ವಿವಿಧ ಇಲಾಖೆ ಅಧಿಕಾರಿಗಳ ಜೊತೆ ಸಭೆ | ರೈತರ ಜಮೀನಿಗೆ ಭೇಟಿ | ಸ್ಥಳೀಯರ ಸಮಸ್ಯೆ ಆಲಿಕೆ | ಎಸ್ ಬಿ ಐ ಬ್ಯಾಂಕ್ ಸ್ಥಳಾಂತರಕ್ಕೆ ವಿರೋಧ | ಸಬ್ ರಿಜಿಸ್ಟ್ರಾರ್, ಎಡಿಎಲ್ಆರ್ ಕಚೇರಿ ಸ್ಥಾಪನೆಗೆ ಮನವಿ
ಗುರುಮಠಕಲ್: ಜಿಲ್ಲೆಯ ನೂತನ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ಪಾಂಡ್ವೆ ರಾಹುಲ್ ತುಕಾರಾಮ್ ಅವರು ಗುರುಮಠಕಲ್ ತಹಸೀಲ್ ಕಚೇರಿಯಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ವಿವಿಧ ಇಲಾಖೆಗಳ ಪ್ರಗತಿಯ ಕುರಿತು ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು, ಚಪೆಟ್ಲಾ ರಸ್ತೆಯ ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಬಿತ್ತನೆ, ಹಾನಿಯನ್ನು ಪರಿಶೀಲನೆ ನಡೆಸಿ ರೈತ ಸಂಪರ್ಕ ಅಧಿಕಾರಿ ಮಲ್ಲಿಕಾರ್ಜುನ ವಾರದ ಅವರಿಂದ ವಿವರಣೆ ಪಡೆದರು.
ಎಸ್ ಐ ಆರ್ ನೋಂದಣಿಯ ಕುರಿತು ಗುರುಮಠಕಲ್ ತಾಲೂಕಿನಲ್ಲಿ ಅಧಿಕಾರಿಗಳು ಒಳ್ಳೆಯ ಕೆಲಸ ಮಾಡಿದ್ದಾರೆ ಎಂದು ಹೇಳಿದರು.
ಇದೇ ವೇಳೆ ತಾಲೂಕು ಕೇಂದ್ರವಾದ ಗುರುಮಠಕಲ್ ಗೆ ಸಬ್ ರಿಜಿಸ್ಟ್ರಾರ್ ಮತ್ತು ಎಡಿಎಲ್ಆರ್ ಕಚೇರಿಗಳು ಸ್ಥಾಪನೆ ಮಾಡಿ ಅನುಕೂಲ ಕಲ್ಪಿಸಬೇಕು ಎಂದು ಕಾಂಗ್ರೆಸ್ ಮುಖಂಡ ಕಾಶಪ್ಪ ಚಿನ್ನಾಕಾರ ಮನವಿ ಮಾಡಿದರು.
ಈ ವೇಳೆ ಸ್ಥಳೀಯರು, ಫ್ರೂಟ್ ಐಡಿ ಅವಾಂತರದಿಂದ ರೈತರು ಪರಿಹಾರ ಪಡೆಯಲು ತೊಂದರೆಯಾಗುತ್ತಿದೆ ಎಂದು ಗಮನಕ್ಕೆ ತಂದರು. ಆಧಾರ್ ಕಾರ್ಡ್ ಕಡ್ಡಾಯವಾಗಿದ್ದು, ಆಧಾರ್ ಲಿಂಕ್ ಇಲ್ಲಿದೆ ಇತರೆ ಸಮಸ್ಯೆ ಬಗೆಹರಿಸಲಾಗುತ್ತಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಗುರುಮಠಕಲ್ ಪಟ್ಟಣಕ್ಕೆ ಭೀಮಾ ನದಿಯ ಮೂಲಕ ನೇರವಾಗಿ ನೀರು ಸರಬರಾಜು ಆಗುತ್ತಿದ್ದು, ವೈಜ್ಞಾನಿಕ ಫಿಲ್ಟರ್ ಆಗುತ್ತಿಲ್ಲ . ಇದರಿಂದ ರೋಗಗಳು ಬರುವ ಸಾಧ್ಯತೆಗಳಿವೆ ಎಂದು ಪತ್ರಕರ್ತರೊಬ್ಬರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಹಿಂದೆಯೂ ಲೋಕಾಯುಕ್ತ ಉಪ ನ್ಯಾಯಮೂರ್ತಿಗಳ ಗಮನಕ್ಕೆ ತರಲಾಗಿತ್ತು ಎಂದು ವಿವರಿಸಿದರು. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮವಹಿಸುವ ಭರವಸೆ ನೀಡಿದರು.
ಗೃಹ ನಿರ್ಮಾಣ ಮಂಡಳಿಯ ನಿವೇಶನ ಹಂಚಿಕೆ 6 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಬಗ್ಗೆ ಸ್ಥಳೀಯರು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದರು. ಈ ಬಗ್ಗೆ ಗೃಹ ನಿರ್ಮಾಣ ಇಲಾಖೆಯ ಜಿಲ್ಲಾ ಮಟ್ಟದ ಅಧಿಕಾರಿಗಳಿಂದ ಮಾಹಿತಿ ಪಡೆದು ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಎಸ್‌ಬಿಐ ಬ್ಯಾಂಕ್ ಬೇರೆಡೆ ಸ್ಥಳಾಂತರಗೊಳ್ಳುತ್ತಿದ್ದು, ರಾಜ್ಯ ಹೆದ್ದಾರಿ ಪಕ್ಕದಲ್ಲೇ ಬ್ಯಾಂಕ್ ಆದರೇ, ದರೋಡೆ, ಕಳುವು, ವಾಹನ ಅಪಘಾತದಿಂದ ಜೀವ ಹಾನಿಯಾಗುವ ಸಂಭವವಿದೆ ಎಂದು ಸ್ಥಳಿಯರು ಗಮನಕ್ಕೆ ತಂದರು.
ಈ ವೇಳೆ ತಹಸೀಲ್ದಾರ್ ಚನ್ನಮ್ಮಲ್ಲಪ್ಪ ಘಂಟಿ, ಎಇಇ ಪರಶುರಾಮ್, ತಾ.ಪಂ. ಅಧಿಕಾರಿ ಅಂಬ್ರೇಷ ಪಾಟೀಲ್, ಗ್ರೇಡ್ 2 ತಹಸೀಲ್ದಾರ್ ನರಸಿಂಹ ಸ್ವಾಮಿ, ಶಿಶು ಅಭಿವೃದ್ಧಿ ಅಧಿಕಾರಿ ಶರಣಬಸಪ್ಪ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳ ಪ್ರಮುಖರು ಇದ್ದರು.
