ಶ್ರೀ ರಾಚೋಟಿ ವೀರಣ್ಣ ದೇವಾಲಯ ಭಕ್ತರಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಕೆ
ಯಾದಗಿರಿ : ದೇಶದಲ್ಲಿ ಅನಾದಿ ಕಾಲದಿಂದ ದೇವಸ್ಥಾನಗಳಿಗೆ ತಮ್ಮದೇ ಆದ ಮೌಲ್ಯಗಳಿವೆ, ಅದರಲ್ಲಿ ಒಂದಾದ ಗಿರಿ ಜಿಲ್ಲಾ ಕೇಂದ್ರಕ್ಕೆ ಹೊಂದಿಕೊಂಡಿರುವ ಐತಿಹಾಸಿಕ ಹಿನ್ನೆಲೆಯ ಶ್ರೀ ರಾಚೋಟಿ ವೀರಣ್ಣ ದೇವಸ್ಥಾನ ಸುತ್ತ-ಮುತ್ತಲಿರುವ ಸರ್ಕಾರಿ ಜಮೀನನ್ನು ಗುರುತಿಸಿ, ಅಲ್ಲಿನ ಪರಿಸರವನ್ನು ರಕ್ಷಣೆ ಮಾಡಬೇಕೆಂದು ಮುಖ್ಯಮಂತ್ರಿಗಳ ವಿಶ್ರಾಂತ ಹೆಚ್ಚುವರಿ ಕಾರ್ಯದರ್ಶಿ ಎಂ. ಲಕ್ಷೀ ನಾರಾಯಣ ಆಗ್ರಹಿಸಿದರು.

ನಗರದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಜಿಲ್ಲಾ ಘಟಕ, ಕರವೇ ಉತ್ತರ ಕರ್ನಾಟಕ ಘಟಕ ಯಾದಗಿರಿಯ ಶ್ರೀ ರಾಚೋ ಟಿ ವೀರಣ್ಣ ಸದ್ಭಕ್ತ ಮಂಡಳಿ ಹಮ್ಮಿಕೊಂಡಿದ್ದ ಬೃಹತ್ ಜನ ಜಾಗೃತಿ ಪ್ರತಿಭಟನಾ ಪಾದಯಾತ್ರೆ ಜಿಲ್ಲಾಧಿಕಾರಿಗಳ ಕಛೇರಿ ಮುಂಭಾಗದಲ್ಲಿ ಸಮಾಗಮಗೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ನಾಡಿನಲ್ಲಿ ನಾವೇಲ್ಲರೂ ನಾನಾ ದೇವಸ್ಥಾನಗಳ ಧಾರ್ಮಿಕ ಉತ್ಸವಗಳನ್ನು ಆಚರಿಸಿಕೊಂಡು ಬಂದಿದ್ದೇವೆ, ತಾವು ಈ ಭಾಗದಲ್ಲಿ ಸಹಾಯಕ ಆಯುಕ್ತರಾಗಿ, ಜಿಲ್ಲಾಧಿಕಾರಿಗಳಾಗಿ ಕಾರ್ಯನಿರ್ವಹಿಸಿ, ಇಲ್ಲಿನ ಸ್ಥಿತಿ-ಗತಿಗಳ ಅರಿವು ನನಗಿದೆ, ಸರ್ವೆ. ನಂ, ೬೭೧ರಲ್ಲಿ ಒಟ್ಟು ೯೬ ಎಕರೆ ಸರ್ಕಾರಿ ಭೂಮಿ ದೇವಸ್ಥಾನ ಸುತ್ತ-ಮುತ್ತವಿದೆ, ಬದಲಾದ ಕಾಲಗಟ್ಟದಲ್ಲಿ ಇಲ್ಲಿನ ಪರಿಸರ ಹಾಳಾಗಿ ದೇವಸ್ಥಾನಕ್ಕೆ ದಕ್ಕೆ ಬರುತ್ತಿದೆ, ಅಲ್ಲದೇ ಸರ್ಕಾರಿ ಜಮೀನನ್ನು ಕೆಲ ಪ್ರಭಾವಿಗಳು ಒತ್ತುವರಿ ಮಾಡಿಕೊಂಡಿದ್ದಾರೆ, ಕಂದಾಯ ಇಲಾಖೆ ಅಧಿಕಾರಿಗಳು ಕೂಡಲೇ ಪ್ರಾಮಾಣಿಕವಾಗಿ ಸರ್ವೆ ಮಾಡಿ, ಗಡಿ ರೇಖೆ ಗುರುತಿಸಿ, ಸೀಮೆ ಕಲ್ಲುಗಳನ್ನು ಹಾಕಿ ರಕ್ಷಿಸಲು ಕ್ರಮ ಕೈಗೊಳ್ಳಬೇಕೆಂದು ಹೇಳಿದರು.
ಕರವೇ ಉತ್ತರ ಕರ್ನಾಟಕ ಅಧ್ಯಕ್ಷ ಶರಣು ಗದ್ದುಗೆ ಮಾತನಾಡಿ, ರಾಚೋಟಿ ವೀರಣ್ಣ ದೇವಸ್ಥಾನಕ್ಕೆ ಎಲ್ಲಾ ವರ್ಗದ ಜನರು ದರ್ಶನಕ್ಕೆ ಆಗಮಿಸುತ್ತಾರೆ, ಆದರೆ ಸುತ್ತ-ಮುತ್ತಲೂ ಯಾವುದೇ ಧಾರ್ಮಿಕ ಕಾರ್ಯಕ್ರಮ ಮಾಡಲು ತೊಂದರೆಯಾಗುತ್ತಿದೆ, ಜಿಲ್ಲಾಡಳಿತ ಭಕ್ತರ ಭಾವನೆಗಳನ್ನು ಅರಿತು ಜಮೀನನ್ನು ಸರ್ವೇ ಮಾಡಿ, ದೇವಸ್ಥಾನದಲ್ಲಿ ನಡೆಯುವ ಶ್ರದ್ಧಾ ಭಕ್ತಿಯ ಸಮಾರಂಭಗಳಿಗೆ ಅನುಕೂಲತೆ ಮಾಡಿ ಕೊಡಬೇಕೆಂದು ಒತ್ತಾಯಿಸಿದರು.
ಬಿಜೆಪಿ ಜಿಲ್ಲಾ ಮಾಜಿ ಜಿಲ್ಲಾಧ್ಯಕ್ಷ ಡಾ. ಶರಣಭೂಪಾಲ ರಡ್ಡಿ ನಾಯ್ಕಲ್ ಹಾಗೂ ಬಿಜೆಪಿ ಯುವ ಮುಖಂಡ ಮಹೇಶರಡ್ಡಿ ಮುದ್ನಾಳ ಮಾತನಾಡಿ, ಶ್ರೀ ರಾಚೋಟಿ ವೀರಣ್ಣ ದೇವಸ್ಥಾನ ಜಿಲ್ಲಾ ಕೇಂದ್ರದ ಅಸ್ಮಿತೆಯಾಗಿದೆ, ಅದರ ರಕ್ಷಣೆ ಹಾಗೂ ಅಭಿವೃದ್ಧಿಪಡಿಸುವುದು ಎಲ್ಲರ ಕರ್ತವ್ಯವಾಗಿದೆ. ಜಿಲ್ಲಾಧಿಕಾರಿಗಳು ಸರ್ಕಾರದ ಆಸ್ತಿ ರಕ್ಷಿಸುವ ನಿಟ್ಟಿನಲ್ಲಿ ಯಾರೇ ತಪ್ಪು ಮಾಡಿದರು ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.
ಪ್ರತಿಭಟನೆಕಾರರು ಜಿಲ್ಲಾಧಿಕಾರಿಗೆ ಮನವಿ ಪತ್ರ ಸಲ್ಲಿಸಿ ಕ್ರಮಕ್ಕೆ ಮನವಿ ಮಾಡಿದರು, ಅದಕ್ಕೆ ಉತ್ತರಿಸಿದ ಜಿಲ್ಲಾಧಿಕಾರಿಗಳು ಈಗಾಗಲೇ ನಾವೂ ಜಮೀನು ಸರ್ವೆ ಮಾಡಲು ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದೇವೆ, ಬರುವ ದಿನಗಳಲ್ಲಿ ಸಮಸ್ಯೆ ಪರಿಹಾರಕ್ಕೆ ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ನೀಡಿದರು,
ಈ ಸಂದರ್ಭದಲ್ಲಿ ಜಗದ್ಗುಗಳಾದ ಡಾ. ರಾಚೋಟೇಶ್ವರ ಶಿವಾಚಾರ್ಯ ಮಹಾಸ್ವಾಮಿಜಿ, ಶ್ರೀ ಮುನೀಂದ್ರ ಶಿವಾಚಾರ್ಯರು ಕಟ್ಟಿಮನಿ ಹಿರೇಮಠ ಹಲಕಟ್ಟಿ, ಶ್ರೀ ಸಿದ್ದಲಿಂಗ ಸ್ವಾಮಿಜಿ ರಾವೂರ, ಕಲ್ಕೇರಿ, ನಾವದಗಿ ಶ್ರೀಗಳು, ವಿಶ್ವ ಸೇವಾ ಮಿಷನ್ ಅಧ್ಯಕ್ಷ ವಿಶ್ವನಾಥ ಸ್ವಾಮಿಜಿ, ಅಮರೇಶ ಹಿರೇಮಠ, ಸಿದ್ದಯ್ಯಸ್ವಾಮಿ ದಂಡಗುಂಡ ಬಸವಣ್ಣ ದೇವಸ್ಥಾನ, ಮಹಾದೇವಯ್ಯ ಕರದಳ್ಳಿ, ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಚನ್ನಪ್ಪಗೌಡ ಮೋಸಂಬಿ, ನಗರಸಭೆ ಅಧ್ಯಕ್ಷೆ ಲಲಿತಾ ಅನಪೂರ, ಚಂದ್ರಶೇಖರರಡ್ಡಿ ಪರಸರಡ್ಡಿ ನಾಲವಾರ, ಬಸವಂತರಾಯಗೌಡ ಮಾಲಿ ಪಾಟೀಲ್, ಶರಣಪ್ಪ ಗುಳಗಿ, ಹಣಮಂತ ಇಟಗಿ, ಬಿಜೆಪಿ ಜಿಲ್ಲಾ ಯುವ ಘಟಕದ ಅಧ್ಯಕ್ಷ ಶ್ರೀಧರ ಸಾಹುಕಾರ, ಶಿವು, ವಿಶ್ವನಾಥ ಶಿರವಾರ, ಡಾ. ಸಿದ್ದರಾಜರಡ್ಡಿ ನಾಲವಾರ, ಡಾ. ಜ್ಯೋತಿಲತಾ ತಳಬಿಡಿಮಠ, ಅನ್ನಪೂರ್ಣ ಸಿ. ಪಾಟೀಲ್, ಸುರೇಶ ಜಾಕಾ, ದೇವಿಂದ್ರನಾಥ ನಾದ, ಅಡಿವೆಪ್ಪ ಜಾಕಾ, ರಾಜುಸ್ವಾಮಿ, ರಮೇಶ ದೊಡ್ಡಮನಿ ಸೇರಿ ಸಹಸ್ರಾರು ಭಕ್ತರು ಉಪಸ್ಥಿತರಿದ್ದರು.
