ಪರೋಕ್ಷವಾಗಿ ನಿತ್ಯ 5 ಎಂ.ಜಿ ಪ್ಲಾಸ್ಟಿಕ್ ಮಾನವ ದೇಹಕ್ಕೆ | ಪರಿಸರ ನಾಶಕ್ಕೆ ಕಾರಣ | ಬಳಸಿದರೆ ಕಾನೂನು ಕ್ರಮದ ಎಚ್ಚರಿಕೆ
ಗುರುಮಠಕಲ್ : ಪ್ಲಾಸ್ಟಿಕ್ ಬಳಕೆ ಮಾನವ ದೇಹ ಅಲ್ಲದೇ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಹಾಗಾಗಿ ಪ್ರತಿಯೊಬ್ಬರೂ ಪ್ಲಾಸ್ಟಿಕ್ ಬಳಕೆ ನಿಲ್ಲಿಸಬೇಕು ಎಂದು ಸಿವಿಲ್ ಹಿರಿಯ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಮರಿಯಪ್ಪ ಜಾಗೃತಿ ಮೂಡಿಸಿದರು.
ಗುರುಮಠಕಲ್ ಪಟ್ಟಣದಲ್ಲಿ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಶಿಕ್ಷಣ ಇಲಾಖೆ, ಗೃಹ ರಕ್ಷಕದಳ, ಪುರಸಭೆ , ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜು, ಪೊಲೀಸ್ ಇಲಾಖೆ, ಶಶಿ ಚಾರಿಟೇಬಲ್ ಅಂಡ್ ಎಜುಕೇಶನ್ ಟ್ರಸ್ಟ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ “ಪ್ಲಾಸ್ಟಿಕ್ ಮುಕ್ತ ಗುರುಮಠಕಲ್ ಅಭಿಯಾನ” ಅಂಗವಾಗಿ ಬೃಹತ್ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ, ಬಸ್ ನಿಲ್ದಾಣ ವೃತ್ತದಲ್ಲಿ ಮಾತನಾಡಿದರು.
ಆಹಾರ, ನೀರು ಹಾಗೂ ಗಾಳಿ ಮೂಲಕ ಮಾನವ ದೇಹಕ್ಕೆ ನಿತ್ಯ 5 ಎಂ.ಜಿ.ಪ್ಲಾಷ್ಟಿಕ್ ಸೇರುತ್ತಿದೆ ಎನ್ನುವ ಕಳವಳಕಾರಿ ವಿಷಯ ಹೇಳಿದರು. ಪರಿಸರ ಸಂರಕ್ಷಣೆ ಎಲ್ಲರ ಕರ್ತವ್ಯವಾಗಿದೆ. ಊಟದ ತಟ್ಟೆ, ಚಹಾ ಕಪ್, ಗ್ಲಾಸ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಮಾರಾಟ ಕಂಡು ಬಂದಲ್ಲಿ, ಪ್ರಕರಣ ದಾಖಲಿಸಿ, ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದರು. ಪುನಃ ಮುಂದುವರಿದರೆ ವ್ಯಾಪಾರದ ಪರವಾನಿಗೆ ರದ್ದು ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜು (ಎಸ್.ವಿ. ಕಾಲೇಜು) ಮುಂಭಾಗದಿಂದ ಪ್ರಾರಂಭವಾಗಿ, ಹಳೆಯ ತಹಸೀಲ್ದಾರ್ ಕಚೇರಿ ಮಾರ್ಗವಾಗಿ, ಸಿಹಿ ನೀರು ಬಾವಿ ಮೂಲಕ ಮಹಾತ್ಮ ಗಾಂಧಿ ಮೈದಾನದವರೆಗೆ ಸಾಗಿತು. ಜಾಥಾದಲ್ಲಿ ಯಾದಗಿರಿ ಜಿಲ್ಲೆಯ ಗೌರವಾನ್ವಿತ ನ್ಯಾಯಾಧೀಶರು ಕಾಲ್ನಡಿಗೆಯ ಮೂಲಕ ಭಾಗವಹಿಸಿ, ಸಾರ್ವಜನಿಕರಿಗೆ ಏಕಬಳಕೆ ಪ್ಲಾಸ್ಟಿಕ್ ತ್ಯಜಿಸುವುದು, ಪರಿಸರ ಸಂರಕ್ಷಣೆ, ಸ್ವಚ್ಛತೆ ಹಾಗೂ ಬಟ್ಟೆ ಚೀಲಗಳ ಬಳಕೆಯ ಮಹತ್ವದ ಕುರಿತು ಅರಿವು ಮೂಡಿಸಿದರು.
ಈ ಸಂದರ್ಭದಲ್ಲಿ ಸಹಾಯಕ ಕಾನೂನು ಅಭಿರಕ್ಷಕಿ ಸುಷ್ಮಾ ಜಾದವ್, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಹನುಮಂತಪ್ಪ, ತಾಲೂಕು ಪಂಚಾಯಿತಿಯ ಮಲ್ಲಿಕಾರ್ಜುನ ಚಂದವರೆ ಹಾಗೂ ಮಲ್ಲಿಕಾರ್ಜುನ ಶಿರಗೋಳ, ಗೃಹ ರಕ್ಷಕದಳದ ಅಂಬಾದಾಸ್, ಸ್ವಾಮಿ ವಿವೇಕಾನಂದ ಪದವಿ ಪೂರ್ವ ಕಾಲೇಜಿನ ಜ್ಞಾನೇಶ್ವರ ರೆಡ್ಡಿ, ಸರ್ಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಎಂ. ಹೊಸಮನಿ, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿ-ವಿದ್ಯಾರ್ಥಿನಿಯರು, ಸ್ವಯಂಸೇವಕರು ಹಾಗೂ ಸಾರ್ವಜನಿಕರು ಭಾಗವಹಿಸಿ ಅಭಿಯಾನವನ್ನು ಯಶಸ್ವಿಗೊಳಿಸಿದರು.
