೇಳಿದರು.
ಈ ವೇಳೆ ಐಇಸಿ ರಾಘವೇಂದ್ರ, ರಾಜೀವ ಗಾಂಧಿ ಪಂಚಾಯತ್ ರಾಜ್ ಫೆಲೋ ಬಸವರಾಜ, ಬಿ ಎಫ್ ಕಾಮಣ್ಣ ಟಿ, ಜಿಕೆ ಎಮ್, ಕೂಲಿಕಾರರು ಇದ್ದರು.
