ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭೇಟಿ |ರೈತರ ಜಮೀನುಗಳಿಗೆ ಭೇಟಿ ಬೆಳೆ ಪರಿಶೀಲಿಸಿ ಸಂಕಷ್ಟ ಆಲಿಸಿದ ಸಚಿವರು | ಶಾಸಕರಾದ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಶರಣಗೌಡ ಕಂದಕೂರ, ರಾಜಾ ವೇಣುಗೋಪಾಲ್ ನಾಯಕ ಸಾಥ್
ಯಾದಗಿರಿ: ಗುರುಮಠಕಲ್ ಮತಕ್ಷೇತ್ರದ ಕಡೆಚೂರು-ಬಾಡಿಯಾಳ್ ಕೈಗಾರಿಕಾ ಪ್ರದೇಶದಲ್ಲಿ ಬೆಳಗಿನ ಜಾವಾ ಕೆಮಿಕಲ್ ಸೋರಿಕೆಯಿಂದ ಮೂವರು ಕಾರ್ಮಿಕರು ಸಾವನ್ನಪ್ಪಿರುವುದನ್ನು ಗಂಭೀರವಾಗಿ ಪರಿಗಣಿಸಿ, ಘಟನಾ ಸ್ಥಳಕ್ಕೆ ಡಾ .ಶರಣಪ್ರಕಾಶ ಪಾಟೀಲರು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಖಾಸಗಿ ರಾಸಾಯನಿಕ ಕಂಪನಿಯಲ್ಲಿ ಕೆಮಿಕಲ್ ಸೋರಿಕೆಯಾಗಿ ಮೂವರು ಸ್ಥಳದಲ್ಲೇ ಮೃತರಾಗಿದ್ದು, ಇನ್ನಿಬ್ಬರನ್ನು ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸುರಕ್ಷ ಕ್ರಮಗಳನ್ನು ಪಾಲಿಸದೆ ಇರುವುದು ಕಂಡು ಬಂದಿದ್ದು, ತಪ್ಪಿತಸ್ಥ ಕಂಪನಿಯ ವಿರುದ್ಧ ಕಠಿಣ ಕ್ರಮಕ್ಕೆ ಜಿಲ್ಲಾಡಳಿತ ಅಧಿಕಾರಿಗಳಿಗೆ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೃತರ ಕುರಿತು ಮಾಹಿತಿ ಸಂಗ್ರಹಿಸಿ ಪರಿಹಾರ ಮೊತ್ತದ ಬಗ್ಗೆ ಜಿಲ್ಲಾಡಳಿತ ನಿಗಾವಹಿಸಲು ಸೂಚಿಸಿದ್ದು, ಸರ್ಕಾರದ ಮಟ್ಟದಲ್ಲಿ ಚರ್ಚಿಸಿ, ಕೈಗಾರಿಕಾ ಪ್ರದೇಶಗಳಲ್ಲಿನ ಮಾಲಿನ್ಯ ಸೇರಿದಂತೆ ಇಂತಹ ಘಟನೆ ಕುರಿತು ಎಚ್ಚರಿಕೆ ವಹಿಸುವಂತೆ ತಿಳಿಸಿದರು. ಈ ವೇಳೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ, ಮಾಜಿ ಸಚಿವ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚನಸೂರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.
ಬರ ಪರಿಸ್ಥಿತಿ ವೀಕ್ಷಣೆಗೆ : ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಗಡಿ ಜಿಲ್ಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಿಲ್ಲೆಯ ಯಾದಗಿರಿ ಭಾಗದ ರಾಮಸಮುದ್ರ, ಮುಂಡರಗಿ ಹಾಗೂ ಗುರುಮಠಕಲ್ ನ ಕಂದಕೂರ, ಗುಂಜನೂರು ಗ್ರಾಮಗಳಿಗೆ ಸಚಿವರು ಭೇಟಿ ನೀಡಿ ಬರ ಪೀಡಿತ ಪ್ರದೇಶದಲ್ಲಿನ ಬೆಳೆ ವೀಕ್ಷಣೆ ಮಾಡಿದರು. ಬರ ಪೀಡಿತ ಕೃಷಿ ಭೂಮಿಗಳಿದು ಅಲ್ಲಿನ ಪ್ರಮುಖ ಬೆಳೆಯಾದ ಹತ್ತಿ ಬೆಳೆದ ರೈತರ ಜೊತೆ ಮಾತುಕತೆ ನಡೆಸಿ, ಅವರ ಸಂಕಷ್ಟಗಳನ್ನು ಆಲಿಸಿದರು.
ಸ್ಥಳದಲ್ಲಿದ್ದ ಕೃಷಿ ಅಧಿಕಾರಿಗಳಿಗೆ ಬರ ಪೀಡಿತ ಪ್ರದೇಶಗಳಿಗೆ ಖುದ್ದು ಭೇಟಿ ನೀಡಿ ವರದಿ ಸಲ್ಲಿಸುವಂತೆ ಸಚಿವರು ಸೂಚಿಸಿದರು. ಈ ವೇಳೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಹಾಗೂ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.
