ಮಾಜಿ ಸಂಸದ ಡಾ.ಉಮೇಶ ಜಾಧವ್ ರಿಂದ ಕೈಗಾರಿಕಾ ಪ್ರದೇಶದ ಭೇಟಿ | ಗುರುಮಠಕಲ್ ನಲ್ಲಿ  ಪತ್ರಿಕಾಗೋಷ್ಠಿ

ಗುರುಮಠಕಲ್: ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದ ದುರ್ಘಟನೆಯಾಗಿ 3 ಜನ ಅಮಾಯಕರ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಪರಿಸರ, ಮಾಲಿನ್ಯ ನಿಯಂತ್ರಣ, ಕೈಗಾರಿಕೆ, ಕಾರ್ಮಿಕ ಇಲಾಖೆ ಉನ್ನತ ಅಧಿಕಾರಿಗಳ ತಂಡ ರಚಿಸಿ ತನಿಖೆ ನಡೆಸಲು ಕಲಬುರಗಿ ಮಾಜಿ ಸಂಸದ ಡಾ.ಉಮೇಶ ಜಾಧವ್ ಸರ್ಕಾರವನ್ನು ಆಗ್ರಹಿಸಿದ್ದಾರೆ.

ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಅಮಾಯಕ ಕಾರ್ಮಿಕರು ಸಾವನ್ನಪ್ಪಿದದ್ದು, ಈ ಭಾಗದ ಜನರ ಆರೋಗ್ಯದ ಮೇಲೇಯೂ ಕಾರ್ಖಾನೆಗಳ ವಿಷಾನಿಲ ದುಷ್ಪರಿಣಾಮ ಬೀರುತ್ತಿದೆ. ಮಕ್ಕಳ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ ಎನ್ನುವ ಮಾಹಿತಿ ಲಭ್ಯವಾಗಿದೆ. ವಿಷಕಾರಿ ನೀರು ಹಳ್ಳಕ್ಕೆ ಬಿಡುತ್ತಿರುವುದು ಅನಾಹುತಕ್ಕೆ ಎಡೆ ಮಾಡಿದಂತಾಗುತ್ತದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.

ದುರ್ಘಟನೆ ಸಂಭವಿಸಿದ ಕಂಪನಿಯಲ್ಲಿ 35 ಜನ ಕೆಲಸ ಮಾಡುತ್ತಾರೆ. ಗುರುತಿನ ಚೀಟಿ ಸೇರಿ ಯಾವುದೇ ದಾಖಲೆ ಇಲ್ಲ. ಆಧಾರ್ ಕಾರ್ಡ್ ಮೂಲಕ ಮೃತರ ಗುರುತು ಪತ್ತೆಮಾಡಲಾಗಿದೆ. ಯಾವುದೇ ನಿಯಮ ಪಾಲನೆಯಾಗುತ್ತಿಲ್ಲ ಎಂದು ಆರೋಪಿಸಿದರು. ಕೈಗಾರಿಕೆಗಳು, ಕಾರ್ಮಿಕ ಕಾನೂನು ಪಾಲನೆ ಮಾಡುತ್ತಿಲ್ಲ. ಸ್ಥಳೀಯರಿಗೆ ಉದ್ಯೋಗವೂ ನೀಡುತ್ತಿಲ್ಲ. ಕಾನೂನು ಗಾಳಿಗೆ ತೂರಲಾಗಿದೆ. ಹೊರ ರಾಜ್ಯದವರಿಗೆ ಉದ್ಯೋಗ ನೀಡಲಾಗುತ್ತಿದೆ ಎಂದರು.ವೈದ್ಯಕೀಯ ಸಚಿವ ಡಾ ಶರಣಪ್ರಕಾಶ್ ಪಾಟೀಲ್ ಅವರು ಭೇಟಿ ನೀಡಿದ್ದಾರೆ. ಸರ್ಕಾರ 1 ವಾರದಲ್ಲಿ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿ ಅವರಿಗೆ ಸಂಪರ್ಕಿಸಿದಾಗ 15 ದಿನಕ್ಕೆ ಒಮ್ಮೆ ಭೇಟಿ ನೀಡಿ ಪರಿಶೀಲನೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

1 ವಾರದೊಳಗೆ ನಿಯೋಗ ಸರ್ಕಾರಕ್ಕೆ ಭೇಟಿಯಾಗಿ ಗಮನ ಸೆಳೆಯಲಾಗುವುದು. ಕೈಗಾರಿಕೆಗಳ ಕುರಿತು ಸ್ಥಳೀಯ ಶಾಸಕ ಶರಣಗೌಡ ಕಂದಕೂರ ಅವರು ಸದನದಲ್ಲಿ ಧ್ವನಿ ಎತ್ತಿದ್ದಾರೆ. ಆದರೂ ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ ಎನ್ನುವದು ಬೇಸರದ ಸಂಗತಿ ಎಂದರು.

ಈ ವೇಳೆ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ದೇವದಾಸ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಾಯಕ ಜನಾರ್ಧನ, ಹಿರಿಯ ಮುಖಂಡ ಮಲ್ಲೇಶಪ್ಪ ಬೇಲಿ, ಜಗದೀಶ್ ಮೇಂಗಜಿ, ರಮೇಶ್ ತಾಂಡೂರಕರ್, ಅಮೃತ ಬೋರಬಂಡ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!