ಕಡೇಚೂರು–ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ದುರಂತ | ರಾಸಾಯಿನಿಕ ಸೋರಿಕೆಯಿಂದ 3 ಕಾರ್ಮಿಕರ ಸಾವು, ಇಬ್ಬರಿಗೆ ಚಿಕಿತ್ಸೆ ಮುಂದುವರಿಕೆ | ಸ್ಥಳೀಯರಲ್ಲಿ ಮನೆ ಮಾಡಿದ ಆತಂಕ

ಯಾದಗಿರಿ: ಜಿಲ್ಲೆಯ ಕಡೇಚೂರು – ಬಾಡಿಯಾಳ ಕೈಗಾರಿಕಾ ಪ್ರದೇಶದಲ್ಲಿ ಸೀಲ್ ಲ್ಯಾಬೊರೇಟರೀಸ್ ಫ್ರೈ.ಲಿ.ನಲ್ಲಿ ರಾಸಾಯನಿಕ ಸೋರಿಕೆಯಿಂದ 3 ಕಾರ್ಮಿಕರ ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ. ಮಧ್ಯಪ್ರದೇಶ ಮೂಲದ ವಿಕ್ರಂ ಸಿಂಗ್ (30), ಸಂಜಯ ಸಿಂಗ್ (29) ಹಾಗೂ ತೆಲಂಗಾಣದ ಗಣೇಶ ಎಂಬವರು ಮೃತಪಟ್ಟವರು.ಇನ್ನು 2 ಜನ ಸಾವು ಬದುಕಿನ ಮಧ್ಯೆ ರಾಯಚೂರು ಆಸ್ಪತ್ರೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಮೇಲ್ನೋಟಕ್ಕೆ ಘಟನೆಗೆ ಕೈಗಾರಿಕೆಗಳ ಬೇಜವಾಬ್ದಾರಿ, ಸುರಕ್ಷತಾ ನಿರ್ಲಕ್ಷ್ಯ ವೇ ಕಾರಣ ಎನ್ನುವ ಆರೋಪಗಳು ಕೇಳಿಬರುತ್ತಿವೆ. ಸೈದಾಪೂರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಹಿರಿಯ ಪೊಲೀಸ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.ಘಟನೆಯ ಬಗ್ಗೆ ಗುರುಮಠಕಲ್ ಶಾಸಕ ಶರಣಗೌಡ ಕಂದಕೂರ ಅವರು ಸಾಮಾಜಿಕ ಜಾಲತಾಣ ಇನ್ಸ್ಟಾ  ಅಧಿಕೃತ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ಈ ಬಗ್ಗೆ ಹಲವು ಬಾರಿ ಸದನದಲ್ಲಿ ಮಾತನಾಡಿದರೂ ನಿರ್ಲಕ್ಷ್ಯದಿಂದ ಈ ದುರ್ಘಟನೆ ಸಂಭವಿಸಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಮಾಯಕರ ಜೀವಕ್ಕೆ ಕುತ್ತು : ಈ ಭಾಗದ ರೈತರ ಪರಿಸ್ಥಿತಿ ಕೈಗಾರಿಕೆಗಳಿಗೆ ಜಮೀನು ಕೊಟ್ಟು ಅನಾರೋಗ್ಯ ತರಿಸಿಕೊಳ್ಳುವಂತಾಗಿದೆ. ಕಾರ್ಖಾನೆಗಳಿಂದ ಆರೋಗ್ಯ ಸಮಸ್ಯೆ ಎದುರಾಗುತ್ತಿದೆ ಎಂದು ಸ್ಥಳೀಯರು ಸಾಕಷ್ಟು ಬಾರಿ ಅಳಲು ತೋಡಿಕೊಂಡ ಉದಾಹರಣೆಗಳು ಇದೆ.

ಸೂಕ್ತ ಕ್ರಮಕ್ಕೆ ಒತ್ತಾಯ: ಕಂಪನಿಗಳಿಗೆ ಲಾಭವೇ ಮುಖ್ಯವಾಗಿದ್ದು, ಸುತ್ತಲಿರುವ ಸ್ಥಳೀಯ ಜನರ ಆರೋಗ್ಯದ ಹಿತ ಕಾಪಾಡಲು ಸಂಪೂರ್ಣ ನಿರ್ಲಕ್ಷಿಸುತ್ತಿವೆ, ಕಿಂಚಿತ್ತೂ ಆರೋಗ್ಯ ಕಾಳಜಿವಹಿಸುತ್ತಿಲ್ಲ ಹಾಗಾಗಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರರ ಒತ್ತಾಯ.

ಘಟನೆಯ ಕುರಿತು ಸಮಗ್ರ ತನಿಖೆ ನಡೆಸಿ, ತಪ್ಪಿತಸ್ಥ ಕೈಗಾರಿಕೆಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಪರಿಸರ ಮಾಲಿನ್ಯ, ಸುರಕ್ಷತಾ ಲೋಪ ಎಸಗಿದ ಕಂಪನಿ ಮೇಲೆ ಕ್ರಮಕೈಗೊಳ್ಳಬೇಕು ಎನ್ನುವ ಮಾತು ಕೇಳಿಬರುತ್ತಿದೆ.

Spread the love

Leave a Reply

Your email address will not be published. Required fields are marked *

error: Content is protected !!