ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭೇಟಿ | ಜಿಲ್ಲಾಡಳಿತದಿಂದ ವರದಿ ಪಡೆದು ಕ್ರಮದ ಭರವಸೆ
ಮೂವರು ಕಾರ್ಮಿಕರ ಬಲಿ ಪಡೆದ ರಾಸಾಯನಿಕ ಕಾರ್ಖಾನೆ | ವಿಷಾನಿಲ ಉಸಿರಾಡಿ ಪ್ರಾಣ ಕಳೆದುಕೊಂಡ ಅಮಾಯಕರು | ಸುರಕ್ಷಾ ಕ್ರಮ, ಕಾನೂನು ಪಾಲನೆ ಕುರಿತು ಪೊಲೀಸ, ವಿವಿಧ ಇಲಾಖೆಗಳ ಪರಿಶೀಲನೆ
ಯಾದಗಿರಿ: ಜಿಲ್ಲೆಯ ಕಡೇಚೂರು ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿನ ಸೀಲ್ ಲ್ಯಾಬೊರೇಟರೀಸ್ ವಿರುದ್ಧ ಸ್ಥಳೀಯರು ಪ್ರತಿಭಟನೆಗೆ ಇಗಿಳಿದ ಘಟನೆ ನಡೆದಿದೆ. ಬಳಿಕ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಭರವಸೆ ಹಿನ್ನೆಲೆ ಪ್ರತಿಭಟನೆ ಮೊಟಕುಗೊಳಿಸಲಾಗಿದೆ.
ಕಂಪನಿಯ ನಿರ್ಲಕ್ಷ್ಯಕ್ಕೆ ಅಮಾಯಕ ಜೀವಗಳು ಬಲಿಯಾಗಿದೆ ಎಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾ ಸಂಘಟನೆ ವತಿಯಿಂದ ಕಡೆಚೂರು ಮತ್ತು ಬಾಡಿಯಾಳ ಕೈಗಾರಿಕೆ ಪ್ರದೇಶದಲ್ಲಿ ಸೀಲ್ ಲ್ಯಾಬರೋಟರಿ ಕಂಪನಿ ಎದುರು ಪ್ರತಿಭಟನೆ ನಡೆಸಲಾಯಿತು. 3 ಕಾರ್ಮಿಕರು ಮೃತಪಟ್ಟಿದ್ದು, ಇನ್ನು ಉಳಿದ ನಾಲ್ಕು ಜನಕ್ಕೆ ಗಂಭೀರವಾಗಿ ಗಾಯಗಳಾಗಿರುತ್ತವೆ.
ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಜಯ ಕರ್ನಾಟಕ ರಕ್ಷಣಾ ಸೇನೆ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಎಂ. ಜಲ್ಲಪ್ಪನೋರ ನೇತೃತ್ವದಲ್ಲಿ ಸೈದಾಪೂರ ವಲಯ ಅಧ್ಯಕ್ಷ ವೀರೇಶ್ ಸಜ್ಜನ್, ಕಡೇಚೂರು ಗ್ರಾಮ ಘಟಕ ಅಧ್ಯಕ್ಷ ಶರಣು ಕಡೆಚೂರ್ ಸೇರಿ ಕಾರ್ಮಿಕರ ಕುಟುಂಬಸ್ಥರು, ಗ್ರಾಮಸ್ಥರು ಪ್ರತಿಭಟಿಸಿದರು. ಈ ವೇಳೆ ಜಿಲ್ಲಾಡಳಿತ ಮಧ್ಯಸ್ಥಿಕೆ ವಹಿಸಿ ಸಿಲ್ ಕಂಪನಿ ವತಿಯಿಂದ ಮೃತರ ಕುಟುಂಬಕ್ಕೆ ಪರಿಹಾರ ಘೋಷಣೆ ಮಾಡಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.
ವೈದ್ಯಕೀಯ ಸಚಿವ ಡಾ. ಶರಣಪ್ರಕಾಶ್ ಪಾಟೀಲ್ ಭೇಟಿ: ಜಿಲ್ಲೆಗೆ ಬರ ಪರಿಸ್ಥಿತಿ ವೀಕ್ಷಣೆಗೆ ಆಗಮಿಸಿದ್ದ ಸಚಿವರು, ವಿಷಯ ತಿಳಿದು ಕಡೇಚೂರು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ, ಪರಿಶೀಲಿಸಿದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿ, ಸಂಬಂಧಿಸಿದ ಅಧಿಕಾರಿಗಳಿಂದ ವರದಿ ಪಡೆಯಲಾಗುವುದು. ತಪ್ಪಿತಸ್ಥರ ವಿರುದ್ಧ ಸರ್ಕಾರ ಕ್ರಮವಹಿಸಲಿದೆ ಎಂದು ಹೇಳಿದ್ದಾರೆ.
