ಬ್ಲಾಕ್ ಯುವ ಮುಖಂಡರಿಂದ ಪತ್ರಿಕಾಗೋಷ್ಠಿ | ಸ್ಥಳೀಯರಿಗೆ ಎಂಎಲ್ಸಿ ಸ್ಥಾನ ನೀಡಿ
ಗುರುಮಠಕಲ್: ಕಲ್ಯಾಣ ಕರ್ನಾಟಕದ ಪ್ರಭಾವಿ ನಾಯಕ ಪ್ರಿಯಾಂಕ್ ಖರ್ಗೆ ಅವರಿಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡಿದರೆ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದು ಯುವ ಬ್ಲಾಕ್ ಅಧ್ಯಕ್ಷ ಆನಂದ ಪೂಜಾರಿ ಯಂಪಾಡ ಹೇಳಿದರು.
ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಸ್ಥಳೀಯ ನಾಯಕರಿಗೆ ಸಹ ಎಂಎಲ್ಸಿ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದ್ದಾರೆ. ಇದರಿಂದ ಕಾಂಗ್ರೆಸ್ ಭದ್ರಕೋಟೆಯನ್ನು ಪುನಃ ಕಟ್ಟಿ ಪಕ್ಷ ಸಂಘಟಿಸಿ ಅಧಿಕಾರಕ್ಕೆ ಬರಲು ಸಾಧ್ಯ ಈ ನಿಟ್ಟಿನಲ್ಲಿ ಹೈಕಮಾಂಡ್ ಚಿಂತಿಸಬೇಕು ಎಂದು ಹೇಳಿದರು.
ಗುರುಮಠಕಲ್ ಕ್ಷೇತ್ರಕ್ಕೆ ಕಾಂಗ್ರೆಸ್ ಸಾಕಷ್ಟು ಕೊಡುಗೆ ನೀಡಿದೆ. ಹತ್ತಿಕುಣಿ ಜಲಾಶಯ ಅಭಿವೃದ್ಧಿಗೆ ಅನುದಾನ ಬಿಡುಗಡೆಗೆ ಪ್ರಿಯಾಂಕ ಖರ್ಗೆ ಅವರು ಸಹಕಾರ ನೀಡಿದ್ದಾರೆ. ಹಾಗಾಗಿ ಅನುದಾನ ಬಂದಿದೆ ಎಂದು ಹಿಂದುಳಿದ ವರ್ಗಗಳ ಬ್ಲಾಕ್ ಅಧ್ಯಕ್ಷ ಚನ್ನಬಸಪ್ಪ ಗಾಜರಕೋಟ ಹೇಳಿದರು. ವಿರೋಧಿಗಳು ನಮ್ಮ ನಾಯಕರ ಹೆಸರು ಕೆಡಿಸುವ ಉದ್ದೇಶದಿಂದ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತಿದ್ದಾರೆ ಎಂದರು.
ಶರಣಪ್ಪ ತಾತಳಗೇರಾ ಬಗರ್ ಹುಕುಂ ಸಮಿತಿ ಸದಸ್ಯ, ಭೀಮಶಪ್ಪ ಶನಿವಾರಂ, ಹಣಮಂತ ಶನಿವಾರಂ, ನರೇಶ್ ಮುದಿರಾಜ, ಹುಸೇನಪ್ಪ, ಸೈಯದ್ ಕರೀಮ್, ನಾಗಪ್ಪ ಕೆ.ಹೊಸ್ಸಳ್ಳಿ, ಭೀಮಾಶಂಕರ ಗಾಜರಕೋಟ, ಕಿಷ್ಟಪ್ಪ, ಮಲ್ಲಿಕಾರ್ಜುನ ಇತರರು ಇದ್ದರು.
