ಜಿಲ್ಲಾ ಕ್ರೀಡಾಂಗಣಕ್ಕೆ ಅಗತ್ಯ ಮೂಲಸೌಕರ್ಯ ಸುಧಾರಣೆಗಾಗಿ ವಾರದ ಗಡುವು | ಸಾಮಾಜಿಕ ಕಾರ್ಯಕರ್ತ ಉಮೇಶ್ ಕೆ. ಮುದ್ನಾಳ ಎಚ್ಚರಿಕೆ
ಯಾದಗಿರಿ: ಜಿಲ್ಲಾಡಳಿತದ ನಿರ್ಲಕ್ಷ್ಯದಿಂದ ಜಿಲ್ಲಾ ಕ್ರೀಡಾಂಗಣ ಅವ್ಯವಸ್ಥೆಯ ಆಗರವಾಗುತ್ತಿದ್ದು, ವಿಶೇಷ ಮೂಲಭೂತ ಸೌಕರ್ಯ ಒದಗಿಸುವಂತೆ ಸಾಮಾಜಿಕ ಹೋರಾಟಗಾರ ಉಮೇಶ್ ಕೆ. ಮುದ್ನಾಳ ವಾರದ ಗಡುವು ನೀಡಿದ್ದಾರೆ.
ಕ್ರೀಡಾಂಗಣಕ್ಕೆ ಭೇಟಿ ನೀಡಿ ಒಳ-ಹೊರ ಭಾಗವನ್ನು ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಜಿಲ್ಲಾ ಕೇಂದ್ರವಾಗಿ 15 ವರ್ಷವಾದರೂ ಅಭಿವೃದ್ಧಿ ಮರಿಚಿಕೆಯಾಗಿದೆ. ಕೋಟ್ಯಂತರ ರೂ. ವೆಚ್ಚದಲ್ಲಿ ನಿರ್ಮಾಣವಾದ ಕ್ರೀಡಾಂಗಣದ ನಿರ್ವಹಣೆಯಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲ ಎಂದು ಆರೋಪಿಸಿದ್ದಾರೆ.
ಕ್ರೀಡಾಂಗಣದಲ್ಲಿ ವಾಕಿಂಗ್ ಟ್ರಾಕ್ ಇಲ್ಲ, ಚರಂಡಿ ಸ್ವಚ್ಛವಾಗಿಲ್ಲ, ವಾಹನ ನಿಲುಗಡೆ ವ್ಯವಸ್ಥೆ ಅಸ್ತವ್ಯಸ್ತ, ಸಮದಟ್ಟ ಆಟದ ಮೈದಾನ ಕೊರತೆ, ಆರ್ಒ ಪ್ಲಾಂಟ್ ದುರಸ್ತಿ ಆಗದೇ ಬಿದ್ದಿದೆ ಎಂದು ಅವರು ಹೇಳಿದರು.
ನಿರಂತರ ಮಳೆಯಿಂದ ಒಳ-ಹೊರ ಭಾಗದಲ್ಲಿ ಗಿಡಗಂಟಿಗಳು ಬೆಳೆದು ವಿಷಜಂತುಗಳ ಹಾವಾಳಿ ಹೆಚ್ಚಾಗಿದೆ. ಒಳಭಾಗದ ಡಾಂಬರ್ ರಸ್ತೆ ಹಾಳಾಗಿದ್ದು, ಕಟ್ಟಡಗಳು ಶಿಥಿಲಗೊಂಡಿವೆ. ಖೋಖೋ ಮತ್ತು ಬಾಸ್ಕೆಟ್ಬಾಲ್ಗೆ ಪ್ರತ್ಯೇಕ ಮೈದಾನಗಳಿಲ್ಲ. ಸಾರ್ವಜನಿಕರು ಹಾಗೂ ಕ್ರೀಡಾಪಟುಗಳಿಗೆ ಕುಳಿತುಕೊಳ್ಳಲು ಬೇಕಾದ ಆಸನಗಳ ಕೊರತೆ ಇದೆ.
ಕ್ರೀಡಾಭಿಮಾನಿಗಳಿಗಾಗಿ ಹಾಕಿರುವ ಆಸನಗಳಿಗೆ ಸಿಮೆಂಟ್ ಪ್ಲಾಸ್ಟರ್ ಮಾಡಿಲ್ಲದೆ ಬಿಟ್ಟಿದ್ದು, ಮೇಲ್ಭಾಗದ ಶೀಟ್ ಹ್ಯಾಂಗರ್ಗ ಳಿಗೆ ಬಣ್ಣ ಹಾಕದೇ ಇರುವ ಕಾರಣ ತುಕ್ಕು ತಗುಲುತ್ತಿದೆ. ಜೊತೆಗೆ ಕ್ರೀಡಾಂಗಣದಲ್ಲಿ ಅನೈತಿಕ ಚಟುವಟಿಕೆಗಳು ಹೆಚ್ಚುತ್ತಿರುವುದು ಗಂಭೀರ ಸಮಸ್ಯೆಯಾಗಿದೆಯೆಂದು ವಿಷಾದ ವ್ಯಕ್ತಪಡಿಸಿ, ವಾರದೊಳಗೆ ಸೌಕರ್ಯಗಳನ್ನು ಸುಧಾರಿಸದಿದ್ದರೆ ಹೋರಾಟ ತೀವ್ರಗೊಳಿಸಲಾಗುವುದು ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ದೊಡ್ಡಯ್ಯ ಸ್ವಾಮಿ, ನಾಗರಡ್ಡಿಗೌಡ, ದೇವಣ್ಣಗೌಡ, ಶರಣು ರಾಂಪೂರ, ಶಂಕರಗೌಡ, ಮಾಹಾತೆಪ್ಪ, ರಮೇಶ ರಾಠೋಡ್, ನಾನಾಗೌಡ, ಶರಣಪ್ಪ ದೇಸಾಯಿ, ನಾಗೇಂದ್ರಪ್ಪ, ಶರಣಗೌಡ, ಪ್ರಭು, ಪವನ್, ಮರೆಪ್ಪ, ಬನ್ನಪ್ಪ, ಬಸವರಾಜ ಸೇರಿದಂತೆ ಅನೇಕರು ಇದ್ದರು.
