ಎಸ್ಸೆಸ್ಸೆಲ್ಸಿ ಪಾಸಾದ ಮಕ್ಕಳಿಗೆ ಮತ್ತು ಸಾಧಕ ಪತ್ರಕರ್ತರಿಗೆ ಸನ್ಮಾನ
ಯಾದಗಿರಿ: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತು ಸಾಧಕ ಪತ್ರಕರ್ತರಿಗೆ ಸನ್ಮಾನ ಹಾಗೂ ಸಂಘದ ಸರ್ವ ಸದಸ್ಯರ ಸಭೆ ಮೇ 18ರಂದು ನಡೆಯಲಿದೆ ಎಂದು ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಹೇಳಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಅಂದು ಬೆಳಿಗ್ಗೆ 10.30ಕ್ಕೆ ಜಿಲ್ಲಾ ಪತ್ರಿಕಾ ಭವನದಲ್ಲಿ ನಡೆಯುವ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಮತ್ತು ಸಾಧಕ ಪತ್ರಕರ್ತರ ಸನ್ಮಾನ ಕಾರ್ಯಕ್ರಮವನ್ನು ಶಾಸಕ ಚೆನ್ನಾರೆಡ್ಡಿ ಪಾಟೀಲ್ ತುನ್ನೂರು ಅವರು ಉದ್ಘಾಟಿಸುವರು. ಶಾಸಕ ಶರಣಗೌಡ ಕಂದಕೂರು ಅವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಿದ್ದಾರೆ ಎಂದು ತಿಳಿಸಿದರು.
ಮುಖ್ಯ ಅತಿಥಿಯಾಗಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಸಮಿತಿ ಅಧ್ಯಕ್ಷ ಶ್ರೇಣಿಕುಮಾರ ಧೋಕಾ, ಎಸ್ಪಿ ಪೃಥ್ವಿಕ್ ಶಂಕರ್, ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಶ್ರೀಧರ್ ಸಾಹುಕಾರ ಅವರು ಆಗಮಿಸಲಿದ್ದಾರೆ ಎಂದು ತಿಳಿಸಿದರು.
ಸಂಘದ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅಧ್ಯಕ್ಷತೆ ವಹಿಸುವರು. ಅತಿಥಿಗಳಾಗಿ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ದಪ್ಪ ಲಿಂಗೇರಿ ಮತ್ತು ರಾಜ್ಯ ಪರಿಷತ್ತಿನ ಸದಸ್ಯ ಸಾಗರ್ ದೇಸಾಯಿ ಆಗಮಿಸಲಿದ್ದಾರೆ ಎಂದು ಹೇಳಿದರು.
ಐವರು ಸಾಧಕ ಪತ್ರಕರ್ತರಿಗೆ ಸನ್ಮಾನ : ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಮಟ್ಟದ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಅಮರೇಶ ಹಿರೇಮಠ, ಟಿ. ನಾಗೇಂದ್ರ, ಸಂಜೀವರಾವ್ ಕುಲಕರ್ಣಿ, ಮಲ್ಲಯ್ಯ ಪೋಲಂಪಲ್ಲಿ ಹಾಗೂ ಬಸವರಾಜ ಕಟ್ಟಿಮನಿ ಅವರನ್ನು ಸನ್ಮಾನಿಸಲಾಗುವುದು.
ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡಿರುವ ಜಿಲ್ಲೆಯ ಪತ್ರಕರ್ತರ ಮಕ್ಕಳಾದ ಯಶೋಧಾ ಚಂದ್ರು ನಾರಾಯಣಪುರ, ರಿಷಿಕಾ ರಾಘವೇಂದ್ರ ಸೈದಾಪುರ, ವರುಣ ಮಹೇಶ ಕಲಾಲ, ಮುತ್ತುರಾಜ್ ರವಿರಾಜ್ ಕಂದಳ್ಳಿ, ಭಾರ್ಗವ ಭೀಮಸೇನರಾವ ಕುಲಕರ್ಣಿ,ಇಕ್ರಾ ಶಹಜಿಯಾ ಖಾಜಾ ಕಲೀಮುದ್ದೀನ್ ಫರೀದಿ, ಸುರಪುರ, ಸಾಯಿಸುಜಲ ಮಲ್ಲಿಕಾರ್ಜುನ ಮುದ್ನೂರ ಶಹಾಪುರ, ಸಂಗೀತಾ ಶಿವಣ್ಣ ಚಿನ್ನಾಕಾರ ಬೂದಿಹಾಳ , ಹರ್ಷಿತ್ ರಾಠಿ ಸೇರಿ 9 ವಿದ್ಯಾರ್ಥಿಗಳಿಗೆ ತಲಾ 5 ಸಾವಿರ ರೂಪಾಯಿ ನಗದು ಬಹುಮಾನ ನೀಡಿ ಗೌರವಿಸಲಾಗುವುದು ಎಂದು ತಿಳಿಸಿದರು.
ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮುಗಿದ ಬಳಿಕ ಸಂಘದ ಸರ್ವ ಸದಸ್ಯರ ಸಭೆ ಜಿಲ್ಲಾಧ್ಯಕ್ಷ ಮಲ್ಲಪ್ಪ ಸಂಕೀನ್ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಸಭೆಯಲ್ಲಿ 2024-2025ನೇ ಸಾಲಿನ ಲೆಕ್ಕ ಪರಿಶೋಧನಾ ವರದಿ ಮಂಡಿಸಿ ಅನುಮೋದನೆ ಪಡೆಯಲಾಗುತ್ತದೆ ಎಂದು ಹೇಳಿದರು. ಸರ್ವ ಸದಸ್ಯರ ಸಭೆಯಲ್ಲಿ ಸಂಘದ ಸದಸ್ಯರು ಎಲ್ಲರು ಭಾಗವಹಿಸುವ ಮೂಲಕ ಸಭೆ ಯಶಸ್ವಿಗೊಳಿಬೇಕು ಎಂದರು.
