ಶರಣಪ್ಪ ಮಾನೆಗಾರ ಅಭಿಮಾನಿಗಳಿಂದ 57ನೇ ಜನ್ಮದಿನ ಹಿನ್ನೆಲೆ ಶರಣ ಸ್ಪೂರ್ತಿ ಜನಹಿತ ಪಯಣ ಕಾರ್ಯಕ್ರಮ | ಅಂಬಿಗರ ಚೌಡಯ್ಯ ಗುರುಪೀಠದ ಪೂಜ್ಯ ಶ್ರೀ ಜಗದ್ಗುರು ಶಾಂತಬೀಷ್ಮ ಚೌಡಯ್ಯ ಮಹಾಸ್ವಾಮಿ ಸೇರಿ ಮಠಾಧೀಶರು, ಗಣ್ಯರು ಭಾಗಿ | ಕೇಕ್ ಬದಲು ಹಸಿರು ಶಾಲು, ಪರಿಸರ ರಕ್ಷಣೆಗೆ ಪಣ
ಗುರುಮಠಕಲ್: ಹುಟ್ಟುಹಬ್ಬವೆಂದರೆ ಹಾರ–ತುರಾಯಿ, ಕೇಕ್ ಕತ್ತರಿಸಿ ಸಂಭ್ರಮಿಸುವುದು ಸಾಮಾನ್ಯ. ಆದರೆ ಗುರುಮಠಕಲ್ ನಗರದ ವಿಎನ್ಆರ್ ಫಂಕ್ಷನ್ ಸಭಾಂಗಣದಲ್ಲಿ ನಡೆದ ಕಾಂಗ್ರೆಸ್ ಹಿರಿಯ ಮುಖಂಡ, ಕೆಪಿಸಿಸಿ ಸದಸ್ಯ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಸದಸ್ಯ ಶರಣಪ್ಪ ಮಾನೇಗಾರ ಅವರ ಹುಟ್ಟುಹಬ್ಬದ ಆಚರಣೆ ಇದಕ್ಕೆ ಸಂಪೂರ್ಣ ಭಿನ್ನವಾಗಿತ್ತು. ತಾಲೂಕಿನಲ್ಲಿ ಬರದ ಛಾಯೆ ಆವರಿಸಿರುವ ಸಂದರ್ಭದಲ್ಲಿ ರೈತರು ಸಂಕಷ್ಟದಲ್ಲಿರುವುದನ್ನು ಮನಗಂಡು ಹಾರ–ತುರಾಯಿ ಸ್ವೀಕರಿಸದೇ, ಕೇಕ್ ಕತ್ತರಿಸದೇ ವೇದಿಕೆಯಲ್ಲಿದ್ದ ಎಲ್ಲರೂ ಹಸಿರು ಶಾಲು ಧರಿಸಿ ಪರಿಸರ ಸಂರಕ್ಷಣೆ ಹಾಗೂ ಸಸಿ ನೆಡುವ ಸಂಕಲ್ಪ ಮಾಡಿದ್ದು ವಿಶೇಷವಾಗಿತ್ತು.
ಶರಣಪ್ಪ ಮಾನೇಗಾರ ಅವರ ಹುಟ್ಟುಹಬ್ಬದ ಪ್ರಯುಕ್ತ ಆಯೋಜಿಸಿದ್ದ ‘ಶರಣ ಸ್ಪೂರ್ತಿ ಜನಹಿತ ಪಯಣ’ ಕಾರ್ಯಕ್ರಮದಲ್ಲಿ ಹಸಿರು ಶಾಲು ಕೇವಲ ಗೌರವದ ಸಂಕೇತವಾಗಿರದೆ, ಪರಿಸರ ಸಂರಕ್ಷಣೆಯ ಸಂಕೇತವಾಗಿತ್ತು.
ಈ ಸಂದರ್ಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಶರಣಪ್ಪ ಮಾನೇಗಾರ, ರೈತರು ಸಂಕಷ್ಟದಲ್ಲಿದ್ದಾರೆ. ಮಳೆ ಕೊರತೆಯಿಂದ ಕೃಷಿ ಚಟುವಟಿಕೆಗಳು ಹದಗೆಟ್ಟಿದ್ದು, ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಗುರುಮಠಕಲ್ ತಾಲೂಕನ್ನು ಬರಪೀಡಿತ ತಾಲೂಕು ಎಂದು ಘೋಷಿಸಲು ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಠರಾವು ಕೈಗೊಳ್ಳುವ ನಿರ್ಣಯವನ್ನು ಅಭಿಮಾನಿಗಳು ಮಾಡಿದ್ದಾರೆ ಎಂದು ಹೇಳಿದರು.
ಪರಿಸರ ನಾಶದಿಂದ ಮಳೆಯ ಪ್ರಮಾಣ ಕಡಿಮೆಯಾಗುತ್ತಿದೆ. ಮರಗಳನ್ನು ಕಡಿದು ಪರಿಸರವನ್ನು ನಾಶ ಮಾಡುತ್ತಿರುವ ಪರಿಣಾಮ ಮಳೆಯ ಕೊರತೆ ಎದುರಾಗುತ್ತಿದೆ. ಆದ್ದರಿಂದ ಹುಟ್ಟುಹಬ್ಬವನ್ನು ಕೇವಲ ವೈಯಕ್ತಿಕ ಸಂಭ್ರಮಕ್ಕೆ ಸೀಮಿತಗೊಳಿಸದೆ, ಪ್ರತಿಯೊಬ್ಬರೂ ಕನಿಷ್ಠ ಒಂದು ಸಸಿಯನ್ನು ನೆಟ್ಟು ಅದನ್ನು ಪೋಷಿಸುವ ಸಂಕಲ್ಪ ಮಾಡಬೇಕು ಎಂದು ಕರೆ ನೀಡಿದರು.
ನರಸೀಪುರ ಅಂಬಿಗರ ಚೌಡಯ್ಯ ಗುರುಪೀಠದ ಪರಮಪೂಜ್ಯ ಜಗದ್ಗುರು ಶಾಂತಬೀಷ್ಮ ಚೌಡಯ್ಯ ಮಹಾಸ್ವಾಮಿಗಳು ಸನ್ಮಾನಿಸಿ ಆಶೀರ್ವಚನ ನೀಡಿ, ಮಾನೇಗಾರ ಅವರು ಅಪರೂಪದ ನಾಯಕ. ಸರಳತೆ ಹಾಗೂ ಜನರ ಪ್ರೀತಿಯಿಂದ ಈ ಮಟ್ಟಕ್ಕೆ ಬೆಳೆದಿದ್ದಾರೆ. ಅವರ ಜನಸೇವೆಯ ಜೀವನ ಮುಂದೆಯೂ ಯಶಸ್ವಿಯಾಗಿ ಸಾಗಲಿ ಎಂದು ಆಶೀರ್ವದಿಸಿದರು.
‘ಬರದ ಸಂದರ್ಭದಲ್ಲಿ ಕೇಕ್ ಕತ್ತರಿಸಿ ಸಂಭ್ರಮಿಸುವುದಕ್ಕಿಂತ, ಹಸಿರು ಬೆಳೆಸುವ ಸಂಕಲ್ಪ ಮಾಡುವುದು ಅರ್ಥಪೂರ್ಣ’ ಎಂಬ ಸಂದೇಶವನ್ನು ಕಾರ್ಯಕ್ರಮ ಸಾರಿತು. ಹಾರ–ತುರಾಯಿ, ಕೇಕ್ ಕಟ್ ಸೇರಿದಂತೆ ಸಾಂಪ್ರದಾಯಿಕ ಹುಟ್ಟುಹಬ್ಬದ ಆಚರಣೆಗೆ ಕಡಿವಾಣ ಹಾಕಿ, ಪರಿಸರ ಮತ್ತು ರೈತರ ಸಂಕಷ್ಟವನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಕ್ರಮ ರೂಪಿಸಿರುವುದು ವಿಶೇಷವಾಗಿ ಗಮನ ಸೆಳೆಯಿತು.
ನಮ್ಮ ಸಂಸ್ಕೃತಿ ಮತ್ತು ಪರಂಪರೆಯನ್ನು ಮರೆಯಬಾರದು. ನಾವು ಮೋಜು–ಮಸ್ತಿ ಮಾಡುವ, ಶೋಕಿ ತೋರಿಸುವ ಜನರಲ್ಲ. ನಾವೆಲ್ಲರೂ ರೈತರ ಮಧ್ಯದಿಂದ ಬಂದವರು, ರೈತರ ನೋವು–ನಲಿವು ನಮಗೆ ಗೊತ್ತಿದೆ ಎಂದು ತಮ್ಮ ವಿರುದ್ಧದ ಟೀಕೆಗಳಿಗೆ ಮಾನೇಗಾರ ಅವರು ತಿರುಗೇಟು ನೀಡಿದರು. ಹಣ ಕೊಟ್ಟು ಕಾರ್ಯಕ್ರಮಕ್ಕೆ ಜನರನ್ನು ಕರೆಸಿಲ್ಲ. ಅಭಿಮಾನದಿಂದ ಜನರು ಸ್ವಯಂಪ್ರೇರಿತರಾಗಿ ಆಗಮಿಸಿದ್ದಾರೆ. ಪ್ರತಿಯೊಬ್ಬರೂ ಸ್ವಂತ ಬಲದ ಮೇಲೆ ಜೀವನ ಸಾಗಿಸಬೇಕು. ಯಾರನ್ನೂ ಅವಲಂಬಿಸಬಾರದು ಎಂದು ಹೇಳಿದರು.
ಜನರಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ನೌಕರಿ ತೊರೆದು ಉದ್ಯಮ ಸ್ಥಾಪಿಸಿ, ಸುಮಾರು 350 ಕುಟುಂಬಗಳಿಗೆ ಸ್ವಾವಲಂಬಿ ಬದುಕಿಗೆ ನೆರವಾಗಿರುವುದಾಗಿ ತಿಳಿಸಿದರು.
ಸಮಾಜದಲ್ಲಿ ಜಾಗೃತಿಯ ಕೊರತೆಯಿದೆ. ಕನಿಷ್ಠ ಸೌಜನ್ಯಕ್ಕೂ ಬೆನ್ನುತಟ್ಟಿ ಪ್ರೋತ್ಸಾಹಿಸುವ ಮನೋಭಾವ ಕಡಿಮೆಯಾಗುತ್ತಿದೆ. ನಮ್ಮವರೇ ನಮ್ಮನ್ನು ಬೆಳೆಯಲು ಬಿಡದಂತಹ ಕುತಂತ್ರ ಶಕ್ತಿಗಳೂ ಇವೆ. ಇಂತಹ ಪರಿಸ್ಥಿತಿಗಳ ನಡುವೆಯೂ ಹಿಂದುಳಿದ ಸಮಾಜದ ಜನರು ಛಲದಿಂದ ಮುಂದೆ ಬರಬೇಕು ಎಂದರು.
ಹಿಂದುಳಿದ ಸಮಾಜದಲ್ಲಿ ಪ್ರತಿಭೆ ಮತ್ತು ಶ್ರಮಕ್ಕೆ ಪ್ರೋತ್ಸಾಹ ನೀಡುವವರು ಬೆರಳೆಣಿಕೆಯಷ್ಟಿದ್ದಾರೆ. ಕೆಸರಿನಲ್ಲಿಯೇ ಕಮಲ ಅರಳುವಂತೆ ಕಷ್ಟಗಳ ನಡುವೆಯೂ ಸಾಧನೆ ಮಾಡಬೇಕು ಎಂದು ಕರೆ ನೀಡಿದರು. ಕಷ್ಟಪಟ್ಟು ದುಡಿದು ಗಳಿಸುವ ಫಲವೇ ನಿಜವಾದ ಸಂಪತ್ತು. ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಛಲ ಮತ್ತು ಪ್ರಯತ್ನವಿದ್ದರೆ ಯಾವುದೇ ಕೆಲಸವೂ ಅಸಾಧ್ಯವಲ್ಲ. ಸಂವಿಧಾನ ಪ್ರತಿಯೊಬ್ಬರಿಗೂ ಸಮಾನ ಹಕ್ಕು ಹಾಗೂ ಅವಕಾಶಗಳನ್ನು ನೀಡಿದ್ದು, ಅದರ ರಕ್ಷಣೆಗೆ ಎಲ್ಲರೂ ಹೋರಾಡಬೇಕು ಎಂದರು.
‘ಜೈ ಜವಾನ್, ಜೈ ಕಿಸಾನ್’ ಘೋಷಣೆ ಮೊಳಗಿಸಿದ ಅವರು, ರಾಜಕೀಯ ಸ್ಥಾನಮಾನಕ್ಕಿಂತಲೂ ಉತ್ತಮ ವ್ಯಕ್ತಿಯಾಗಿ ಬದುಕಲು ಜನರ ಆಶೀರ್ವಾದ ಬೇಕು ಎಂದು ಹೇಳಿದರು.
ಡಾ. ಭೀಮಣ್ಣ ಮೇಟಿ ಮಾತನಾಡಿ, ಡಾ. ಬಿ.ಆರ್. ಅಂಬೇಡ್ಕರ್ ಅವರ ಸಂವಿಧಾನವೇ ನಮಗೆ ಮಾತನಾಡುವ ಹಕ್ಕು ನೀಡಿದೆ. ಶ್ರಮ ಹಾಗೂ ಸೇವೆಯ ಮೂಲಕ ಮಾನೇಗಾರ ಅವರು ಈ ಮಟ್ಟಕ್ಕೆ ಬೆಳೆದಿದ್ದಾರೆ. ಅಹಿಂದ ಹಾಗೂ ಅನ್ಯಾಯಕ್ಕೊಳಗಾದ ಜನರಿಗೆ ಅವರ ಸೇವೆ ಅಗತ್ಯವಿದೆ. ಎಲ್ಲರೂ ಒಗ್ಗಟ್ಟಿನಿಂದ ಮುನ್ನಡೆಯಬೇಕು ಎಂದರು.
ಸಾಯಿಬಣ್ಣ ಬೋರಬಂಡ ಮಾತನಾಡಿ, ರಾಜಕೀಯವಾಗಿ ಪ್ರಭಾವಿ ಸಮಾಜಗಳು ತಮ್ಮದೇ ಆದ ಶಕ್ತಿ ಹೊಂದಿವೆ. ಹಿಂದುಳಿದ ಸಮಾಜ ರಾಜಕೀಯ ಸ್ಥಾನಮಾನಕ್ಕಾಗಿ ಹೋರಾಡುವಾಗ ಹಲವು ಅಡೆತಡೆಗಳು ಎದುರಾಗುತ್ತವೆ. ಅವುಗಳನ್ನು ಮೀರಿ ಮುಂದೆ ಬರಬೇಕು. ಹಿಂದುಳಿದ ಸಮಾಜದ ಆಸರೆಯಾಗಬೇಕೆಂಬ ಉದ್ದೇಶದಿಂದ ಮಾನೇಗಾರ ಅವರು ರಾಜಕೀಯಕ್ಕೆ ಬಂದಿದ್ದು, ಅವರ ಆಶಯ ಈಡೇರಲಿ ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸೈದಾಪುರ ಸಿದ್ದಾರೂಢ ಮಠದ ಮಹಾಸ್ವಾಮಿ ಶ್ರೀ ಸೋಮೇಶ್ವರಾನಂದ, ಈರಯ್ಯಸ್ವಾಮಿ ಹಿರೇನೂರ, ಹನಮೇಗೌಡ ಬೀರನಕಲ್, ಶರಣಪ್ಪ ಮೋಟನಳ್ಳಿ, ಭೀಮರಾಯ ಠಾಣಾಗುಂದಿ, ವಿಶ್ವನಾಥ ನೀಲಹಳ್ಳಿ, ಚಂದ್ರಶೇಖರ ವಾರದ, ಶಶಿಧರರೆಡ್ಡಿ ಹೊಸಳ್ಳಿ, ಮಲ್ಲಮ್ಮ ಗೋವಾರ, ಮಲ್ಲಣ್ಣ ದಾಸನಕೇರಿ, ಬಂದಪ್ಪಗೌಡ ಲಿಂಗೇರಿ, ರಜಾಕ್ ಸಾಹೇಬ ಪುಟಪಾಕ, ಸಿದ್ದುಗೌಡ ಹಿರೇನೂರ, ಮೀನಾಕ್ಷಮ್ಮ, ಅಶೋಕ ಕಲಾಲ ತೋರಣತಿಪ್ಪ, ಎಸ್.ಕೆ. ಮೈನೊದ್ದೀನ್, ಗೋವಿಂದ ಹಿರೇನೂರ, ದೇವಪ್ಪಗೌಡ ರಾಚನಹಳ್ಳಿ, ಭೀಮಶೆಪ್ಪ ಮಾಸ್ತರ ರಾಂಪೂರ, ಅಶೋಕ ಸಂಜನೋಳ್, ಅನಿಲಕುಮಾರ ಹೆಡಗಿಮದ್ರಾ, ಸಾಯಿಬಣ್ಣ ಕೆಂಗೂರಿ, ತಾಯಪ್ಪ ಯಾದವ್, ಭೀಮರಾಯ ಬಂಕಲಗಿ, ಮರೆಪ್ಪ ವರ್ಕನಳ್ಳಿ, ಮಲ್ಲು ಮಾಳಿಕೇರಿ, ಡಾ. ಪ್ರಕಾಶ ಜೈಗ್ರಾಂ, ಬಂದಪ್ಪಗೌಡ ಲಿಂಗೇರಿ, ಶಶಿಗೌಡ, ಅಂಬ್ರೀಷ ರಾಠೋಡ, ಚಂದ್ರಶೇಖರ ವಾರದ, ಪರಶುರಾಮ ಚವ್ಹಾಣ, ಬಸವರಾಜ ಯರಗೋಳ, ಶರಣಪ್ಪ ಮೋಟ್ನಳ್ಳಿ, ಶಾಂತಪ್ಪ, ಅಭಿಷೇಕ ಮಾನೆಗಾರ, ಗನಿ, ಸಂತೋಷ ಸೇರಿದಂತೆ ಅನೇಕ ಅಭಿಮಾನಿ ಬಳಗದವರು ಉಪಸ್ಥಿತರಿದ್ದರು.
