ಚಂದನದ ‘ಥಟ್ ಅಂತ ಹೇಳಿ’ ಸ್ಪರ್ದೆ | ಗಡಿ ತಾಲೂಕು ಗುರುಮಠಕಲ್ ನ ಗಾಜರಕೋಟ ಗ್ರಾಮದ ವ್ಯಕ್ತಿಯ ಪ್ರತಿಭೆ

ಯಾದಗಿರಿ: ಪ್ರಪಂಚದ ಯಾವುದೇ ಭೌತಿಕ ಸಂಪತ್ತು ಕಳ್ಳತನವಾಗಬಹುದು ಅಥವಾ ನಾಶವಾಗಬಹುದು, ಆದರೆ ಜ್ಞಾನವೆಂಬ ಸಂಪತ್ತು ಎಂದಿಗೂ ಕರಗುವುದಿಲ್ಲ. ಜ್ಞಾನದಿಂದಲೇ ಮುಕ್ತಿ ಮುಕ್ತಿ, ಪರಮಶಾಂತಿ ದೊರೆಯುವುದು ಎಂದು ಅರಿವು-ಆಚಾರ ಸದ್ಭಾವನಾ ಸಂಸ್ಥೆಯ ಮುಖ್ಯಸ್ಥ ಶಂಭುಲಿಂಗಪ್ಪ ಅರುಣಿ ಹೇಳಿದರು. ಜಿಲ್ಲೆಯ ಗುರುಮಠಕಲ್ ತಾಲೂಕಿನ ಗಾಜರಕೋಟ ಗ್ರಾಮದ ಶಿವಶರಣ ಚನ್ನಪ್ಪಯ್ಯನವರ ಮಹಾಮನೆಯಲ್ಲಿ ಚಂದನ ವಾಹಿನಿ ಪ್ರಸ್ತುತ ಪಡಿಸುತ್ತಿರುವ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನಗಳಿಸಿದ ಗ್ರಾಮದ ಪ್ರತಿಭೆ ತುಳಜಾರಾಮ ಪತಂಗೆ ಅವರಿಗೆ ಸನ್ಮಾನಿಸಿ ಮಾತನಾಡಿದರು.

ವ್ಯಕ್ತಿಯಲ್ಲಿನ ಜ್ಞಾನ-ವಿಜ್ಞಾನಗಳ ಸಮೀಕರಣವೇ ಪ್ರತಿಭೆಯಾಗಿ ಹೊರಹೊಮ್ಮುವುದಾಗಿದೆ, ಎಲೆ ಮರೆಯ ಕಾಯಿಯಂತಿರುವ ಪ್ರತಿಭಾ ವಂತರನ್ನು ಗೌರವಿಸಿ ಸನ್ಮಾನಿಸಿ ಪ್ರೋತ್ಸಾಹಿಸುವ ಕಾರ್ಯ ಎಲ್ಲರಿಂದ ಆಗಬೇಕು, ಸದಾ ಕ್ರೀಯಾಶೀಲತೆ ಓದು ಬರಹದಲ್ಲಿ ತೊಡಗಿಸಿಕೊಂಡ ತುಳಜಾರಾಮ ಪತಂಗೆ ಚಂದನ ವಾಹಿನಿಯಲ್ಲಿ ಡಾ. ನಾ. ಸೋಮೇಶ್ವರ ನಡೆಸಿಕೊಡುವ ಥಟ್ ಅಂತ ಹೇಳಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಗಳಿಸಿದ್ದಾರೆ, ಇದು ಅತ್ಯಂತ ಹೆಮ್ಮೆಯ ಸಂಗತಿಯಾಗಿದೆ. ಚಿಕ್ಕಂದಿನಿಂದ ತುಳಜಾರಂ ವೃತ್ತ ಪತ್ರಿಕೆ, ಮಾಸಿಕ ಹಾಗೂ ದೂರದರ್ಶನದ ಕ್ಷಿಜ್‌ಗಳಲ್ಲಿ ವಿಶೇಷ ಆಸ್ತಿಯಿಂದ ಭಾಗವಹಿಸುತ್ತಾ ಅತ್ಯಂತ ಕ್ರಿಯಾಶೀಲತೆಯಿಂದ ಇರುವುದನ್ನು ನೋಡಿದ್ದೇವೆ, ಅವರು ಮುಂದಿನ ದಿನಗಳಲ್ಲಿ ಇಂತಹ ಸ್ಪರ್ಧಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಉನ್ನತ ಸ್ಥಾನ ಗಳಿಸಿ ಊರು, ಜಿಲ್ಲೆಗೆ, ರಾಜ್ಯಕ್ಕೆ ಕೀರ್ತಿಯನ್ನು ತರುವಂತಾಗಲಿ ಎಂದು ಈ ವೇಳೆ ಆಶಿಸುತ್ತೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ರಂಗಾಚಾರ್ಯ ಜ್ಯೋಷಿ ಮಾತನಾಡಿ, ಕ್ರಿಯಾಶೀಲತೆ ಮತ್ತು ಉತ್ತಮ ಹವ್ಯಾಸಗಳಿಂದ ವ್ಯಕ್ತಿತ್ವ ವಿಕಸನವಾಗುವುದು, ಈ ದಿಸೆಯಲ್ಲಿ ಸಾಗುತ್ತಿರುವ ಪ್ರತಿಭೆ ತುಳಜಾರಂ ಅವರ ಈ ಸಾಧನೆ ಇತರರಿಗೆ ಮಾದರಿಯಾದೆ ಎಂದು ಹೇಳಿದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ತುಳಜಾರಾಮ ಪತಂಗೆ, ಇದೇ ಜುಲೈ 3ರಂದು ಬೆಂಗಳೂರಿನ ಚಂದನ ವಾಹಿನಿ ಸ್ಟುಡಿಯೋದಲ್ಲಿ ಡಾ. ನಾ ಸೋಮೇಶ್ವರ ನಡೆಸಿಕೊಡುವ ‘ಥಟ್ ಅಂತ ಹೇಳಿ’ ರಸಪ್ರಶ್ನೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಅಧ್ಬುತ ಅನುಭವವಾಗಿತ್ತು, ಕಾರ್ಯಕ್ರಮದಲ್ಲಿ ಅತಿ ಹೆಚ್ಚು ಪ್ರಶ್ನೆಗಳಿಗೆ ಉತ್ತರಿಸಿ, 11 ಪುಸ್ತಕಗಳ ಜೊತೆಗೆ ಪ್ರಥಮ ಬಹುಮಾನ ದೊರೆತಿದೆ, ಸರಣಿಯನ್ನು ಚಂದನ ವಾಹಿನಿಯಲ್ಲಿ ಜು.21, 22 ರಂದು ಎರಡೂ ದಿನಗಳು ಬಿತ್ತರವಾಗಿದೆ, ಗ್ರಾಮದಲ್ಲಿ ಹಿರಿಯರು ಹಾಗೂ ಸ್ನೇಹಿತರ ಬಳಗ ವಿಶೇಷವಾಗಿ ಸನ್ಮಾನಿಸಿದ್ದಾರೆ, ಎಲ್ಲರಿಗೂ ಆಭಾರಿಯಾಗಿದ್ದೇನೆ ಎಂದರು. ಈ ವೇಳೆ ಶಾಂತವೀರಯ್ಯಸ್ವಾಮಿ ಪತ್ರಿಮಠ, ಓಂಕಾರ ವಿಶ್ವಕರ್ಮ, ಅಯ್ಯಪ್ಪ ವಿಶ್ವಕರ್ಮ, ಈಶಪ್ಪ ಮಾಲಿಪಾಟೀಲ ಮತ್ತಿತರರು ಇದ್ದರು.

Spread the love

Leave a Reply

Your email address will not be published. Required fields are marked *

error: Content is protected !!