ಬಿ.ಎಸ್ ವೀರಾರೆಡ್ಡಿ ಮುದ್ನಾಳ ಕಾಂಗ್ರೆಸ್ ಸೇರ್ಪಡೆ | ಪಕ್ಷ ಬಲವರ್ಧನೆಗೆ ಶ್ರಮಿಸಲು ನಾಯಕರ ಸಂದೇಶ
ಗುರುಮಠಕಲ್: ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ಜನಪರ ಆಡಳಿತ, ಜನಪರ ಯೋಜನೆಗಳನ್ನು ಮೆಚ್ಚಿ ದಿ.ವೀರಬಸವಂತರೆಡ್ಡಿ ಮುದ್ನಾಳ ಅವರ ಅಳಿಯ ಬಿ.ಎಸ್. ವೀರಾರೆಡ್ಡಿ ಅವರು ಕಲಬುರಗಿಯಲ್ಲಿ ಸಂಸದ ಡಾ. ರಾಧಾಕೃಷ್ಣ ದೊಡ್ಡಮನಿ, ಯಾದಗಿರಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಇವರ ಸಮ್ಮುಖದಲ್ಲಿ ಸೇರ್ಪಡೆಯಾದರು.
ಬಳಿಕ ಗುರುಮಠಕಲ್ ನಲ್ಲಿ ತಮ್ಮನ್ನು ಭೇಟಿಯಾದ ಮಾಧ್ಯಮದ ವರ ಜೊತೆ ಮಾತನಾಡಿ, ಡಾ. ಮಲ್ಲಿಕಾರ್ಜುನ ಖರ್ಗೆ ಅವರು ಈ ಭಾಗಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ನಮ್ಮ ಭಾಗದ ಜನರಿಗೆ ಬೇಕಿರುವ ಅಗತ್ಯ ಸೌಲಭ್ಯಗಳನ್ನು ತಲುಪಿಸಲು ಪಕ್ಷದ ನಾಯಕರೊಂದಿಗೆ ಸಮನ್ವಯ ಸಾಧಿಸಿ, ಹಿರಿಯ ನಾಯಕರ ಮಾರ್ಗದರ್ಶನದಲ್ಲಿ ಸ್ಥಳೀಯರೆಲ್ಲಾ ಕೂಡಿ ಕ್ಷೇತ್ರದಲ್ಲಿ ಪಕ್ಷ ಸಂಘಟನೆಗೆ ಶ್ರಮಿಸುತ್ತೇವೆ ಎಂದರು. ಇದೀಗ ಸಕ್ರೀಯ ರಾಜಕೀಯಕ್ಕೆ ಕಾಲಿಟ್ಟಿದ್ದು, ಪಕ್ಷ, ಹಿರಿಯರ ಆಶಯದಂತೆ ಕೆಲಸ ಮಾಡುವೆ. ಪಕ್ಷ ನೀಡುವ ಜವಾಬ್ದಾರಿಯನ್ನು ನಿಭಾಯಿಸುವೆ ಎಂದು ಅಭಿಪ್ರಾಯಪಟ್ಟರು.
ಈ ವೇಳೆ ಗುರುಮಠಕಲ್ ನ ಮಾಜಿ ಶಾಸಕರಾಗಿದ್ದ ಚಿಂಚನಸೂರ ಸೇರಿ ಪ್ರಮುಖ ಸ್ಥಳೀಯ ನಾಯಕರು ಭಾಗವಹಿಸಿದ್ದು, ಗುರುಮಠಕಲ್ ನಲ್ಲಿ ಕಾಂಗ್ರೆಸ್ ಸಾಮೂಹಿಕ ನಾಯಕತ್ವಕ್ಕೆ ಬಲ ನೀಡುತ್ತಿದೆ ಎನ್ನುವ ಸಂದೇಶ ಸಾರಿದಂತೆ ಗೋಚರಿಸುತ್ತಿದೆ.
ಈ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಸರೆಡ್ಡಿ ಮಾಲಿ ಪಾಟೀಲ್ ಅನಪುರ್, ಗುರುಮಠಕಲ್ ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಸುರಪುರ ಶಾಸಕ ರಾಜಾ ವೇಣುಗೋಪಾಲ ನಾಯಕ, ಅಂಬಿಗರ ಚೌಡಯ್ಯ ನಿಗಮದ ಅಧ್ಯಕ್ಷ ಬಾಬುರಾವ್ ಚಿಂಚನಸೂರ್, ಶರಣಪ್ಪ ಮಾನೇಗರ, ಸಾಯಿಬಣ್ಣ ಬೋರಬಂಡ, ಬಾಲಪ್ಪ ನಿರೇಟಿ , ಬಸವರಾಜ ದಳಪತಿ, ಕಾಶಪ್ಪ ಚಿನ್ನಕಾರ, ಅಮೀರಲಿ ಸಾಹುಕಾರ, ಗುಂಡಪ್ಪ ಇಟಕಾಲ, ಶಿವಾನಂದ ದೇವರಹಳ್ಳಿ, ಶರಣಪ್ಪ ಮೋಟ್ನಳ್ಳಿ ಇತರರು ಇದ್ದರು.
