ಯಾದಗಿರಿ: ವೀರಶೈವ ಲಿಂಗಾಯತರು ಒಳಪಂಗಡಗಳ ಬೇಧ ಮರೆತು ಒಂದಾದಾಗ ಮಾತ್ರ ರಾಜಕೀಯ ಶಕ್ತಿ ಕಾಪಾಡಿಕೊಳ್ಳಲು ಸಾಧ್ಯ ಎಂದು ಮಾಜಿ ಸಚಿವ ಹಾಗೂ ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಉಪಾಧ್ಯಕ್ಷ ಅಮರೇಗೌಡ ಬಯ್ಯಾಪೂರ ಹೇಳಿದರು.
ಅಖಿಲ ಭಾರತ ವೀರಶೈವ ಮಹಾಸಭಾದ ಜಿಲ್ಲಾ ಘಟಕದಿಂದ ನಗರದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಮಹಾಸಭಾದ ಜಿಲ್ಲಾ ಮತ್ತು ಪದಾಧಿಕಾರಿಗಳ ಸಭೆ ಹಾಗೂ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಒಂದು ಕಾಲದಲ್ಲಿ ಕರ್ನಾಟಕದ ವಿಧಾನಸಭೆಗೆ ನೂರಕ್ಕೂ ಹೆಚ್ಚು ಜನ ವೀರಶೈವ ಲಿಂಗಾಯತ ಸಮಾಜದ ಶಾಸಕರು ಆಯ್ಕೆಯಾಗಿ ಬರುತ್ತಿದ್ದರು. ಆದರೆ ನಾವು ಒಳಪಂಗಡಗಳ ಹೆಸರಲ್ಲಿ ಛಿಧ್ರವಾಗಿರುವುದರಿಂದ ನಮ್ಮ ಸಂಖ್ಯೆ ಈಗ ಅರ್ಧಕ್ಕಿಳಿದಿದೆ.
ನಾವು ರಾಜಕೀಯ ಪ್ರಾಬಲ್ಯ ಪಡೆದು, ಸಂವಿಧಾನಾತ್ಮ ಕವಾದ ಸೌಲಭ್ಯಗಳನ್ನು ಪಡೆಯಬೇಕಾದರೆ ಮತ್ತೆ ನಾವು ಒಂದಾಗಬೇಕು.ಹಾಗಾದಾಗ ಮಾತ್ರ ಆಳುವ ಪಕ್ಷಗಳು ನಮ್ಮ ದನಿಗೆ ಬೆಂಬಲ ನೀಡುತ್ತವೆ ಎಂದರು.
ಇತ್ತೀಚೆಗೆ ಬಂದ ಜಾತಿಗಣತಿ ಅವೈಜ್ಞಾನಿಕ ಮತ್ತು ಅದನ್ನು ಜಾರಿಗೊಳಿಸಲೇಬಾರದು ಎಂದು ನಾವೆಲ್ಲರೂ ಒಕ್ಕೊರಲಿನಿಂದ ಒತ್ತಾಯಿಸಿದ್ದಕ್ಕಾಗಿಯೇ ಸರಕಾರ ಅದನ್ನು ಕೈಬಿಟ್ಟಿದೆ ಎಂದರು.
ಮುಂಬರುವ ಜಾತಿಗಣತಿಯಲ್ಲಿ ನಾವು ಯಾವುದೇ ಒಳಪಂಗಡಗಳಿಗೆ ಸೇರಿದ್ದರೂ ಸಹ ಲಿಂಗಾಯತ ಅನ್ನುವುದನ್ನು ಜೊತೆಯಲ್ಲಿ ಸೇರಿಸಿಕೊಂಡಾಗ ಮಾತ್ರ ನಮ್ಮ ನೈಜ ಸಂಖ್ಯೆ ತಿಳಿಯಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ನಮ್ಮ ಸಮಾಜದ ಪ್ರಮುಖರು ಎಲ್ಲರಿಗೂ ತಿಳುವಳಿಕೆ ನೀಡುವ ಕೆಲಸ ಮಾಡಬೇಕು ಎಂದರು.
ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ನಟರಾಜ ಸಾಗರನಹಳ್ಳಿ ಮಾತನಾಡಿ ಪ್ರತಿಜಿಲ್ಲೆಯಲ್ಲೂ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಹಾಸ್ಟೆಲ್ ನಿರ್ಮಾಣ ಹಾಗೂ ವೀರಶೈವ ಲಿಂಗಾಯತ ಭವನ ನಿರ್ಮಾಣ ಮಾಡಬೇಕು ಎಂಬುದು ರಾಜ್ಯ ಘಟಕದ ಯೋಜನೆ ಯಾಗಿದ್ದು, ಸ್ಥಳೀಯ ಶಾಸಕರು ಹಾಗೂ ಸಚಿವರು ನಮ್ಮ ಸಮಾಜಕ್ಕೆ ಸೂಕ್ತ ನಿವೇಶನ ಒದಗಿಸುವ ಕಾರ್ಯ ಮಾಡಬೇಕೆಂದು ಮನವಿ ಮಾಡಿದರು.
ಮುಂಬರುವ ದಿನಗಳಲ್ಲಿ ವೀರಶೈವ ಲಿಂಗಾಯತ ಸಮಾಜದ ಜನಗಣತಿಯನ್ನು ಅಖಿಲ ಭಾರತ ವೀರಶೈವ ಮಹಾಸಭಾದ ವತಿಯಿಂದ ಮಾಡುವ ಯೋಚನೆ ಯಿದ್ದು, ಅದರ ಸಾಧ್ಯಾಸಾಧ್ಯತೆಗಳ ಬಗ್ಗೆ ವರದಿ ನೀಡಲು ಉನ್ನತ ಮಟ್ಟದ ಸಮಿತಿ ರಚನೆ ಮಾಡಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಸದಸ್ಯತ್ವ ಅಭಿಯಾನಕ್ಕೆ ಅಮರೇಗೌಡ ಬಯ್ಯಾಪೂರ ಚಾಲನೆ ನೀಡಿ ಸಿದ್ಧಲಿಂಗರೆಡ್ಡಿ ಹಳಿಮನಿ ಮಲ್ಹಾರ ಹಾಗೂ ಶಾಂತರೆಡ್ಡಿ ದೇಸಾಯಿ ನಾಯ್ಕಲ್ ಅವರಿಗೆ ಸಾಂಕೇತಿಕವಾಗಿ ಸದಸ್ಯತ್ವ ರಸೀದಿ ನೀಡಿ ಚಾಲನೆ ನೀಡಿದರು.
ವೇದಿಕೆಯ ಮೇಲೆ ಶಾಸಕ ಚನ್ನಾರೆಡ್ಡಿ ಪಾಟೀಲ ತುನ್ನೂರ, ಸಮಾಜದ ಮುಖಂಡರಾದ ಮಹೇಶರೆಡ್ಡಿ ಮುದ್ನಾಳ, ಶರಣಪ್ಪಗೌಡ ಕರೆಡ್ಡಿ ಮಲ್ಹಾರ,ಅಯ್ಯಣ್ಣ ಹುಂಡೇಕಾರ,ನ್ಯಾಯವಾದಿ ಎಸ್.ಬಿ.ಪಾಟೀಲ, ಅವಿನಾಶ್ ಜಗನ್ನಾಥ,ಯುವ ಘಟಕದ ಜಿಲ್ಲಾಧ್ಯಕ್ಷ ಸುರೇಶ ಜಾಕಾ ಇದ್ದರು.
ಮಹಾಸಭಾದ ಜಿಲ್ಲಾಧ್ಯಕ್ಷ ಚನ್ನಪ್ಪಗೌಡ ಮೋಸಂಬಿ ಅಧ್ಯಕ್ಷತೆ ವಹಿಸಿ ಅತಿಥಿಗಳನ್ನು ಸ್ವಾಗತಿಸಿದರು. ಸಭೆಯಲ್ಲಿ ಮಹಾಸಭೆಯ ಜಿಲ್ಲಾ ಪದಾಧಿಕಾರಿಗಳು ಸೇರಿದಂತೆ ಸುರಪುರ,ಶಹಾಪುರ,ಯಾದಗಿರಿ ತಾಲ್ಲೂಕಿನ ಅಧ್ಯಕ್ಷರು, ಸಮಾಜದ ಮುಖಂಡರು ಹಾಜರಿದ್ದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಾ.ಸಿದ್ಧರಾಜರೆಡ್ಡಿ ಪ್ರಾಸ್ತಾವಿಕ ಮಾತನಾಡಿ ವಂದಿಸಿದರು.
