ಬೋರಬಂಡದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಅದ್ಧೂರಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ: ಮೊಸರು ಗಡಿಗೆ, ಬಣ್ಣದ ಓಕುಳಿ ಸಂಭ್ರಮ | ಭವ್ಯ ರಥೋತ್ಸವ

ಗುರುಮಠಕಲ್: ಬೋರಬಂಡ ಪ್ರಸಿದ್ಧ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಹಬ್ಬವನ್ನು ಅತ್ಯಂತ ಸಡಗರ-ಸಂಭ್ರಮ ಹಾಗೂ ಅದ್ಧೂರಿಯಾಗಿ ಆಚರಿಸಲಾಯಿತು.ಸೆಪ್ಟೆಂಬರ್ 4ರ ಮಧ್ಯರಾತ್ರಿ ದೇವಸ್ಥಾನದಲ್ಲಿ ಕೃಷ್ಣ ಜನ್ಮೋತ್ಸವದ ಧಾರ್ಮಿಕ ವಿಧಿವಿಧಾನಗಳು ಶ್ರದ್ಧಾಭಕ್ತಿ ಯಿಂದ ನೆರವೇರಿದವು. ಶನಿವಾರ ಬೆಳಿಗ್ಗೆ ಸ್ಥಳೀಯ ಹನುಮಾನ ದೇವಸ್ಥಾನದಿಂದ ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದವರೆಗೆ ಶ್ರೀಕೃಷ್ಣ ದೇವರ ಭವ್ಯ ಪಲ್ಲಕ್ಕಿ ಉತ್ಸವ ಜರುಗಿತು. ಪಲ್ಲಕ್ಕಿ ಉತ್ಸವದ ಸಾಗುವ ಹಾದಿಯುದ್ದಕ್ಕೂ ಭಕ್ತರು ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು.ಮೊಸರು ಗಡಿಗೆ, ಓಕುಳಿ ಆಟದ ಮಜಾ:ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನದ ಮಹಾದ್ವಾರದ ಮುಂಭಾಗದಲ್ಲಿ ಪ್ರಥಮ ಮೊಸರು ಗಡಿಗೆಯನ್ನು ಯುವಕರು ಉತ್ಸಾಹದಿಂದ ಹೊಡೆದರು. ನಂತರ ಪರಸ್ಪರ ಬಣ್ಣ ಎರಚಾಡುತ್ತಾ ಬಣ್ಣದ ಓಕುಳಿ ಆಟದಲ್ಲಿ ಮಿಂದೆದ್ದರು. ಮುಂದುವರಿದು, ದೇವಸ್ಥಾನದ ಸನ್ನಿಧಿಯಲ್ಲಿ ಯುವಕರ ತಂಡವು ಮತ್ತೊಂದು ಮೊಸರಿನ ಗಡಿಗೆಯನ್ನು ಯಶಸ್ವಿಯಾಗಿ ಒಡೆದು ನೆರೆದಿದ್ದ ಭಕ್ತರಲ್ಲಿ ಹರ್ಷ ಮೂಡಿಸಿತು.ಮನಸೆಳೆದ ಬಂಜಾರ ನೃತ್ಯ:ಉತ್ಸವದ ಪ್ರಮುಖ ಆಕರ್ಷಣೆಯಾಗಿ ಮಹಿಳೆಯರು ಪ್ರದರ್ಶಿಸಿದ ಸಾಂಪ್ರದಾಯಿಕ ಬಂಜಾರ ನೃತ್ಯ ನೋಡುಗರ ಗಮನ ಸೆಳೆಯಿತು. ಸಂಸ್ಕೃತಿ ಮತ್ತು ಆಚರಣೆಗಳತ್ತ ಯುವ ಪೀಳಿಗೆಯನ್ನು ಆಕರ್ಷಕಿಸುವ ಸಂದೇಶ ಸಾಂಸ್ಕೃತಿಕ ಪ್ರದರ್ಶನವು ಸಾರಿತು. ಇದಾದ ಬಳಿಕ ಶ್ರೀಕೃಷ್ಣ ದೇವರಿಗೆ ವೈಭವದ ರಥೋತ್ಸವ, ಊಂಜಲು ಸೇವೆ (ತೊಟ್ಟಿಲೋತ್ಸವ) ಹಾಗೂ ಮಹಾ ಮಂಗಳಾರತಿ ಕಾರ್ಯಕ್ರಮಗಳು ವಿಜೃಂಭಣೆಯಿಂದ ನೆರವೇರಿದವು. ಶ್ರೀ ಲಕ್ಷ್ಮೀ ತಿಮ್ಮಪ್ಪ ದೇವಸ್ಥಾನ ಜೀರ್ಣೋದ್ಧಾರ ಸೇವಾ ಸಂಘದ ವ್ಯವಸ್ಥಾಪಕರಾದ ನರೇಂದ್ರ ರಾಠೋಡ, ಶ್ರೀಮತಿ ಲಕ್ಷ್ಮೀ ಬಾಯಿ, ರಮೇಶ್ ಪವಾರ್, ಕಿಶನ್ ರಾಠೋಡ,ಮೋಹನ, ಹೇಮ್ಲಾ ನಾಯಕ, ರಾಜು ರಾಠೋಡ, ಅಯ್ಯಪ್ಪ ರಾಠೋಡ ಸೇರಿದಂತೆ ಎಸ್ ಎಲ್ ಟಿ ಪಬ್ಲಿಕ್ ಸ್ಕೂಲ್ ಸಿಬ್ಬಂದಿಗಳು, ವಿದ್ಯಾರ್ಥಿಗಳು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಅಸಂಖ್ಯಾತ ಭಕ್ತಾದಿಗಳು ಪಾಲ್ಗೊಂಡು ದೇವರ ದರ್ಶನ ಪಡೆದು ಪುನೀತರಾದರು. ಭಕ್ತರಿಗೆ ತೀರ್ಥ ಪ್ರಸಾದ ವಿತರಣೆ ನಡೆಯಿತು.

Spread the love

Leave a Reply

Your email address will not be published. Required fields are marked *

error: Content is protected !!