ಸೇಡಂ ಆರ್ಯ ವೈಶ್ಯ ಸಂಘದಿಂದ ಷಷ್ಠಿ ಪೂರ್ತಿ ಕಾರ್ಯಕ್ರಮ | 43 ದಂಪತಿಗಳು ಭಾಗಿ | ಯುವ ಪೀಳಿಗೆಗೆ ವೃದ್ಧ ದಂಪತಿಗಳೇ ಆದರ್ಶ

ಸೇಡಂ: ಪಾಲಕರು ಎಂದರೇ ಮೂಗು ಮುರಿಯುವ ಪ್ರಸ್ತುತ ಸನ್ನಿವೇಶದಲ್ಲಿ ಆರ್ಯ ವೈಶ್ಯ ಸಮಾಜದಲ್ಲಿ ಎಲ್ಲರೂ ಹಿರಿಯರನ್ನು ಅತ್ಯಂತ ಪ್ರೀತಿ, ಗೌರವದಿಂದ ಕಾಣುವುದು ಮಾದರಿಯಾಗಿದೆ ಎಂದು ವೇದಮೂರ್ತಿ ಶ್ರೀ ಸತ್ಯಾನಾರಾಯಣ ಮಹಾರಾಜ ಅವರು ಅಭಿಪ್ರಾಯಪಟ್ಟರು.

ಸೇಡಂ ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯ ವೈಶ್ಯ ಸಂಘ, ವಾಸವಿ ಮಹಿಳಾ ಸಂಘ, ವಾಸವಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ಷಷ್ಠಿ ಪೂರ್ತಿ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಆಶೀರ್ವಚನ  ನೀಡಿದರು.60 ವರ್ಷ ಮೇಲ್ಪಟ್ಟವರ ಷಷ್ಠಿ ಪೂರ್ತಿ ಕಾರ್ಯಕ್ರಮ ಅರ್ಥಪೂರ್ಣವಾಗಿದೆ. ಯಾವುದೇ ಕುಟುಂಬದಲ್ಲಿ ತಂದೆ ತಾಯಿ, ಅತ್ತೆ ಮಾವರನ್ನು ಪ್ರೀತಿಯಿಂದ ನೋಡಿಕೊಂಡರೆ ಇನ್ನೊಂದು ಕೊರತೆ ಬರಲು ಸಾಧ್ಯವಿಲ್ಲ. ಹಿರಿಯರ ಆಶೀರ್ವಾದ ಎಲ್ಲರ ಮೇಲಿರಬೇಕು. ಇಂದಿನ ಕಾರ್ಯಕ್ರಮವೇ ಸಂಸ್ಕಾರಕ್ಕೆ ಸಾಕ್ಷಿಯಾಗಿದೆ ಎಂದು ಹೊಗಳಿದರು.

ಆಚಾರ್ಯ ನಾರಾಯಣ ಜೋಶಿ ಮಾತನಾಡಿ, ಶ್ರಾವಣ ಮಾಸದ ಪವಿತ್ರ ಸಂದರ್ಭದಲ್ಲಿ ಷಷ್ಠಿ ಪೂರ್ತಿ ಕಾರ್ಯಕ್ರಮ ಪುಣ್ಯದ ಕೆಲಸ ಎಂದರು. ವಾಸವಿ ಮಾತೆಯ ಸನ್ನಿಧಿಯಲ್ಲಿ  ಹಬ್ಬದ ವಾತಾವರಣ ಮನೆ ಮಾಡಿದೆ ಎಂದರು. ೬೦ ವರ್ಷ ತುಂಬಿದ ವ್ಯಕ್ತಿಯು ಲೌಕಿಕ ಜವಾಬ್ದಾರಿಗಳಿಂದ (ಸಂಸಾರದ ಹೊಣೆಗಳು) ಮುಕ್ತಿ ಪಡೆದು, ಆಧ್ಯಾತ್ಮಿಕತೆಯತ್ತ ಮುಖ ಮಾಡಲು ಮತ್ತು ಮುಂದಿನ ಪೀಳಿಗೆಗೆ ತನ್ನ ಅನುಭವದ ಮೂಲಕ ಮಾರ್ಗದರ್ಶನ ನೀಡಲು ಇದು ಸಕಾಲವಾಗಿದೆ ಎಂದು ಷಷ್ಠಿ ಪೂರ್ತಿಯ ಮಹತ್ವ ತಿಳಿಸಿದರು. ಕಾರ್ಯಕ್ರಮದ ಅಂಗವಾಗಿ ಬೆಳಿಗ್ಗೆಯಿಂದಲೇ ಗಣಪತಿ ಪೂಜೆ,  ಹೋಮ ಹಾಗೂ ಆಯುಷ್ಯ ಸೂಕ್ತ ಹೋಮ ಸೇರಿದಂತೆ ವಿವಿಧ ವಿಶೇಷ ಶಾಂತಿ ಹೋಮಗಳು ವೇದಮೂರ್ತಿಗಳ ನೇತೃತ್ವದಲ್ಲಿ ಶಾಸ್ತ್ರೋಕ್ತವಾಗಿ ಜರುಗಿದವು. ಭವ್ಯ ಷಷ್ಠಿಪೂರ್ತಿ ಕಾರ್ಯಕ್ರಮವು ಅತ್ಯಂತ ಸಡಗರ-ಸಂಭ್ರಮದಿಂದ ನೆರವೇರಿತು.ಸತೀಶ್ ಐನಾಪೂರ ಅವರ ತಂಡ ಕಾರ್ಯಕ್ರಮ ಅತ್ಯಂತ ಯಶಸ್ವಿಯಾಗಿ ಆಯೋಜಿಸಿ, ಮೆಚ್ಚುಗೆಗೆ ಪಾತ್ರವಾಯಿತು.

ಮಕ್ಕಳಿಗೆ ಪ್ರೌಢಾವಸ್ಥೆಗೆ ಬರುವವರೆಗೆ ಪಾಲಕರು ನೋಡಿಕೊಳ್ಳುತ್ತಾರೆ. ಬಳಿಕ ಜವಾಬ್ದಾರಿ ನೀಡಿ ಷಷ್ಠಿ ಪೂರ್ತಿ ಮಕ್ಕಳಿಂದ ಆಚರಣೆ ಮಾಡುವುದು, ನಮ್ಮ ಜವಾಬ್ದಾರಿ ಎಲ್ಲಾ ಮಕ್ಕಳಿಗೆ ಒಪ್ಪಿಸಿ, ನಿವೃತ್ತಿ ಜೀವನ ಕಳೆಯುವ ಹಂತವಾಗಿದೆ ಎಂದು – ಕಮಲಾಕ್ಷಿ ಐನಾಪೂರ

ದ್ವಿತೀಯ ವಿವಾಹದ ಸಂಭ್ರಮ: ಈ ಕಾರ್ಯಕ್ರಮದಲ್ಲಿ ದಂಪತಿಗಳು ಮತ್ತೊಮ್ಮೆ ಪರಸ್ಪರ ಮಾಲೆ ಬದಲಾಯಿಸಿಕೊಂಡು, ಮದುವೆಯ ಧಾರ್ಮಿಕ ವಿಧಿಗಳನ್ನು ಪುನರಾವರ್ತಿಸುತ್ತಾರೆ. ಇದನ್ನು ‘ಮರು ಮದುವೆ’ ಎಂದೂ ಕರೆಯಲಾಗುತ್ತದೆ. ಇದು ದಂಪತಿಗಳ ನಡುವಿನ ದಾಂಪತ್ಯ ಬಂಧವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ.

ದಂಪತಿಗಳಿಗೆ ಗೌರವ: ಷಷ್ಠಿಪೂರ್ತಿ (೬೦ ವರ್ಷ ತುಂಬಿದ) ಆಚರಿಸಿಕೊಂಡ ಸಮಾಜದ ಹಿರಿಯ ದಂಪತಿಗಳಿಗೆ ಸಾಂಪ್ರದಾಯಿಕವಾಗಿ ಮುತ್ತೈದೆಯರು ಆರತಿ ಬೆಳಗಿ, ಸಮಾಜದ ವತಿಯಿಂದ ಶಾಲು ಹೊದಿಸಿ, ಫಲಪುಷ್ಪ ನೀಡಿ ಆತ್ಮೀಯವಾಗಿ ಸನ್ಮಾನಿಸಲಾಯಿತು.ಸಮುದಾಯದ ಒಗ್ಗಟ್ಟು: ಆರ್ಯ ವೈಶ್ಯ ಸಮಾಜದ ಪ್ರಮುಖರು ಮಾತನಾಡಿ, ಹಿರಿಯರ ಅನುಭವ ಮತ್ತು ಮಾರ್ಗದರ್ಶನ ಸಮಾಜದ ಯುವ ಪೀಳಿಗೆಗೆ ಅತ್ಯಂತ ಅಗತ್ಯವಾಗಿದೆ. ಇಂತಹ ಧಾರ್ಮಿಕ ಕಾರ್ಯಕ್ರಮಗಳು ಸಮಾಜದಲ್ಲಿ ಒಗ್ಗಟ್ಟು, ಶಾಂತಿ ಹಾಗೂ ಗೌರವ ತರುತ್ತವೆ ಎಂದು ಅಭಿಪ್ರಾಯಪಟ್ಟರು.

ಗಣ್ಯರ ಉಪಸ್ಥಿತಿ: ಶುಭ ಸಮಾರಂಭದಲ್ಲಿ ಆರ್ಯ ವೈಶ್ಯ ಸಮಾಜದ ಪದಾಧಿಕಾರಿಗಳು, ಪ್ರಮುಖ ವರ್ತಕರು, ಮಹಿಳಾ ಮಂಡಳಿಯ ಸದಸ್ಯರು ಹಾಗೂ ದಂಪತಿಗಳ ಆಪ್ತರು, ಬಂಧು-ಮಿತ್ರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ದಂಪತಿಗಳಿಗೆ ದೀರ್ಘಾಯುಷ್ಯ ಮತ್ತು ಉತ್ತಮ ಆರೋಗ್ಯ ಕೋರಿ ಹರಸಿದರು. ಈ ವೇಳೆ ಪ್ರಮುಖರಾದ ಕನ್ಯಕಾಪರಮೇಶ್ವರಿ ಷಷ್ಠಿ ಪೂರ್ತಿ ಕಾರ್ಯಕ್ರಮ ಸಮಿತಿ ಅಧ್ಯಕ್ಷ ಕೃಷ್ಣ ಐನಾಪೂರ, ಚಂದ್ರಶೇಖರ ಮೈಲಾಪುರ ಅಧ್ಯಕ್ಷರು ಆರ್ಯ ವೈಶ್ಯ ಸಂಘ, ಕವಿತಾ ಮೈಲಾಪುರ ಅಧ್ಯಕ್ಷರು ವಾಸವಿ ಮಹಿಳಾ ಸಂಘ, ಹರೀಶ್ ಐನಾಪೂರ ಅಧ್ಯಕ್ಷರು ವಾಸವಿ ಯುವಜನ ಸಂಘ, ಸಂಧ್ಯಾ ವನಮಾಲ ಅಧ್ಯಕ್ಷರು ವಾಸವಿ ಯುವತಿ ಸಂಘ ಸೇರಿದಂತೆ ಪ್ರಮುಖರು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!