ಗುರುಮಠಕಲ್ ಕ್ಷೇತ್ರದ ಕೆರೆಗಳಿಗೆ ಹೋರಾಟದ ಮೂಲಕ ನೀರು | ಶಾಶ್ವತ ನೀರಾವರಿ ಸಮಿತಿ ಸ್ಥಾಪಕ ಸಾಯಬಣ್ಣ ಬೋರಬಂಡ ಅವರಿಗೆ ಸರ್ವ ಸಂಘಟನೆಗಳಿಂದ ಅಭಿನಂದನೆ | ‘ನಾನು ಆಗೇ ಆಗ್ತೀನಿ ಎನ್ನುವುದು ನಮ್ಮ ಕೈಯಲ್ಲಿಲ್ಲ, ಜನರ ಕೈಯಲ್ಲಿದೆ’ ಪರೋಕ್ಷವಾಗಿ ಚಿಂಚನಸೂರ ಗೆ ಮಾನೇಗಾರ್ ಟಾಂಗ್ | 3 ರಾಜ್ಯ ಸುತ್ತಿ ಯೋಜನೆಯ ಅಧ್ಯಾಯ| ಫೋಟೊ ಹಾಕಿಕೊಂಡು ನಾವು ಮಾಡಿದ್ದೇವೆ ಎಂದು ಜನರ ದಾರಿ ತಪ್ಪಿಸುವುದು ನಿಲ್ಲಿಸಿ | ಸಾಯಿಬಣ್ಣ ಬೋರಬಂಡ ತಾಕೀತು
ಗುರುಮಠಕಲ್ : ರಾಜ್ಯದ 2 ಜಿಲ್ಲೆಗಳಲ್ಲಿ ಅತಿ ಹೆಚ್ಚು ಕೆರೆಗಳಿವೆ ಕೋಲಾರ್ ಹೊರತು ಪಡಿಸಿ ಯಾದಗಿರಿ ಜಿಲ್ಲೆಯ 468 ಕೆರೆಗಳಿವೆ. ಮಳೆಯಾಶ್ರಿತ ಕೆರೆಗಳು ನಮ್ಮಲ್ಲಿವೆ. ಕೆರೆ ಬತ್ತಿ ಹೋಗುತ್ತಿರುವದರಿಂದ ದೂರದೃಷ್ಟಿ ಹೊಂದಿದ ನಾಯಕ ಸಾಯಬಣ್ಣ ಬೋರಬಂಡ ಹೋರಾಟಕ್ಕೆ ಧುಮುಕಿದರು ಎಂದು ಹಿರಿಯ ಕಾಂಗ್ರೆಸ್ ಮುಖಂಡ ಶರಣಪ್ಪ ಮಾನೆಗಾರ ಹೇಳಿದರು.
ಗುರುಮಠಕಲ್ ನಗರದ ಜೆ.ಹೆಚ್ ಫಂಕ್ಷನ್ ಹಾಲ್ ನಲ್ಲಿ ಸರ್ವ ಸಂಘಟನೆಗಳಿಂದ ಸಾಯಿಬಣ್ಣ ಬೋರಬಂಡ ಅವರಿಗೆ ಆಯೋಜಿಸಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು.
ಅಭಿನಂದನೆ, ಸತ್ಕಾರ ಸ್ವೀಕರಿಸಿ ಸಾಯಬಣ್ಣ ಬೋರಬಂಡ ಮಾತನಾಡಿ, 14 ಸಂಘಟನಗಳು ಅಭಿನಂದನೆ ಸಲ್ಲಿಸುತ್ತಿರುವುದು ಐತಿಹಾಸಿಕ ಕಾರ್ಯ. ರಾಜಕೀಯ ಅಲ್ಲದೇ ಕ್ಷೇತ್ರಕ್ಕೆ ಕೊಡುಗೆ ಕೊಡಬೇಕು ಎನ್ನುವ ಸಂಕಲ್ಪದ ದೂರದೃಷ್ಟಿಯಿಂದ ಹೋರಾಟ ಮಾಡಿದ್ದು, ಇಂದು ನಮ್ಮ ಕೆರೆಗಳಿಗೆ ನೀರು ತುಂಬುತ್ತಿವೆ.
ಸನ್ನತಿ ಏತ ನೀರಾವರಿ ಡಾ. ಖರ್ಗೆ ಅವರಿಂದ ಕೆಲವು ಕೆರೆಗಳಿಗೆ ನೀರು, ಬಳಿಕ ಯರಗೋಳ ಸೇರಿ 7 ಕೆರೆಗಳಿಗೆ ನಬಾರ್ಡ್ ಯೋಜನೆಯಡಿ 2017ರ ಜನೇವರಿಯಲ್ಲಿ ಮಂಜೂರು ಆಗಿದೆ. ದಿ. ನಾಗನಗೌಡ ಕಂದಕೂರ ಅವರು ಶಾಸಕರಾಗಿರಲಿಲ್ಲ. ಸುಳ್ಳು ಹೇಳಿ ಜನರ ದಾರಿ ತಪ್ಪಿಸುವ ಕಾರ್ಯ ಮಾಡಬಾರದು ಎಂದು ವಿರೋಧಿಗಳಿಗೆ ಎಚ್ಚರಿಕೆ ನೀಡಿದರು.
2014-18ರ ವೇಳೆ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು 55 +11 ಕೆರೆಗಳಿಗೆ 440 ಕೋಟಿ ಜುಲೈ 2017ರಲ್ಲಿ ಮಂಜೂರು ಆಗಿದೆ. ನಾಗನಗೌಡ ಕಂದಕೂರ ಅವರು ಶಾಸಕರಾಗುವ ಮೊದಲು ಯೋಜನೆ ಜಾರಿಗೆ ಬಂದಿದೆ. ಫೋಟೋ ಹಾಕಿ ತಾನು ಮಾಡಿದ್ದು ಎನ್ನುವುದು ನಿಲ್ಲಿಸಬೇಕು ಎಂದರು.
2022ರಲ್ಲಿ ಬಿಜೆಪಿಯಲ್ಲಿದ್ದಾಗ ಚುನಾವಣೆ ಹತ್ತಿರ ಇರುವ ಸಂದರ್ಭದಲ್ಲಿ 20 ಕೆರೆ ತುಂಬುವ ಯೋಜನೆ ಜಾರಿಯಾಗಿದೆ. ಡಾ. ನಂಜುಂಡಪ್ಪ ವರದಿ ಅನ್ವಯ 371ಜೆ ಯಡಿಯಲ್ಲಿ ಯೋಜನೆ ಮಂಜೂರಾಗಿದೆ ಎಂದು ದಾಖಲೆ ಸಮೇತ ಸ್ಪಷ್ಟಪಡಿಸಿದರು.
ಇನ್ನೂ ಉಳಿದ ಕೆರೆಗಳಿಗೆ ನೀರು ತುಂಬಿಸುವ ಕಾರ್ಯವನ್ನು ಮಾಡಲಾಗುವುದು. ಸಚಿವ ಪ್ರಿಯಾಂಕ್ ಖರ್ಗೆ, ಶರಣಪ್ರಕಾಶ್ ಪಾಟೀಲ್ ಅವರೊಂದಿಗೆ ನೀರಾವರಿ ಸಚಿವರು, ಮುಖ್ಯಮಂತ್ರಿಗಳ ಮನವೊಲಿಸಿ ಅದಕ್ಕೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಕ್ಷೇತ್ರದ ರಸ್ತೆಗಳು ಹಾಳಾಗಿದೆ. ಶೋ ಪುಟಪ್ ನಿಂದ ಜನರ ಸಮಸ್ಯೆ ದೂರವಾಗಲ್ಲ. 330 ಕೋಟಿ ಜೆಜೆಎಂ ಯೋಜನೆ ಅನುದಾನ ಬಂದಿದೆ. ಯಾವ ಹಳ್ಳಿಯ ಜನರಿಗೆ ನೀರು ತಲುಪುತ್ತಿಲ್ಲ. ಶಾಸಕರು ಒಳ್ಳೆಯ ಕಾರ್ಯ ಮಾಡುವ ಸಲಹೆ ನೀಡುತ್ತೇನೆ. 154 ಕಿ.ಮೀ. ಪೈಪ್ ಲೈನ್ ನಲ್ಲಿ ಕಂದಕೂರ ಅವರ ಹೊಲದಲ್ಲಿಯೇ ಪೈಪ್ ಲೈನ್ ಕಾರ್ಯ ನಿಂತಿತ್ತು ಎನ್ನುವ ವಿಷಯ ನಿಮಗೆಲ್ಲಾ ತಿಳಿದಿದೆ. ಸ್ವಲ್ಪ ದಿನ ತಾಳಿ ನಮ್ಮವರೇ ಜೆಡಿಎಸ್ ನಲ್ಲಿದ್ದಾರೆ. ಅವರು ಮರಳಿ ಬರಲಿದ್ದಾರೆ. 10 ವರ್ಷಕ್ಕು ಹೆಚ್ಚು ಹೋರಾಟದ ಫಲ ಈ ಯೋಜನೆ ನಮ್ಮ ರೈತರ ಮೊಗದಲ್ಲಿ ಸಂತಸ ತಂದಿದೆ. – ಸಾಯಬಣ್ಣ ಬೋರಬಂಡ, ಕಾಂಗ್ರೆಸ್ ಹಿರಿಯ ಮುಖಂಡ.
ತಾನು, ಸಾಯಬಣ್ಣ ಬೋರಬಂಡ ಅವರು ಬಡತನದಲ್ಲಿ ಕಷ್ಟಪಟ್ಟು ದುಡಿದು ಬೆಳಿದಿದ್ದೇವೆ. ತಳಮಟ್ಟದ ಬಡ ಜನರ ಕಷ್ಟ ಏನು ಎನ್ನುವುದು ತಿಳಿದಿದ್ದೇವೆ. ಬಡವರಿಗಾಗಿ ಇಡೀ ಜೀವ ಮುಡುಪಾಗಿಡಲು ಸಿದ್ಧ. ಸ್ವಾರ್ಥಕ್ಕೆ ಏನು ಬೇಕಿಲ್ಲ ಎಂದರು.
ಆರಂಭದಲ್ಲಿ ಅವಮಾನ ಮಾಡಿದ್ದು, ಹೋರಾಟ ಯಶಸ್ವಿಯಾಗಿ ಈಗ ಅಭಿನಂದನೆಯಾಗಿದೆ. ಕೆಲವು ಕೊಳಕು ಮನಸ್ಸುಗಳಿವೆ. ನಮ್ಮ ಸಮಸ್ಯೆ ಬಯಲಿಗೆ ಬಂದು ಆಳುವವರ ಗಮನಕ್ಕೆ ತರುವುದು ಮುಖ್ಯ, ಆ ಕಾರ್ಯ ಮಾಡಿದ್ದು ಬೋರಬಂಡ ಎಂದು ಶ್ಲಾಘಿಸಿದರು.
ಶಾಶ್ವತ ನೀರಾವರಿ ಹೋರಾಟ ಸಮಿತಿ ಗೌರವಾಧ್ಯಕ್ಷ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ ನೇರಡಗಂ, ಗವಿಸಿದ್ಧಲಿಂಗೇಶ್ವರ ಸ್ವಾಮಿ ಜಾಕನಳ್ಳಿ, ಚಂದ್ರ ಮಹಾರಾಜ ಸೌದಾಗಾರ್ ಸಾನಿಧ್ಯ ವಹಿಸಿದ್ದರು. ಸಸಿಗೆ ನೇರೆರೆದು, ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ರೈತ ಗೀತೆ ಹಾಡಿ ಗೌರವಿಸಲಾಯಿತು.
ಪೂಜ್ಯ ಶಾಂತವೀರ ಶ್ರೀಗಳು ಆಶೀರ್ವಚನ ನೀಡಿ, 82 ಕೆರೆಗಳು ತುಂಬುವ ಯೋಜನೆ ಮಹತ್ವದ್ದು, ಇದರಿಂದ ಸಾಕಷ್ಟು ಕೃಷಿ ಭೂಮಿ ನೀರಾವರಿಗೆ ಅನುಕೂಲವಾಗಲಿದೆ. ಇದೊಂದು ದೂರದೃಷ್ಟಿಯ ಯೋಜನೆ. ಇದು ರೈತರ ಸಮಾರಂಭ, ಯಾವುದೇ ವ್ಯಕ್ತಿ, ರಾಜಕೀಯ ಸಮಾರಂಭ ಅಲ್ಲ. ಮಠಗಳ ದಾಸೋಹ ಸಂಸ್ಕೃತಿಗೆ ರೈತರೇ ಮೂಲ. ಅವರ ಜಮೀನು ಗಳಿಗೆ ನೀರು ಸಕಾಲಕ್ಕೆ ಕೊಡುವುದು ಆಳುವವರ ಜವಾಬ್ದಾರಿ ಎಂದರು.
ಇದಕ್ಕೂ ಮುನ್ನ ಉಮೇಶ್ ಮುದ್ನಾಳ ಮಾತನಾಡಿ, ಶಾಶ್ವತ ನೀರಾವರಿ ಹೋರಾಟ ಸಮಿತಿ ಕಟ್ಟಿ ಹೋರಾಡಿದ ಹಾದಿಯ ಕುರಿತು ಮಾತನಾಡಿ, ರೈತರು ದೇಶದ ಶಕ್ತಿ. ಜಿಲ್ಲೆಯ ರೈತರ ಕಣ್ಣೀರು ಒರೆಸುವ ಕಾರ್ಯ ಎಲ್ಲರೂ ಕೂಡಿ ಮಾಡೋಣ ಎಂದರು.
ಕೆರೆಗಳಿಗೆ ನೀರು ತುಂಬಿಸುವ ಹೋರಾಟ ಮಾಡಿ ಯಶಸ್ವಿ ಯಾಗಿರುವುದು ಮಾಮೂಲಿ ಮಾತಲ್ಲ. ಸುಮಾರು 82 ಕೆರೆಗಳಿಗೆ ನೀರು ತುಂಬುತ್ತಿವೆ. ಪಕ್ಷ ಬೇಧ ಮರೆತು ಬಡವರು, ಕೂಲಿ ಕಾರ್ಮಿಕರ ಸಮಸ್ಯೆ ನೀಗಿಸಲು ಶ್ರಮಿಸಬೇಕು ಎಂದರು. ಗುಳೆ ಹೋಗುವುದನ್ನು ತಡೆಯಬೇಕು, ಜನರಿಗೆ ಉದ್ಯೋಗ ನೀಡಲಾಗದ ಜಿಲ್ಲಾಡಳಿತಕ್ಕೆ ಮುತ್ತಿಗೆ ಹಾಕೋಣ ಎಂದು ಅಭಿಪ್ರಾಯಪಟ್ಟರು.
ದೇವರಾಜ ನಾಯಕ ಉಳ್ಳೆಸೂಗುರ ಮಾತನಾಡಿ, ವೈಯಕ್ತಿಕ ಅಧಿಕಾರಕ್ಕೆ ಹೋರಾಟ ಮಾಡುವುದು ಸಾಮಾನ್ಯ. ಆದರೇ ಕ್ಷೇತ್ರದ ಜನರ ಕಷ್ಟಕ್ಕೆ ಸ್ಪಂದಿಸಬೇಕು, ಜನರ ಗುಳೆ ತಪ್ಪಿಸಿ ರೈತರಿಗೆ ಅನುಕೂಲವಾಗಬೇಕು ಎಂದು ಪಣ ತೊಟ್ಟಿದ್ದರು. ಬಡವರ ಕಾಳಜಿಯಿಂದ ಹೋರಾಡಿ ಕೆರೆ ತುಂಬಿಸಲು ಹೋರಾಡಿದ ಗಂಡು ಮಗ ಸಾಯಿಬಣ್ಣ ಬೋರಬಂಡ ಎಂದರು.
ಪೂಜ್ಯ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ರೈತರು ದೇಶದ ಬೆನ್ನೆಲುಬು. ಮಾನವ ನಿರ್ಮಿತ ಎಲ್ಲವೂ ನಾಶವಾಗಬಹುದು, ನೀರನ್ನು ಕಂಡುಹಿಡಿಯಲು ಸಾಧ್ಯವಾಗಿಲ್ಲ. ಕಳೆದ 10 ವರ್ಷಗಳಿಂದ ಹೋರಾಟ ರೂಪಿಸಿದ ಕಾರ್ಯಕ್ಕೆ ಫಲ ಸಿಕ್ಕಿದೆ. ಇನ್ನೂ ಹೆಚ್ಚು ಕೆಲಸ ಮಾಡುವ ಜವಾಬ್ದಾರಿ ಹೆಚ್ಚಿಸಿದೆ. ಬೋರಬಂಡವು ಐತಿಹಾಸಿಕ ಹಿನ್ನೆಲೆ ಹೊಂದಿದೆ. ಮಠದ ಶ್ರೀಗಳು ಭಕ್ತರಿಗೆ ಜಮೀನು ದಾನ ನೀಡಿದ್ದಾರೆ ಎಂದು ಸ್ಮರಿಸಿದರು.
ಇದೇ ವೇಳೆ ಲಕ್ಷ್ಮೀಕಾಂತ ರೆಡ್ಡಿ ಪಲ್ಲಾ, ಕಾಶಪ್ಪ ಚಿನ್ನಾಕಾರ, ಕರವೇ ಜಿಲ್ಲಾಧ್ಯಕ್ಷ ಟಿ.ಎನ್. ಭೀಮು ನಾಯಕ, ಸರ್ವ ಸಂಘಟನೆಗಳ ಜಿಲ್ಲಾ ಅಧ್ಯಕ್ಷ ಮಲ್ಲಿಕಾರ್ಜುನ ಜಲ್ಲಪ್ಪನೋರ್ ಮಾತನಾಡಿದರು.
ಚಂದ್ರಶೇಖರ ವಾರದ, ಬಾಲಪ್ಪ ನೀರೆಟಿ, ಅಂಬ್ರೇಷ ರಾಠೋಡ, ಸೈಯದ್ ಅಕ್ಬರ್, ಜಗನ್ನಾಥರೆಡ್ಡಿ ಸಂಬರ್, ವಿಶ್ವನಾಥ ನೀಲಹಳ್ಳಿ, ಸುದರ್ಶನ ರೆಡ್ಡಿ, ಬಸವರಾಜಪ್ಪ , ಎಂ. ಜಗನ್ನಾಥ ರೆಡ್ಡಿ, ಸದಾಶಿವ ರೆಡ್ಡಿ ಪಾಟೀಲ್ ಕಣೆಕಲ್, ವಿಶ್ವಾನಾಥ ದಿಬ್ಬೆ, ಮಲ್ಲಣ್ಣ, ಶರಣಪ್ಪ ಸೋಮಣ್ಣವರ್, ದೇವಪ್ಪ ಗೌಡ ರಾಚನಹಳ್ಳಿ, ಶರಣಪ್ಪ ಮೋಟ್ನಳ್ಳಿ, ಆಶಪ್ಪ, ವೀರಾರೆಡ್ಡಿ ಬೂದುರ, ಜಗದೀಶ್ ಸಜ್ಜನ್, ಡಾ.ಮೈಮೂದ, ಶ್ರೀನಿವಾಸ ಗುಮಡಾಲ್, ವೆಂಕಟರಾಮುಲು ಗೌಡ, ಭೀಮರಾಯ ಎಲ್ಹೇರಿ, ಹಣಮಂತ ದೊಡ್ಡಮನಿ ಸೌರಾಷ್ಟ್ರಹಳ್ಳಿ, ದೇವಿಂದ್ರಪ್ಪ ಅರಕೇರಾ, ವೆಂಕಟರಾಮುಲು ನೀರೆಟಿ, ಶಾಂತಮ್ಮ ಕೇಶ್ವಾರ್, ಆನಂದ ಯಲ್ಲಾಪುರ, ಪರಶುರಾಮ ಚವ್ಹಾಣ, ಮಲ್ಲು ಮ್ಯಾಳಿಕೇರಿ, ಅಹ್ಮದ್ ಅಲ್ವಿ ವೇದಿಕೆಯಲ್ಲಿದ್ದರು.
ವಿಜಯ ನೀರಟಿ, ಶರಣು ಎಲ್ಹೇರಿ, ಶೇಕ್ ಮಹಬೂಬ್, ಜಗದೀಶ್ ನಸಲವಾಯಿ, ಶರಣು ಕಲಾಲ್, ಮುರಳಿಧರ, ರಂಗಸ್ವಾಮಿ, ಚನ್ನಬಸವ ಗಾಜರಕೋಟ, ವೆಂಕಟೇಶ್ ಬೋರಬಂಡ, ಅಬ್ದುಲ್ ರಿಯಾಜ್, ಲಕ್ಷ್ಮಣ ಅಶನಾಳ, ನರೇಶ್ ಮುದಿರಾಜ, ಆಂಜನೇಯ ಕಟ್ಟಿಮನಿ ಸೇರಿದಂತೆ ಅಭಿಮಾನಿಗಳು, ಕಾಂಗ್ರೆಸ್ ಕಾರ್ಯಕರ್ತರು, ಕ್ಷೇತ್ರದ ವಿವಿಧ ಗ್ರಾಮಗಳ ರೈತರು ಭಾಗವಹಿಸಿದ್ದರು.
