80 ನೇ ಸ್ವಾತಂತ್ರ್ಯ ಉತ್ಸವದಲ್ಲಿ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಕಳವಳ | ದೇಶದ ರೈತರಿಗೆ ಏನೂ ಮಾಡಲಾಗಿಲ್ಲ
ಗುರುಮಠಕಲ್: ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 80 ವರ್ಷಗಳು ಕಳೆದರೂ ಯಾವುದೇ ಸರ್ಕಾರಗಳು ರೈತರಿಗೆ ಏನನ್ನೂ ಮಾಡಲಾಗಿಲ್ಲ. ಹಾಗಾಗಿ ಒಂದು ಬಾರಿ ರೈತರ ಎಲ್ಲಾ ಬ್ಯಾಂಕ್ ಗಳ ಸಾಲ ಮನ್ನಾ ಮಾಡಿ, ಋಣಮುಕ್ತವಾಗಿಸಲು ಸರ್ಕಾರಗಳು ಮುಂದಾಗಬೇಕೆಂದು ಎಂದು ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಹೇಳಿದರು.
ಇಲ್ಲಿನ ತಾಲೂಕು ಕ್ರೀಡಾಂಗಣದಲ್ಲಿ ಸಾರ್ವಜನಿಕ ಧ್ವಜಾರೋಹಣ ಆಚರಣ ಸಮಿತಿಯಿಂದ ಆಯೋಜಿಸಿದ್ದ 80ನೇ ಸ್ವಾತಂತ್ರ್ಯೋತ್ಸವದ ಅಧ್ಯಕ್ಷತೆವಹಿಸಿ ಮಾತನಾಡಿದರು.
ಕ್ಷೇತ್ರದಲ್ಲಿ ಮಳೆಯಾಗಿಲ್ಲ, ರೈತರು ಸಂಕಷ್ಟದಲ್ಲಿದ್ದಾರೆ. ಸರ್ಕಾರ ತಕ್ಷಣವೇ ಬರಗಾಲ ಪೀಡಿತ ಪ್ರದೇಶ ಎಂದು ಘೋಷಣೆ ಮಾಡಬೇಕು. ರೈತರು ದೃತಿಗೆಡಬಾರದು, ಧೈರ್ಯದಿಂದ ಇರಬೇಕು. ರೈತರು ನಗುಮುಖದಿಂದ ಇರಬೇಕು ಎಂದು ಧೈರ್ಯದ ಮಾತುಗಳನ್ನು ಹೇಳಿದರು.
ಕ್ಷೇತ್ರದ ಸರ್ಕಾರಿ ಕಾರ್ಯಕ್ರಮದಲ್ಲಿ ಹಾರ, ತುರಾಯಿ ಬೇಡ ಪುಸ್ತಕ ನೀಡಲು ಸಲಹೆ ನೀಡಿದರು. ಸಚಿವರು ಬೇರೆ ಪರಿಶೀಲನೆಗೆ ಭೇಟಿ ನೀಡಿದಾಗ ಕೆಂಪು ಮ್ಯಾಟ್ ಹಾಕಿದ್ರೇ, ಹಾನಿ ಹೇಗೆ ತಿಳಿಯಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಗುಳೆ ತಪ್ಪಿಸಿ, ಇಲ್ಲಿನ ಯುವಕರಿಗೆ ಉದ್ಯೋಗ ನೀಡುತ್ತವೆ ಎಂದು ಕಾರ್ಖಾನೆ ಬಂದರೂ, ಜೀವ ತೆಗೆಯುವ ಕೈಗಾರಿಕೆಗಳು ಬರುತ್ತಿವೆ. 80 ವರ್ಷ ಆದರೂ ಹಕ್ಕು, ಮೂಲ ಸೌಕರ್ಯ, ನ್ಯಾಯ ಕೇಳುವ ಪರಿಸ್ಥಿತಿ ಇದೆ. ಇದಕ್ಕೆ ವ್ಯವಸ್ಥೆಯೇ ಕಾರಣ ಎಂದು ತೀವ್ರ ಅಸಮಾಧಾನಗೊಂಡರು.
ಧ್ವಜಾರೋಹಣ ನೆರವೇರಿಸಿ ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ ಮಾತನಾಡಿ, ಸ್ವಾತಂತ್ರ ಹೋರಾಟಗಾರರ ಸಾಕಷ್ಟು ತ್ಯಾಗದ ಪ್ರತೀಕವಾಗಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದೆ. ದೇಶಕ್ಕಾಗಿ ಸರ್ವಸ್ವ ಅರ್ಪಿಸಿದ ಮಹನೀಯರನ್ನು ಎಂದೆಂದಿಗೂ ಸ್ಮರಣೀಯರು ಎಂದರು.
ಪುರಸಭೆ ಕಾರ್ಯಾಲಯ: ಪುರಸಭೆ ಮುಖ್ಯಾಧಿಕಾರಿ ಶರಣಪ್ಪ ಎಂ, ಮಾತನಾಡಿ, ಮಹಾತ್ಮ ಗಾಂಧೀಜಿ, ಸರ್ದಾರ್ ವಲ್ಲಭಭಾಯ್ ಪಟೇಲ್ ಸೇರಿದಂತೆ ಹಲವು ನಾಯಕರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ್ದಾರೆ ಎಂದು ಸ್ಮರಿಸಿದರು. ದೇಶಭಕ್ತರಾಗಿ, ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಸ್ವಾತಂತ್ರ್ಯ ಬಂದಿದ್ದು, ಎಲ್ಲರನ್ನೂ ಸಮಾನವಾಗಿ ಕಂಡಾಗ ಸ್ವಾತಂತ್ರಕ್ಕೆ ನಿಜವಾಗಿ ಅರ್ಥ ಬರಲು ಸಾಧ್ಯ ಎಂದು ಮಾಜಿ ನಾಮನಿರ್ದೇಶಿತ ಸದಸ್ಯ ಭೀಮಶಪ್ಪ ಮೀನಿಂಟಿ ಹೇಳಿದರು.
ಸಾರ್ವಜನಿಕ ಕಾರ್ಯಕ್ರಮದಲ್ಲಿ ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಚಂದು ಜಾಧವ್ ವಿಶೇಷ ಉಪನ್ಯಾಸ ನೀಡಿದರು. ತಾ.ಪಂ. ಅಧಿಕಾರಿ ಅಂಬ್ರೇಷ ಪಾಟೀಲ್, ಮುಖ್ಯಾಧಿಕಾರಿ ಶರಣಪ್ಪ ಎಂ, ಡಾ. ನೀಲಾಂಬಿಕ, ಗ್ರೇಡ್ 2 ನರಸಿಂಹ ಸ್ವಾಮಿ, ಪಿಐ ದೌಲತ್ ಎನ್ ಕೆ, ಶರಣಬಸವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಶಿಕಿರಣ ಹಜಾರೆ ಸೇರಿದಂತೆ ಪ್ರಮುಖರಾದ ಶರಣು ಆವುಂಟಿ, ಬಸ್ಸಣ್ಣ ದೇವರಹಳ್ಳಿ, ಪ್ರಕಾಶ ನೀರೆಟಿ, ರವಿ ಪಾಟೀಲ್, ಚಂದುಲಾಲ ಚೌಧರಿ, ಖಾಜಾಮೈನೋದ್ದೀನ್, ಆಶನ್ನ ಬುದ್ಧ, ಬುಡ್ಡಪ್ಪ ಜನಾರ್ಧನ, ವೀರಪ್ಪ ಪ್ಯಾಟಿ, ಬಾಲರಾಜ ದಾಸರಿ, ಅಂಬಾದಾಸ ಜೀತ್ರಿ, ರವಿ ಕೋಟಕೊಂಡಿ, ಬಾಬು ತಲಾರಿ, ವಸಂತ ಹಬೀಬ್, ಮಾಣಿಕ ಮುಕಡಿ, ಹಣಮಂತು ಶನಿವಾರಂ, ಶಿವು ಜಾಡರ್, ಭಾನುಪ್ರಕಾಶ್, ಅಶೋಕ್ ಶನಿವಾರಂ, ನಾಗೇಶ್ ಗದ್ದುಗೆ, ಗೋಪಾಲಕೃಷ್ಣ ಎಂ, ಸೇರಿದಂತೆ ಹಲವು ಗಣ್ಯರು, ಪುರಸಭೆ ಸಿಬ್ಬಂದಿ ಇದ್ದರು. ಶಿಕ್ಷಣ ಸಂಯೋಜಕ ರವೀಂದ್ರ ಚವ್ಹಾಣ ಸ್ವಾಗತಿಸಿದರು.
ಖಾಸಗಿ ಹಾಗೂ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಟ್ಟೇಲಗೇರಾ ಮಕ್ಕಳ ದೇಶಭಕ್ತಿ ಗೀತೆ, ನೃತ್ಯ ನೋಡುಗರ ಮನ ಸೆಳೆಯಿತು. ಇದಕ್ಕೂ ಮೊದಲು ವಿದ್ಯಾ ಜ್ಯೋತಿ ಶಾಲೆ, ಎಸ್ ಎಲ್ ಟಿ ಪಬ್ಲಿಕ್ ಸ್ಕೂಲ್ ಸೇರಿದಂತೆ ವಿವಿಧ ಶಾಲೆಗಳ ಮಕ್ಕಳು ಭಾಗವಹಿಸಿ ಪ್ರದರ್ಶನ ನೀಡಿದರು. ಸಾಧಕರಿಗೆ ಸನ್ಮಾನ: ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳು, ಸಾಧಕರಿಗೆ ಸನ್ಮಾನ ಮಾಡಲಾಯಿತು.
