2015ರಲ್ಲಿ ಶಾಸ್ವತ ನೀರಾವರಿ ಹೋರಾಟ ಸಮಿತಿ ರಚನೆ | ಗ್ರಾಮೀಣ ಭಾಗದಲ್ಲಿ ಜಾಗೃತಿ | ಭೀಮಾ ನದಿಯಿಂದ ಕೆರೆಗಳಿಗೆ ಬಂತು ನೀರು
ಗುರುಮಠಕಲ್: ಶಾಶ್ವತ ನೀರಾವರಿ ಹೋರಾಟ ಸಮಿತಿ ರಚಿಸಿ ನಿರಂತರ ಹೋರಾಟ ಮಾಡಿದರ ಫಲವಾಗಿ ಇಂದು ಗುರುಮಠಕಲ್ ಕ್ಷೇತ್ರದ ಕೆರೆಗಳಿಗೆ ನೀರು ಬಂದಿದೆ ಎಂದು ಸಮಿತಿ ಸಂಸ್ಥಾಪಕ ಅಧ್ಯಕ್ಷ, ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಾಯಿಬಣ್ಣ ಬೋರಬಂಡ ಹೇಳಿದರು.
ಮತಕ್ಷೇತ್ರದ ಗೌಡಗೇರಾ ಗ್ರಾಮದ ಕೆರೆಗೆ ಭೇಟಿ ನೀಡಿ, ವಿಶೇಷ ಪೂಜೆ ಸಲ್ಲಿಸಿ ಮಾತನಾಡಿದ ಅವರು, 2015ರಲ್ಲಿ ಕ್ಷೇತ್ರದಲ್ಲಿ ನೀರಾವರಿಗೆ ಹೋರಾಟ ಆರಂಭಿಸಲಾಗಿತ್ತು. ನಮಗೆ ದೇವರು ಅನ್ಯಾಯ ಮಾಡಿದ್ದಾನೆ. ಕುಡಿಯುವ ನೀರು ಸಹ ನೀಡಿಲ್ಲ. ನಮ್ಮ ಭಾಗದ ಜನರು ದೊಡ್ಡ ಪ್ರಮಾಣದಲ್ಲಿ ಗಂಟು ಮೂಟೆ ಕಿಟ್ಟಿ ಕೊಂಡು ಗುಳೆ ಹೋಗುವುದನ್ನು ತಡೆದು ಬಾಳು ಹಸನಾಗಿಸಬೇಕು ಎಂಬ ಕನಸು ಇತ್ತು.
ನಮ್ಮ ಕ್ಷೇತ್ರದಲ್ಲಿಯೇ ಜನರು ಸ್ಥಳೀಯ ಸಂಪನ್ಮೂಲ ಬಳಸಿಕೊಂಡು ಜೀವನ ಹಸನಾಗಿಸಬೇಕು ಎಂದು ಯೋಚನೆಯಿಂದ ಹೋರಾಟ ಮಾಡಿದ್ದಾಗಿ ತಿಳಿಸಿದರು. 105 ಕೆರೆಗಳ ತುಂಬಿದ ಸ್ಥಳದಲ್ಲಿ ಜನರೊಟ್ಟಿಗೆ ಸೇರಿ ಸಂತಸ ಹಂಚಿಕೊಳ್ಳಲಾಗುವುದು. ಇದು ದೊಡ್ಡ ಯೋಜನೆ 66 ಕೆರೆಗೆ 440 ಕೋಟಿ. ಉಳಿದ ಹೆಚ್ಚಿನ 22 ಕೆರೆ ಇದಕ್ಕು ಮೊದಲು 8 ಕೆರೆ ಡಾ.ಮಲ್ಲಿಕಾರ್ಜು ಖರ್ಗೆ ಅವಧಿಯಲ್ಲಿ ಆಗಿತ್ತು. ಎಲ್ಲಾ ನಾಯಕರ ಸಹಕಾರದಿಂದ ಸಾಧ್ಯವಾಗಿದೆ ಎಂದರು.
ಮಹಾರಾಷ್ಟ್ರದಿಂದ ನೀರು ನದಿಗೆ ಹರಿಯುತ್ತಿದೆ. ಹಾಗಾಗಿ ತಡ ಮಾಡದೆ ನೀರು ಕೆರೆಗಳಿಗೆ ತುಂಬುವ ಕಾರ್ಯ ಅಧಿಕಾರಿಗಳ ಮನವೊಲಿಸಿ ಆರಂಭಿಸಲಾಗಿದೆ. ರೈತರು 2 ಫಸಲು ಆರಾಮಾಗಿ ತೆಗೆಯಬಹುದು. ರೈತರು ಏನು ಚಿಂತೆ ಮಾಡಬಾದರು. 195 ದಿನ ಪಂಪಿಂಗ್ ಮಾಡಬಹುದು. 2 ಬಾರಿ ಕೆರೆ ತುಂಬಬಹುದು ರೈತರ ಜೀವನಕ್ಕೆ ಆಸರೆಯಾಗಿದೆ ಎಂದರು.
ವಿರೋಧಪಕ್ಷ ದಲ್ಲಿದ್ದರೂ ಜನರ ಅನುಕೂಲಕ್ಕಾಗಿ ಕೆಲಸ ಮಾಡಬಹುದು. ನಮ್ಮ ರೈತರ ಸಂತೋಷವೇ ನಮ್ಮ ಸಂತೋಷ ರೈತರ ಮುಖದಲ್ಲಿ ನಗು ಕಂಡು ಸಂತಸ ಮೂಡಿದೆ ಎಂದರು.
ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ ಮಾತನಾಡಿ, ರಾಜ್ಯದ ಎರಡನೇ ಅತಿ ಹೆಚ್ಚು ಸರಣಿ 450 ಕೆರೆಗಳು ಅಖಂಡ ಯಾದಗಿರಿ ತಾಲೂಕುನಲ್ಲಿವೆ. ಸಾಯಿಬಣ್ಣ ಬೋರಬಂಡ ಅವರು ಶಾಶ್ವತ ನೀರಾವರಿ ಹೋರಾಟ ಸಮಿತಿ ರಚಿಸಿ ಹಳ್ಳಿ ಹಳ್ಳಿಗೆ ತಿರುಗಿ ಜಾಗೃತಿ ಮೂಡಿಸಿ. ಕೆರೆಗಳಿಗೆ ನೀರು ತುಂಬಲು ಶ್ರಮಿಸಿದ್ದಾರೆ.
ಕೆಲವರು ಫೋಟೊ ಹಾಕಿಕೊಳ್ಳುವುದು ನೋಡುತ್ತಿದ್ದೀವಿ. ಮಾಜಿ ಶಾಸಕ ದಿ. ನಾಗನಗೌಡ ಕಂದಕೂರ ಅವರು ಶಾಸಕರಾಗಿರುವ ಮುನ್ನವೇ ಈ ಯೋಜನೆ ಮಂಜೂರಾಗಿದೆ. ಇದು ಕಾಂಗ್ರೆಸ್ ಮಾಡಿದ ಕೆಲಸ. ವಾಟ್ಸ್ ಆ್ಯಪ್ ಯೂನಿವರ್ಸಿಟಿಯಲ್ಲಿ ಏನೇನೋ ಬರುತ್ತೆ. ಯಾರು ಹೋರಾಟ ಮಾಡಿದ್ದಾರೆ ಎನ್ನುವುದು ಜನರಿಗೆ ಗೊತ್ತಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಗ್ರಾಮಸ್ಥರು ಬಾಜಾ ಭಜಂತ್ರಿಗಳ ಮೂಲಕ ಸ್ವಾಗತ ಕೋರಿದರು. ಈ ವೇಳೆ ಖಾಜಾ ಮೈನೋದೀನ್, ಆನಂದ ಬೋಯಿನಿ, ಮರೆಪ್ಪ, ಸಾಯಬಗೌಡ, ಹಣಮರೆಡ್ಡಿ, ಮಾರೆಪ್ಪ ಯಂಕಣೋರ, ರಾಜು, ಚಂದ್ರಾಮ, ರಾಮಪ್ಪ ಸೇರಿದಂತೆ ಗ್ರಾಮಸ್ಥರು ಇದ್ದರು.
