ಈಡ್ಲೂರು ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಶಂಕರ ಸೇವಾ ಸಮಿತಿಯಿಂದ ಭಜನೆ ಕಾರ್ಯಕ್ರಮ
ಯಾದಗಿರಿ: ಶ್ರಾವಣ ಮಾಸದಲ್ಲಿ ವಿಶೇಷವಾಗಿ ಶಿವಾರಾಧನೆ ಯಿಂದ ಅತ್ಯಂತ ಪುಣ್ಯದಾಯಕವಾದ ಫಲಗಳು ದೊರೆಯುತ್ತವೆ ಎಂದು ಶಂಕರ ಸೇವಾ ಸಮಿತಿ ತಾಲೂಕಾ ಸಂಚಾಲಕ ರವೀಂದ್ರ ಕುಲಕರ್ಣಿ ಲಾಡ್ಲಾಪುರ ಹೇಳಿದರು.
ಗುರುಮಠಕಲ್ ತಾಲೂಕಿನ ಗಡಿಭಾಗದಲ್ಲಿನ ಪ್ರಸಿದ್ಧ ಶಿವಕ್ಷೇತ್ರ ಈಡ್ಲೂರು ಗ್ರಾಮದ ಶಂಕರಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಂಕರ ಸೇವಾ ಸಮಿತಿ ಭಜನಾ ಮಂಡಳಿಯಿಂದ ಶ್ರಾವಣ ಮಾಸದ ವಿಶೇಷ ಭಜನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಶ್ರಾವಣ ಮಾಸ ದೈವಾರಾಧನೆಗೆ ಅತ್ಯಂತ ಪ್ರಶಸ್ತವಾದ ಮಾಸವಾಗಿದೆ. ಶ್ರಾವಣ ಎಂಬ ಶಬ್ದ ನವ ವಿಧ ಭಕ್ತಿಯಲ್ಲಿನ ಮೊದಲ ಸೋಪಾನ ಶ್ರವಣವನ್ನು ಸೂಚಿಸುತ್ತದೆ, ಭಗವಂತನ ಚರಿತ್ರೆ, ಕೀರ್ತನೆಗಳನ್ನು ಶ್ರವಣ ಮಾಡುವುದರಿಂದ ಮನುಷ್ಯ ಸನ್ಮಾರ್ಗದೆಡೆಗೆ ಸಾಗುತ್ತಾನೆ.
ಭಗವಂತನ ಕೀರ್ತನೆ ಹಾಡುವುದರಿಂದ ಮನಸ್ಸು ನೆಮ್ಮದಿಯನ್ನು ಆಶ್ರಯಿಸಿ ಪ್ರಫುಲ್ಲವಾಗುತ್ತದೆ. ಇದೂ ಕೂಡ ಭಗವಂತನ ಸಖ್ಯವೇ ಆಗಿದೆ. ಹೀಗೆ ಶ್ರವಣ, ಕೀರ್ತನ, ಸ್ಮರಣೆ, ಪಾದ ಸೇವೆ, ಅರ್ಚನೆ, ವಂದನೆ, ದಾಸ್ಯ, ಸಖ್ಯ ಕೊನೆಗೆ ಆತ್ಮ ನಿವೇದನೆ ಹೀಗೆ ನವ ವಿಧ ಭಕ್ತಿ ಮಾಡುವ ಮೂಲಕ ಭಗವಂತನಲ್ಲಿ ತನ್ನನ್ನು ತಾನು ಸಮರ್ಪಿಸಿಕೊಳ್ಳುವುದೇ ಮುಕ್ತಿಯ ಪಥವಾಗಿದೆ ಎಂದರು.
ಪತ್ರಕರ್ತ ಶಂಕ್ರಪ್ಪ ಅರುಣಿ ಮಾತನಾಡಿ, ಶ್ರಾವಣ ಪವಿತ್ರ ಮಾಸದಂದು ಶಂಕರ ಸೇವಾ ಸಮಿತಿಯವರು ಈಡ್ಲೂರು ಶಂಕರಲಿಂಗೇಶ್ವರ ಕ್ಷೇತ್ರದಲ್ಲಿ ಭಜನೆ ಕಾರ್ಯಕ್ರಮ ಹಮ್ಮಿಕೊಂಡಿದ್ದು ಅತ್ಯಂತ ಅರ್ಥಪೂರ್ಣ ಕಾರ್ಯವಾಗಿದೆ.
ಒಮ್ಮೆ ಜಗದ್ಗುರು ಶಂಕರಾಚಾರ್ಯರು ಈ ಕ್ಷೇತ್ರವನ್ನು ಸಂದರ್ಶಿಸಿದ್ದಾರೆ ಎನ್ನುವ ಪ್ರತೀತಿ ಇದೆ. ಶಂಕರರು ಅದ್ವೆöÊತ ತತ್ವದ ಮೂಲಕ ಇಡೀ ಭಾರತಕ್ಕೆ ಧರ್ಮ ಜಾಗೃತಿ ಜೊತೆಗೆ ಐಕ್ಯತೆಯ ಸಂದೇಶವನ್ನು ಸಾರಿದ್ದಾರೆ, ಭಾರತ ದೇಶವನ್ನು ನಾಲ್ಕು ಸಲ ಪಾದಯಾತ್ರೆ ಮೂಲಕ ಪರ್ಯಟನೆ ಮಾಡಿ ನಾಲ್ಕು ಕಡೆಗಳಲ್ಲಿ ಪೀಠಗಳನ್ನು ಸ್ಥಾಪಿಸಿದರು.
ಎಲ್ಲರೂ, ಎಲ್ಲವೂ ಒಂದೇ ಬೇದವಳಿದೆ ಮುಕ್ತಿ, ಎಲ್ಲರ ಆತ್ಮದಲ್ಲಿ ಪರಮಾತ್ಮ ನೆಲೆಸಿದ್ದಾನೆ ಎಂದು ಅದ್ವೈತ ಸೂತ್ರವನ್ನು ಇಡೀ ವಿಶ್ವಕ್ಕೆ ಸಾರಿದರು. ಪ್ರೇಮಭಾವ, ಐಕ್ಯತೆ, ಸದಾಚಾರ, ಸದ್ವಿಚಾರಗಳನ್ನು ಜನಮಾನಸದಲ್ಲಿ ಬಿತ್ತಿದ ಪರಮಾತ್ಮನ ಅಪರಾವತಾರಿಯಾಗಿ ಲೋಕ ಕಲ್ಯಾಣವನ್ನುಂಟು ಮಾಡಿದರು ಎಂದು ತಿಳಿಸಿದರು.
ಈ ವೇಳೆ ಶ್ರೀ ಶಂಕರಾಚಾರ್ಯರ ಅಷ್ಟಕ, ಗುರು ಅಷ್ಟಕ, ವಿಶ್ವಾನಾಥ ಅಷ್ಟಕ, ಲಿಂಗಾಷ್ಟಕ ಹಾಗೂ ತತ್ವ ಪದಗಳನ್ನು ಭಜನಾ ಮಂಡಳಿಯ ಸದಸ್ಯರು ಸುಶ್ರಾವ್ಯವಾಗಿ ಹಾಡಿದರು. ಇದಕ್ಕೂ ಮೊದಲು ಶಂಕರಲಿಂಗೇಶ್ವರನಿಗೆ ವಿಶೇಷ ಪೂಜೆ, ಅರ್ಚನೆಗಳು ನಡೆಸಲಾಯಿತು.
ಈ ಸಂದರ್ಭದಲ್ಲಿ ರಮೇಶ ಕುಲಕರ್ಣಿ, ಬೀಮಸೇನರಾವ್ ಚಟ್ನಳ್ಳಿ, ಗುಂಡೇರಾವ್ ಕುಲಕರ್ಣಿ, ಡಾ. ಕೃಷ್ಣಮೂರ್ತಿ ಕುಲಕರ್ಣಿ, ವೆಂಕಟಶ ತಾತಳಗೇರಿ, ಉಮೇಶ ಕುಲಕರ್ಣಿ, ಶ್ರೀಮತಿ ಅನಸೂಯ ಜ್ಯೋಷಿ, ಶ್ರೀ ದೇವಿ ಜ್ಯೋಷಿ, ಶ್ರೀ ಸುಜಾತಾ ಕುಲಕರ್ಣಿ, ಸ್ನೇಹ ಕುಲಕರ್ಣಿ, ಭಾಗ್ಯಶ್ರೀ ಕುಲಕರ್ಣಿ, ಮನೋರಮಾ ಕುಲಕರ್ಣಿ, ನಂದಮ್ಮ ತಾತಳಗೇರಿ, ಶಶಿಕಲಾ ಕುಲಕರ್ಣಿ, ವಿಜಯಲಕ್ಷ್ನಿ ಅರಕೇರಾ, ದೀಪಾ ಅರುಣಿ ಇದ್ದರು.
