ಅಧ್ಯಕ್ಷ ಸ್ಥಾನಕ್ಕೆ ಮೊಗಲಪ್ಪ ನಾಯ್ಕಿನ್ , ನಾಗರಾಜ್ ಪತಂಗೆ, ದಯಾನಂದ ಹಿರೇಮಠ ನಾಮಪತ್ರ ಸಲ್ಲಿಕೆ | ಉಳಿದ ಸ್ಥಾನಗಳಿಗೆ ಅವಿರೋಧ ಆಯ್ಕೆ
ಗುರುಮಠಕಲ್: ಕಾರ್ಯನಿರತ ಪತ್ರಕರ್ತರ ಸಂಘದ ಗುರುಮಠಕಲ್ ತಾಲೂಕು ಘಟಕದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಚುನಾವಣೆ ಜರುಗಿತು. ಅಧ್ಯಕ್ಷ ಸ್ಥಾನಕ್ಕೆ ಮೊಗಲಪ್ಪ ನಾಯ್ಕಿನ್, ದಯಾನಂದ ಸ್ವಾಮಿ ಹಾಗೂ ನಾಗರಾಜ್ ಪತಂಗೆ ನಾಮಪತ್ರ ಸಲ್ಲಿಸಿದರು.
ಉಳಿದಂತೆ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಯಾದಗಿರಿ ಧ್ವನಿ ಸಂಪಾದಕ ಅನೀಲ ಬಸೂದೆ, ಉಪಾಧ್ಯಕ್ಷ ರವೀಂದ್ರ ಗೌಡ, ಖಜಾಂಚಿಯಾಗಿ ವಿಜಯ ಹಿರೇಮಠ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಧ್ಯಕ್ಷ ಸ್ಥಾನಕ್ಕೆ 3 ಜನರ ಮಧ್ಯೆ ತೀವ್ರ ಪೈಪೋಟಿ ನಡೆದು, 9 ಜನ ಚೀಟಿ ಮೂಲಕ ಮತದಾನ ಮಾಡಿದರು. ಸ್ಪರ್ಧೆಯಲ್ಲಿ ದಯಾನಂದ ಸ್ವಾಮಿ 5 ಮತ ಪಡೆದರೆ, ಮೊಗಲಪ್ಪ 4 ಪಡೆದರು. ಕೇವಲ 1 ಮತದ ಅಂತರದಿಂದ ದಯಾನಂದ ಆಯ್ಕೆಯಾಗಿದ್ದು ಚುನಾವಣಾಧಿಕಾರಿ ಸಿದ್ದಪ್ಪ ಲಿಂಗೇರಿ ಘೋಷಣೆ ಮಾಡಿದರು.
ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಮಾತನಾಡಿ, ಚುನಾವಣೆಯಲ್ಲಿ ಸೋಲು – ಗೆಲುವು ಸಾಮಾನ್ಯ. ಎಲ್ಲರೂ ಒಟ್ಟಾಗಿ ಕುಟುಂಬ ಸದಸ್ಯರಂತೆ ಹೊಂದಾಣಿಕೆಯಿಂದ ಇರಬೇಕು ಎಂದು ಸಲಹೆ ನೀಡಿದರು. ಸಂಘದ ಒಟ್ಟಿಗೆ ಒಳ್ಳೆಯ ಹೆಸರು ತರಲು ಸಹಕರಿಸಿ, ಸಂಘ ವಿರೋಧಿ ಚಟುವಟಿಕೆ ಮಾಡುವುದು ಸರಿಯಲ್ಲ ಎಂದು ಎಚ್ಚರಿಸಿದರು. ಈ ವೇಳೆ ನರಸಪ್ಪ ನಾರಾಯಣೋರ, ಮಾಜಿ ಅಧ್ಯಕ್ಷ ಚೆನ್ನಕೇಶವುಲು ಗೌಡ, ರವೀಂದ್ರ ಗೌಡ, ಬಾಬಾ ಚಿಂತಕುಂಟಿ, ರವಿ ಪತಂಗೆ, ಸಿದ್ದು ಸ್ವಾಮಿ, ಜಗದೀಶ ಪೂಜಾರಿ, ಬಸವರಾಜ ಅಲೆಮನಿ, ರಾಮಲಿಂಗಪ್ಪ ಇತರರು ಇದ್ದರು.
ಮಹಾಪುರುಷರ ಪುತ್ಥಳಿಗಳಿಗೆ ಮಾಲಾರ್ಪಣೆ : ಆಯ್ಕೆ ಬಳಿಕ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ನೂತನ ಪದಾಧಿಕಾರಿಗಳು ಬಸವೇಶ್ವರ ವೃತ್ತದಲ್ಲಿ ಬಸವಣ್ಣನವರ ಸ್ತಬ್ಧ ಚಿತ್ರಕ್ಕೆ ಮಾಲಾರ್ಪಣೆ ಮಾಡಿದರು. ಬಳಿಕ ಬಾ. ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಬಾಬುಜೀ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು. ಖಾಸಾಮಠಕ್ಕೆ ಭೇಟಿ ನೀಡಿ ಪೂಜ್ಯರ ಗದ್ದುಗೆಗೆ ನೇಮಿಸಿದರು.
