ವಾಂತಿಯಿಂದ ಆಸ್ಪತ್ರೆಗೆ ಸೇರಿದ್ದ ವಸತಿ ನಿಲಯ ವಿದ್ಯಾರ್ಥಿನಿಯರು ಚೇತರಿಕೆ | ಎಸಿ, ಆಹಾರ ಸುರಕ್ಷತೆ ಅಧಿಕಾರಿಗಳ ಭೇಟಿ ಮಾದರಿ ಸಂಗ್ರಹ | ಹೊರಗಿನಿಂದ ಕುಡಿಯುವ ನೀರು ಸರಬರಾಜು | ಆರ್ ಓ ಲೀಕೇಜ್ ನಿಂದ ವಿದ್ಯಾರ್ಥಿಗಳು ಬಿದ್ದಿದ್ದಾರೆ ಎಂದು ವಾರ್ಡನ್ ಸಬೂಬು
ಯಾದಗಿರಿ ಧ್ವನಿ.ಕಾಮ್ ವರದಿ ಆಧರಿಸಿ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಅಗತ್ಯ ಕ್ರಮಕ್ಕೆ ಜಿಲ್ಲಾಡಳಿತಕ್ಕೆ ಆಯೋಗದ ಅಧ್ಯಕ್ಷರಾದ ಶಶಿಧರ ಎಸ್ ಕೋಸಂಬೆ ಅವರು ಶಿಫಾರಸ್ಸು ಮಾಡಿದ್ದಾರೆ.
ಮನೆ, ಪಾಲಕರನ್ನು ಬಿಟ್ಟು, ಉತ್ತಮ ಶಿಕ್ಷಣ ಪಡೆಯಲು ಗ್ರಾಮೀಣ ಪ್ರದೇಶದ ಮಕ್ಕಳು ವಸತಿ ನಿಲಯಗಳ ಮೇಲೆ ಅವಲಂಬಿತರಾಗಿದ್ದಾರೆ. ಆದರೇ ವಸತಿ ನಿಲಯಗಳ ಅವ್ಯವಸ್ಥೆ ವಿದ್ಯಾರ್ಥಿಗಳು ಭಯಭೀತರಾಗಿ ತತ್ತರಿಸುವಂತೆ ಮಾಡಿದೆ. ವ್ಯವಸ್ಥೆ ಸುಧಾರಿಸಲು ಇಲಾಖೆ ಮುಂದಾಗಬೇಕಿದೆ.
ಗುರುಮಠಕಲ್: ಇಲ್ಲಿನ ಹಿಂದುಳಿದ ವರ್ಗಗಳ ಇಲಾಖೆಯ ಕಾಲೇಜು ಬಾಲಕಿಯರ ವಸತಿ ನಿಲಯದಲ್ಲಿ ಬುಧವಾರ ರಾತ್ರಿ ಆಹಾರ ಸೇವಿಸಿ 30ಕ್ಕೂ ಹೆಚ್ಚಿನ ವಿದ್ಯಾರ್ಥಿನಿಯರು ಆಸ್ಪತ್ರೆಗೆ ದಾಖಲಾಗಿದ್ದರು. ತುರ್ತು ಚಿಕಿತ್ಸೆ ಅಗತ್ಯವಿರುವ ಹಿನ್ನೆಲೆ 3 ಜನರನ್ನು ಯಾದಗಿರಿಗೆ ಶಿಫಾರಸ್ಸು ಮಾಡಲಾಗಿತ್ತು, ಎಲ್ಲರೂ ಚೇತರಿಸಿಕೊಂಡಿದ್ದಾರೆ. ಮಧ್ಯರಾತ್ರಿಯೇ ಜಿಲ್ಲಾಧಿಕಾರಿ, ಜಿ.ಪಂ.ಸಿಇಓ ಹಾಗೂ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಇದನ್ನು ಗಂಭೀರವಾಗಿ ಪರಿಗಣಿಸಿರುವ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಯಾದಗಿರಿ ಧ್ವನಿ.ಕಾಮ್ ಸುದ್ದಿ ಆಧರಿಸಿ, ಸ್ವಯಂ ಪ್ರೇರಿತ ದೂರು ದಾಖಲಾಸಿಕೊಂಡು, ಜಿಲ್ಲಾಡಳಿತಕ್ಕೆ ಅಗತ್ಯ ಕ್ರಮಕ್ಕೆ ಸೂಚಿಸಿದೆ.
ರಾತ್ರಿ ವಿದ್ಯಾರ್ಥಿಗಳು ರೊಟ್ಟಿ, ಅನ್ನ, ಚಿಕನ್ ಸಾಂಬಾರ್, ಸೋಯಾಬಿನ್ ಪಲ್ಕೆ, ನೀರು ಸೇವನೆ ಮಾಡಿದ್ದರು. ಏಕಾಏಕಿ ವಿದ್ಯಾರ್ಥಿನಿಯರಲ್ಲಿ ವಾಂತಿ ಕಾಣಿಸಿಕೊಂಡಿದ್ದು, ಮುನ್ನೆಚ್ಚರಿಕೆಯಾಗಿ ವಾರ್ಡನ್ 54 ವಿದ್ಯಾರ್ಥಿನಿಯರನ್ನು ಆಸತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.
ಗುರುವಾರ ವಸತಿ ನಿಲಯಕ್ಕೆ ಯಾದಗಿರಿ ಸಹಾಯಕ ಆಯುಕ್ತ ಶ್ರೀಧರ ಗೋಟೂರ ಭೇಟಿ ನೀಡಿ ಪರಿಶೀಲನೆ ನಡೆಸಿರು. ಇದೇ ವೇಳೆ ಆಹಾರ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲು ಆಗಮಿಸಿದ್ದ ಆಹಾರ ಸುರಕ್ಷೆತೆ ಅಧಿಕಾರಿಗಳ ಜೊತೆ ಸೇರಿ ಮಾಹಿತಿ ಕಲೆ ಹಾಕಿದರು.
ಈ ವೇಳೆ ಆಹಾರ ಬಳಕೆಗೆ ಉಪಯೋಗಿಸಿದ 16 ಮಾದರಿ ಸಂಗ್ರಹ ಮಾಡಲಾಗಿದೆ. ಆಹಾರ ಸರಿಯಾಗಿ ಬೇಯಿಸದೇ ಇರುವುದು ಘಟನೆಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಕೆಲವೊಮ್ಮೆ ಪಾತ್ರೆ ತೊಳೆಯುವ ವೇಳೆ ಸರಿಯಾಗಿ ತೊಳೆಯದಿರುವುದರಿಂದ ಸಹ ಸಾಬೂನು ಅಂಶ ಸೇರಿ ಈ ರೀತಿ ಆಗುವ ಸಂಭವ ಇದೆ ಎನ್ನಲಾಗುತ್ತಿದೆ. ಆಹಾರ ಮಾದರಿ ಸಂಗ್ರಹದ ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಳಕವಷ್ಟೇ ಘಟನೆಗೆ ನಿಖರ ಕಾರಣ ತಿಳಿಯಲಿದೆ.
ವಸತಿ ನಿಲಯದಲ್ಲಿ ಆರ್ ಓ ಘಟಕ ಸ್ಥಗಿತಗೊಂಡಿದ್ದು, ಹೊರಗಿನಿಂದ ನೀರು ತರಿಸಲಾಗುತ್ತಿದೆ ಎನ್ನುವ ಅಂಶ ಬೆಳಕಿಗೆ ಬಂದಿದ್ದು, ಇದಕ್ಕೆ ವಾರ್ಡನ್ ಮಂಜುಳಾ, ಆರ್. ಓ ಘಟಕದ ನೀರು ಲೀಕೇಜ್ ಆಗಿ, ವಿದ್ಯಾರ್ಥಿಗಳು ಕಾಲು ಜಾರಿ ಬಿದ್ದಿದ್ದಾರೆ. ಹಾಗಾಗಿ ಹೊರಗಿನಿಂದ ಶುದ್ಧ ನೀರು ತರಿಸಲಾಗುತ್ತಿದೆ ಎಂದು ಸಬೂಬು ಹೇಳಿದರು.
ಉಪಯೋಗಿಸುವ ವಸ್ತುಗಳ ಅವಧಿ ನೋಡಿ ಬಳಸಬೇಕು ಎನ್ನುವುದು ಸೇರಿ ಅಗತ್ಯ ಮುನ್ನೆಚರಿಕೆ ಕ್ರಮವಹಿಸುವ ಕುರಿತು ಸಲಹೆ ಸೂಚನೆ ನೀಡಲಾಗಿದೆ. ಆಹಾರ ಸರಿಯಾಗಿಯೇ ಇದೆ. ಆದರೆ ವರದಿ ಬರುವವರೆಗೆ ಏನು ಹೇಳಲು ಆಗಲ್ಲ. ಎಲ್ಲರೂ ಆರೋಗ್ಯವಾಗಿದ್ದಾರೆ ಎಂದು ಸಹಾಯಕ ಆಯುಕ್ತರು ತಿಳಿಸಿದರು.
ಘಟನಾ ಸ್ಥಳಕ್ಕೆ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ರಾಜ್ಯ ಉಪಾಧ್ಯಕ್ಷ. ಕೆ.ಬಿ.ವಾಸು ಭೇಟಿ ನೀಡಿ ವಸತಿ ನಿಲಯ ಹೊರಾಂಗಣದಲ್ಲಿ ವಿದ್ಯಾರ್ಥಿಗಳೊಂದಿಗೆ ಮಾತನಾಡಿ ಮಾಹಿತಿ ಪಡೆದರು. ಮಕ್ಕಳಿಗೆ ಸರಿಯಾಗಿ ಚಿಕಿತ್ಸೆ ನೀಡಿಲ್ಲ. ದೊಡ್ಡದಾಗಿ ಆಗುತ್ತದೆ ಎಂದು ಆಸತೆಯಿಂದ ವಿದ್ಯಾರ್ಥಿಗಳನ್ನು ಆಸ್ಪತೆಯಿಂದ ಕರೆ ತಂದಿದ್ದಾರೆ. ನೀರಿನಲ್ಲಿ ಹುಳು ಬರುತ್ತಿವೆ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ.
ಸಂಬಂಧಿಸಿದ ವಾರ್ಡನ್, ಅಡುಗೆಯವರು, ತಾಲೂಕು ಅಧಿಕಾರಿ ಮೇಲೆ ಕಿಮಿನಲ್ ಪ್ರಕರಣ ದಾಖಲಿಸಬೇಕು. ದೂರು ಕೊಟ್ಟಾಗ ತಾಲೂಕು ಅಧಿಕಾರಿ ಭೇಟಿ ನೀಡದೇ ನಿರ್ಲಕ್ಷವಹಿಸುತ್ತಿದ್ದಾರೆ. ವಾರದಲ್ಲಿ ಇವರ ಮೇಲೆ ಕ್ರಮಕೈಗೊಳ್ಳದಿದ್ದರೆ ಜಿ.ಪಂ. ಸಿಇಓ ಕಚೇರಿ ಎದುರು ಧರಣಿ ನಡೆಸಲಾಗುವುದು ಎಂದರು.
