ಇಂದಿನ ಪರಿಸರ ರಕ್ಷಣೆಯೇ ನಾಳೆಯ ಭದ್ರತೆ ಧ್ಯೇಯ ವಾಕ್ಯ |  ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಸುವರ್ಣ ಮಹೋತ್ಸವ ಅಂಗವಾಗಿ ಪರಿಸರ ಜಾಗೃತಿ ಜಾಥಾ | ಕಾನೂನು ಅರಿವು ನೆರವು ಕಾರ್ಯಕ್ರಮ

ಗುರುಮಠಕಲ್: ಮಾನವ ಸೇರಿ ಇತರೆ ಜೀವಿಗಳ ಬದುಕಿಗೆ ಭೂಮಿಯೇ ಆಧಾರ. ಪ್ರತಿಯೊಬ್ಬರೂ ಭೂಮಿಯ ಋಣ ತೀರಿಸಬೇಕು. ಪರಿಸರ ಸಂರಕ್ಷಣೆ ಎಲ್ಲರ ಹೊಣೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಮರಿಯಪ್ಪ ಹೇಳಿದರು. ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ವಕೀಲರ ಸಂಘ, ಮಾಲಿನ್ಯ ನಿಯಂತ್ರಣ ಮಂಡಳಿ, ಅರಣ್ಯ ಇಲಾಖೆ, ಶಿಕ್ಷಣ ಇಲಾಖೆ ಹಾಗೂ ಪುರಸಭೆ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಸಸಿಗೆ ನೀರೆರೆದು ಉದ್ಘಾಟಿಸಿ ಮಾತನಾಡಿದರು.

ಒಂದು ಕಡೆ ಅಭಿವೃದ್ಧಿ ಇನ್ನೊಂದು ಕಡೆ ಪರಿಸರ ಹಾನಿಯಾಗುತ್ತದೆ. ಇದನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಳಜಿವಹಿಸಬೇಕು. ಎಲ್ಲದಕ್ಕೂ ಕಾನೂನು ಇದೆ. ಯಥಾವತ್ತಾಗಿ ಜಾರಿಯಾಗಬೇಕಿದೆ ಎಂದರು. ಅರಣ್ಯ ಪ್ರದೇಶದಲ್ಲಿ ಅನಾಧಿಕೃತ ಒತ್ತುವರಿಯಾಗಿವೆ. ಪರಿಸರ ಉಳಿಸೋಣ ಎಂದು ಹೇಳುತ್ತಲೇ ನಾಶ ಮಾಡಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

ಹಿಂದೆ 100 ವರ್ಷ ವಯಸ್ಸು ಬದುಕುತ್ತಿದ್ದರು ಈಗ ಪರಿಸರ ನಾಶದ ಪರಿಣಾಮವೇ ಪರೋಕ್ಷವಾಗಿ ಆರೋಗ್ಯ ಸಮಸ್ಯೆಗಳು ಉಂಟಾಗುತ್ತಿದೆ ಎಂದರು. ಸಣ್ಣ ಕೆಲಸವೇ ದೊಡ್ಡ ಬದಲಾವಣೆಗೆ ಕಾರಣವಾಗುತ್ತದೆ. ಹಾಗಾಗಿ ಪರಿಸರ ಸಂರಕ್ಷಣೆ ಮಾಡಲು ಕಂಕಣ ಬದ್ಧರಾಗಲು ಕರೆ ನೀಡಿದರು.ಪ್ಲಾಸ್ಟಿಕ್ ನಿರ್ಬಂಧಕ್ಕೆ ಕಠಿಣ ಕಾನೂನು ಇರಬೇಕು. ಪರಿಸರಕ್ಕೆ ಮಾರಾಕ ವಸ್ತು ಬಳಕೆ/ ತಯಾರಕರ ಮೇಲೆ ಕ್ರಮ ಕೈಗೊಳ್ಳುವ ಮೂಲಕ ನಿಯಂತ್ರಣ ಸಾಧ್ಯ. ಪ್ರತಿಯೊಬ್ಬರೂ ಮನೆ ಎದುರು ಒಂದು ಸಸಿ ನೆಟ್ಟರೆ ಪರಿಸರ ಸಂರಕ್ಷಣೆ ಸಾಧ್ಯ. ಹೆಚ್ಚಿನ ವೈಯಕ್ತಿಕ ವಾಹನ ಬಳಸದೇ ಸಾರ್ವಜನಿಕ ಸಾರಿಗೆ ಬಳಸಿ ವಾಯು ಮಾಲಿನ್ಯ ನಿಯಂತ್ರಣ ಸಾಧ್ಯ ಎಂದು ಹೇಳಿದರು.

ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಆದಂ ಪಟೇಲ್ ಪ್ರಾಸ್ತಾವಿಕ ಮಾತನಾಡಿ, ಏಕ ಬಳಕೆ ಪ್ಲಾಸ್ಟಿಕ್ ನಿಷೇಧವಾಗಿದೆ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್ ಬಳಸದೆ ಬಟ್ಟೆ ಬ್ಯಾಗ ಬೆಳಸಬೇಕು. ಪರಿಸರದ ಬಗ್ಗೆ ಕಾಳಜಿ ಅಗತ್ಯವಾಗಿ ಎಂದರು.

ನೀರು ಅಮೂಲ್ಯವಾಗಿದೆ. ನೀರಿನ ಮೂಲ ಬತ್ತಿ ಹೋಗುತ್ತಿದೆ, ನೀರನ್ನು ಹೆಚ್ಚಾಗಿ ಪೋಲು ಮಾಡುತ್ತಿದ್ದೇವೆ. ಮಿತವಾಗಿ ಬಳಕೆ ಮಾಡಬೇಕು ಎಂದರು. ಕೆರೆಗಳ ಒತ್ತುವರಿಯಿಂದ ಅಂತರ್ ಜಲ ಮಟ್ಟ ಕುಂಠಿತವಾಗುತ್ತದೆ. ನದಿಗಳ ಮೂಲಕ ಕಾರ್ಖಾನೆಗಳು ಹೆಚ್ಚಿನ ನೀರು ಬಳಕೆಯಿಂದ ತೊಂದರೆ.

22 ಬಗೆಯ ಪ್ಲಾಸ್ಟಿಕ್ ಬಳಕೆ ನಿಷೇಧ ಮಾಡಲಾಗಿದೆ. ಸ್ವಯಂ ಪ್ರೇರಿತವಾಗಿ ಬಳಕೆ ತಡೆಗೆ ಮುಂದಾಗಬೇಕು ಎಂದರು. ಪ್ಲಾಸ್ಟಿಕ್ ನೀರಿನ ಬಾಟಲ್ ಇತರೆ ವಸ್ತುಗಳು ಪರೋಕ್ಷವಾಗಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ತರಕಾರಿ ತರಲು ಬಟ್ಟೆಯ ಬ್ಯಾಗ್ ಬಳಸಲು ಸಲಹೆ ನೀಡಿದರು.ಗಿಡ-ಮರಗಳನ್ನು ನೆಡಬೇಕು ಎಂದು ಹೇಳಿದ ಅವರು, ಸಣ್ಣ ಸಿಸಿ ಬೆಳೆದು ನಾಳೆ ಉತ್ತಮ ಗಾಳಿ, ನೆರಳು ನೀಡುತ್ತದೆ ಎಂದರು. ಹಸಿ ಕಸ- ಒಣಕಸ ವಿಂಗಡಿಸಿ ತ್ಯಾಜ್ಯ ನಿರ್ವಹಣೆ ಮಾಡಲು ಹೇಳಿದರು.

ಪರಿಸರ ಮಾಲಿನ್ಯ ಅಧಿಕಾರಿ ಹಣಮಂತ, ಶಕುಂತಲಾ ಮಾತನಾಡಿದರು. ತಹಸೀಲ್ದಾರ್ ಚನ್ನಮಲ್ಲಪ್ಪ ಘಂಟಿ, ಭೀಮಾಶಂಕರ ಆಶನಾಳ, ಡಾ. ಎಸ್ ಎಸ್ ಪಾಟೀಲ್, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ ರಾಹುಲ್ ಎಸ್ , ಎಎಸ್ಐ ಮಹಿಪಾಲರೆಡ್ಡಿ, ಪ್ರಶಾಂತ ವೇದಿಕೆಯಲ್ಲಿ. ಮೊದಲು ಪತ್ರಕರ್ತರಿಗೆ ಬಟ್ಟೆ ಬ್ಯಾಗ ವಿತರಿಸಲಾಯಿತು. ಮುಖ್ಯಾಧಿಕಾರಿ ಶರಣಪ್ಪ ಎಂ. ವಂದಿಸಿದರು.

ಇದಕ್ಕೆ ಮೊದಲು ಪಟ್ಟಣದ ಗಂಗಾ ಪರಮೇಶ್ವರಿ ವೃತ್ತದಿಂದ ಬಸವೇಶ್ವರ ವೃತ್ತ ಮಾರ್ಗವಾಗಿ ಪುರಸಭೆವರೆಗೆ ಜಾಗೃತಿ ಜಾಥಾ ನಡೆಯಿತು. ಹವೀಶ್ ಪ್ಯಾರಾ ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.

Spread the love

Leave a Reply

Your email address will not be published. Required fields are marked *

error: Content is protected !!