ಪಟ್ಟಣದ ಕಾಕಲವಾರ ಬೇಸ್ ಆಂಜನೇಯ ಸನ್ನಿಧಿಯಲ್ಲಿ ನಡೆಯುವ ಗಡಿ ಭಾಗದ ಪ್ರಸಿದ್ಧ ಗ್ರಾಮೀಣ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿಯು ನೆರೆದ ಸಾವಿರಾರು ನೋಡುಗರ ಮನ ಸೆಳೆಯಿತು | ಶ್ರಾದ್ಧ ಭಕ್ತಿಯ ಪಂಚಾಯತ್ ಮೊಹಲ್ಲಾ ಹನುಮಾನ ಮಂದಿರ ಖಾಂಡ
ಗುರುಮಠಕಲ್: ಪಟ್ಟಣದ ಕಾಕಲವಾರ ಬೇಸ್ ನ ಪ್ರಸಿದ್ಧ ಆಂಜನೇಯ ಸ್ವಾಮಿ ಉತ್ಸವವು ಶ್ರದ್ಧಾ ಭಕ್ತಿಯಿಂದ ಸಂಪನ್ನಗೊಂಡಿತು.
ಪ್ರತಿವರ್ಷದ ಸಂಪ್ರದಾಯದಂತೆ ಈ ಬಾರಿ ಬೆನಕನ ಅಮವಾಸೆಯು ಶ್ರಾವಣಮಾಸದ ಕೊನೆಯ ಶನಿವಾರದಂದು ಬಂದ ಪ್ರಯುಕ್ತ ಪಟ್ಟಣದ ಎಲ್ಲಾ ದೇವಸ್ಥಾನಗಳಲ್ಲಿ ಆಂಜನೇಯ ಸ್ವಾಮಿಗೆ ವಿಶೇಷ ಅಭಿಷೇಕ ಅಲಂಕಾರ ನಡೆದವು.
ಆಂಜನೇಯ ಸ್ವಾಮಿಯ ಎತ್ತರದ ಮೂರ್ತಿಯನ್ನು ಪಟ್ಟಣದ ಮುಖ್ಯರಸ್ತೆಗಳಲ್ಲಿ ಜಯಘೋಷಗಳ ನಡುವೆ ಡೊಳ್ಳು ಭಾಜಾ ಭಜಂತ್ರಿ ಮತ್ತು ಭಜನೆಯ ಮೂಲಕ ಮೆರಣವಣಿಗೆ ಮಾಡಲಾಯಿತು.
ಈ ಗಡಿಭಾಗದ ಪ್ರಸಿದ್ದ ಗ್ರಾಮೀಣ ಭಾಗದ ಪ್ರಮುಖ ಕ್ರೀಡೆಯಾದ ಕೈಕುಸ್ತಿ ಪಂದ್ಯಾವಳಿಯು ದೇವಸ್ಥಾನದ ಪ್ರಮುಖ ಆಕರ್ಷಣೆಯಾಗಿತ್ತು. ಬೆಳಿಗ್ಗೆಯಿಂದ ರಾತ್ರಿವರೆಗೆ ನಡೆಯುವ ಈ ಪಂದ್ಯವಳಿಗಳಲ್ಲಿ ಭಾಗವಹಿಸಲು ಸುತ್ತಮುತ್ತಲಿನ ಗ್ರಾಮಗಳು, ತಾಂಡಾಗಳು ಸೇರಿದಂತೆ ತೆಲಂಗಾಣ ರಾಜ್ಯದ ಗ್ರಾಮಗಳ ಭಕ್ತಾದಿಗಳು ಆಗಮಿಸುವುದು ವಿಶೇಷವಾಗಿದೆ.
ದೇವಸ್ಥಾನ ಆಡಳಿತ ಮಂಡಳಿ ವತಿಯಿಂದ ಬಂದ ಭಕ್ತರಿಗೆ ಅನ್ನಸಂತರ್ಪಣೆ ಜೊತೆಗೆ ಪಂದ್ಯಾವಳಿಗಳನ್ನು ವೀಕ್ಷಿಸಲು ಅನುಕೂಲ ಮಾಡಲಾಗಿತ್ತು. ಕಾಕಲವಾರ ಬೇಸ್ ಆಂಜನೇಯ ಸ್ವಾಮಿ ಜಾತ್ರಾ ಉತ್ಸವಕ್ಕೆ ಆಗಮಿಸುವ ಜನರ ಸುರಕ್ಷತೆಗಾಗಿ ಪೊಲೀಸರು ಸೂಕ್ತ ಭದ್ರತಾ ವ್ಯವಸ್ಥೆ ಮಾಡಿದ್ದರು.
ಪಂಚಾಯತ ಮೊಹಲ್ಲಾದಲ್ಲಿ ಭಕ್ತಿಯ ಹನುಮಾನ ದೇವರ ಖಾಂಡ: ಪಟ್ಟಣದ ಹೃದಯ ಭಾಗದ ಪಂಚಾಯತ್ ಮೊಹಲ್ಲಾ ಹನುಮಾನ ಮಂದಿರದಲ್ಲಿ ಶ್ರದ್ಧಾ ಭಕ್ತಿಯ ಖಾಂಡ ಕಾರ್ಯಕ್ರಮ ಅಮವಾಸೆಯಂದು ನೆರವೇರಿತು.
ರಾಜ್ಯ ಸೇರಿ ನೆರೆ ರಾಜ್ಯಗಳ ಸಾವಿರಾರು ಭಕ್ತರು ಭಾಗವಹಿಸಿದ್ದರು. ಈ ವೇಳೆ ದೇವಸ್ಥಾನ ಸಮಿತಿಯ ಗೌರವಾಧ್ಯಕ್ಷ ಶ್ರೀನಿವಾಸ ಗುಮಡಾಲ್, ರಾಮಕಿಶನ ರಾವ ಗೊಂಗಲೆ, ಅಧ್ಯಕ್ಷ ಚಂದುಲಾಲ ಚೌಧರಿ, ಯಶವಂತರಾವ, ವಸಂತರಾವ ಹಬೀಬ್, ನರೇಶ್ ಗೊಂಗಲೆ, ಜಗದೀಶ ಶ್ರೀಗಿರಿ, ಹಣಮಂತರಾವ ಶ್ರೀಗಿರಿ, ಗೋವಿಂದರಾವ ಮೇಂಗಜಿ, ಚಿಂಟು ಶ್ರೀಗಿರಿ, ಮಾಣಿಕಪ್ರಸಾದ ಹೌಜಿ, ಮೋಹನ್ ಬುರಬುರೆ, ಯಶವಂತರಾವ ಮೇಂಗಜಿ, ನರೇಶ್ ಗೊಂಗಲೆ, ನಾಗೇಶ್ ಚೌಧರಿ, ದತ್ತುರಾವ ಹೌಜಿ, ಮಾಣಿಕ್ ಪ್ರಭು ಚೌಧರಿ, ವೆಂಕಟರಾವ ಫುಲಝಾಡ್, ಸತೀಶ ಜೀತ್ರಿ, ಅಂದಾದಾಸ ಜೀತ್ರಿ, ಲಕ್ಷ್ಮಣರಾವ್ ಚೌಧರಿ, ಭೀಮರಾವ ಸುಲ್ತಾನಪುರ, ನಾಗೇಶ ಚೌಧರಿ ಸೇರಿದಂತೆ ಅರ್ಚಕ ಅಶೋಕ ಶ್ರೀಗಿರಿ ಇತರರು ಇದ್ದರು.
