ಕಲಬುರಗಿ ಜಿಲ್ಲೆಯ ಜಂಬಗಿ ತಾಲೂಕಿನ 3, ತೆಲಂಗಾಣದ ಹೈದರಾಬಾದ್ ಮೂಲದ 3 ವ್ಯಕ್ತಿಗಳು ಭಾಗಿ | ಅತ್ಯಾಧುನಿಕ ಲಾಂಗ್ ರೇಂಜ್ ರೈಫಲ್‌ನಿಂದ ವನ್ಯಪ್ರಾಣಿ ಬೇಟೆ ಶಂಕೆ | ಗಂಭೀರವಾಗಿ ಪರಿಗಣಿಸಿದ ಅರಣ್ಯ ಇಲಾಖೆ | ಬೀದರ ಆರ್.ಎಫ್.ಒ. ಪ್ರವೀಣಕುಮಾರರಿಂದ ತನಿಖೆ ಮುಂದುವರಿಕೆ

ಬೀದರ: ಬೀದರ ಅರಣ್ಯ ವಿಭಾಗದ ವ್ಯಾಪ್ತಿಯ ಹೊನ್ನಿಕೇರಿ ಕಾಯ್ದಿಟ್ಟ ಅರಣ್ಯ ಪ್ರದೇಶದ ಹತ್ತಿರ ಇರುವ ಚೊಂಡಿ-ಮಮದಾಪುರ ಹುಲ್ಲುಗಾವಲು ಕೃಷ್ಣಮೃಗಗಳ (Antilope cervicapra) ಆವಾಸ ಸ್ಥಾನದಲ್ಲಿ, ಇದೇ 17 ರಂದು ಕೃಷ್ಣಮೃಗವನ್ನು ಬೇಟೆಯಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಜನರನ್ನು ಬಂಧಿಸಿ, 2 ನಾಲ್ಕು ಚಕ್ರ ವಾಹನಗಳು ಹಾಗೂ ಕೃತ್ಯಕ್ಕೆ ಬಳಸಿದ್ದ ಒಂದು ರೈಫಲ್ ಬಂದೂಕನ್ನು ಜಪ್ತಿ ಪಡಿಸಿ ವಶಪಡಿಸಿಕೊಳ್ಳಲಾಗಿದೆ ಎಂದು ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಕುಮಾರ್ ಸುಭಾಷರಾವ್ ಪಾಟೀಲ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಬೀದರ್ ತಾಲೂಕಿನ ಜೊಂಡಿ ತಾಂಡಾ ಹಾಗೂ ಮಮದಾಪುರ ತಾಂಡಾದ ಗ್ರಾಮಸ್ಥರು 3 ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ನಂತರ ಪ್ರಕರಣ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳುವ ಸಲುವಾಗಿ ಆರೋಪಿಗಳನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಯಿತು. ಈ ಪ್ರಕರಣದಲ್ಲಿ ಭಾಗಿಯಾಗಿ ಪರಾರಿಯಾಗಿದ್ದ 3 ಆರೋಪಿಗಳ ಪತ್ತೆಗಾಗಿ ಅರಣ್ಯ ಇಲಾಖೆಯಿಂದ ವಿಶೇಷ ತಂಡ ರಚಿಸಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು.ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಗುಂಟಿ ಅವರ ಮಾರ್ಗದರ್ಶನ ಹಾಗೂ ಕಲಬುರಗಿ ಜಿಲ್ಲೆಯ ಪೊಲೀಸರು ಹಾಗೂ ಕಲಬುರಗಿ ವಿಭಾಗದ ಅರಣ್ಯ ಅಧಿಕಾರಿಗಳ ಸಹಕಾರದ ಜೊತೆಗೆ ತೆಲಂಗಾಣ ರಾಜ್ಯದ ಅರಣ್ಯ ಇಲಾಖೆಯ ಅಧಿಕಾರಿಗಳ ಸಹಕಾರದಿಂದ ಬಸವಕಲ್ಯಾಣ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮುನೀರ್ ಅಹ್ಮದ್ ನೇತೃತ್ವದಲ್ಲಿ  ಆರ್.ಎಫ್.ಒ ಶಿವಕುಮಾರ ರಾಠೋಡ, ಪವನಕುಮಾರ ಧೂಳೆ,  ಡಿ.ಆರ್.ಎಫ್.ಒ. ಶಾಂತಕುಮಾರ ಅವರ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಪರಾರಿಯಾಗಿದ್ದ ಮೂವರು ಆರೋಪಿಗಳನ್ನೂ ಪತ್ತೆಹಚ್ಚಿ ಬಂಧಿಸಿ ಆರೋಪಿಗಳ ಮೇಲೆ (WLOR-02/2026-27) ದಾಖಲಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ.

ವಿಶೇಷವಾಗಿ ಬೀದರ್ ತಾಲೂಕಿನ ಜೊಂಡಿ ಹಾಗೂ ಮಮದಾಪುರ ಗ್ರಾಮದ ತಾಂಡಾಗಳ ಸಾರ್ವಜನಿಕರು ತಮ್ಮ ಸಾಹಸ ಹಾಗೂ ಸಮಯಪ್ರಜ್ಞೆಯಿಂದ ವನ್ಯಜೀವಿ ಬೇಟೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿರುವುದು ಅತ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ.

ಎಲ್ಲಾ ಸಾರ್ವಜನಿಕರು ಯಾವುದೇ ವನ್ಯಜೀವಿ ಬೇಟೆ, ಅಕ್ರಮ ಬೇಟೆ ಅಥವಾ ವನ್ಯಜೀವಿಗಳಿಗೆ ಸಂಬಂಧಿಸಿದ ಕಾನೂನುಬಾಹಿರ ಚಟುವಟಿಕೆಗಳು ತಮ್ಮ ಗಮನಕ್ಕೆ ಬಂದಲ್ಲಿ, ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿ, ಕೈಜೋಡಿಸಿ ವನ್ಯಜೀವಿ ಸಂರಕ್ಷಣೆಗೆ ಸಹಕರಿಸುವಂತೆ ಬೀದರ ಉಪ ಅರಣ್ಯ ಸಂರಕ್ಷಣಾಧಿಕಾರಿ ಸುಮೀತ್ ಕುಮಾರ್ ಸುಭಾಷರಾವ್ ಪಾಟೀಲ್ ಕೋರಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!