ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ನವರ ಜಯಂತ್ಯೋತ್ಸವ | ಕಲ್ಯಾಣ ಕ್ರಾಂತಿ ಇಂದಿನ ಸಮಾಜಕ್ಕೂ ಪ್ರಸ್ತುತ | ಸಚಿವ ಈಶ್ವರ ಬಿ. ಖಂಡ್ರೆ ಅಭಿಮತ
ಬೀದರ : 12 ನೇ ಶತಮಾನದಲ್ಲಿ ಬಸವಣ್ಣನವರು ನಡೆಸಿದ ಕಲ್ಯಾಣ ಕ್ರಾಂತಿ ಇಂದಿನ ಆಧುನಿಕ ಸಮಾಜಕ್ಕೂ ಅತ್ಯಂತ ಪ್ರಸ್ತುತವಾಗಿದೆ ಎಂದು ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಹಾಗೂ ಬೀದರ ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ ಬಿ. ಖಂಡ್ರೆ ಹೇಳಿದರು.
ಸೋಮವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಮಹಾನಗರ ಪಾಲಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೀದರ ಇವರ ಸಂಯುಕ್ತಾಶ್ರಯದಲ್ಲಿ ನಗರದ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮಂದಿರದಲ್ಲಿ ಆಯೋಜಿಸಿದ ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣ ನವರ ಜಯಂತ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ಯಾರು ಮೇಲಲ್ಲ, ಯಾರು ಕೀಳಲ್ಲ” ಎಂಬ ತತ್ವದಡಿ ಜಾತಿರಹಿತ, ಲಿಂಗಭೇದವಿಲ್ಲದ ಸಮ ಸಮಾಜವನ್ನು ಕಟ್ಟಲು ಬಸವಣ್ಣನವರು ಶ್ರಮಿಸಿದ್ದರು. ಮೌಢ್ಯತೆ, ಕಂದಾಚಾರ ಮತ್ತು ಅಸ್ಪೃಶ್ಯತೆಯ ವಿರುದ್ಧ ಅವರು ಅಂದೇ ಸಮರ ಸಾರಿದ್ದರು. ಇಂದಿಗೂ ಸಮಾಜದಲ್ಲಿ ನೆಲೆಸಿರುವ ಅಸಮಾನತೆಯನ್ನು ಹೋಗಲಾಡಿಸಲು ಬಸವ ತತ್ವವೇ ಮದ್ದಾಗಿದೆ.
ಜಗತ್ತಿನಲ್ಲಿ ಮೊಟ್ಟಮೊದಲ ಬಾರಿಗೆ ಮಹಿಳೆಯರಿಗೆ ಸಮಾನ ಗೌರವ ಮತ್ತು ಹಕ್ಕನ್ನು ನೀಡಿದ ಕೀರ್ತಿ ಬಸವಣ್ಣನವರಿಗೆ ಸಲ್ಲುತ್ತದೆ. ಆದರೆ, ಇಂದಿನ ದಿನಗಳಲ್ಲಿ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಮತ್ತು ಅತ್ಯಾಚಾರಗಳನ್ನು ಗಮನಿಸಿದರೆ, ನಾವು ಬಸವ ತತ್ವದಿಂದ ದೂರ ಸರಿಯುತ್ತಿದ್ದೇವೆಯೇ ಎಂಬ ಪ್ರಶ್ನೆ ಕಾಡುತ್ತಿದೆ.
ಯುವಜನತೆ ಮತ್ತು ಸಾಮಾಜಿಕ ಮಾಧ್ಯಮಗಳ ಪ್ರಭಾವ ಇಂದಿನ ಯುವ ಪೀಳಿಗೆಯು ವಿದ್ಯಾಭ್ಯಾಸದಲ್ಲಿ ಮುಂಚೂಣಿಯಲ್ಲಿದ್ದರೂ, ದಾರಿ ತಪ್ಪುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಒಂದು ಅಧ್ಯಯನದ ಪ್ರಕಾರ 30% ಯುವಕರು ಕೆಟ್ಟ ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇನ್ನು 30% ಯುವಜನತೆ ಇಂಟರ್ನೆಟ್, ಫೇಸ್ಬುಕ್ ಮತ್ತು ರೀಲ್ಸ್ ಮದದಲ್ಲಿ ಮುಳುಗಿ ಮಾನಸಿಕವಾಗಿ ದುರ್ಬಲರಾಗುತ್ತಿದ್ದಾರೆ. ಇದು ಕುಟುಂಬ ವ್ಯವಸ್ಥೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತಿದ್ದು, ಸಮಾಜ ಈ ಬಗ್ಗೆ ಗಂಭೀರವಾಗಿ ಆಲೋಚಿಸಬೇಕಿದೆ.
ಜಾಗತಿಕ ಯುದ್ಧ ಮತ್ತು ಶಾಂತಿಯ ಅಗತ್ಯ: ಇಸ್ರೇಲ್-ಇರಾನ್, ರಷ್ಯಾ-ಉಕ್ರೇನ್ ಯುದ್ಧಗಳು ಜಗತ್ತಿನಾದ್ಯಂತ ಅಶಾಂತಿಯನ್ನುಂಟು ಮಾಡುತ್ತಿವೆ. ನಮ್ಮ ದೇಶದ ಮಣಿಪುರದಲ್ಲಿ ನಡೆಯುತ್ತಿರುವ ಜನಾಂಗೀಯ ಸಂಘರ್ಷಗಳು ಮನುಕುಲಕ್ಕೆ ಕಪ್ಪುಚುಕ್ಕೆಯಾಗಿವೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ “ಇವನಾರವ ಇವನಾರವ ಎನ್ನದೆ ಇವ ನಮ್ಮವ ಇವ ನಮ್ಮವ” ಎನ್ನುವ ಸಹೋದರತ್ವದ ಸಂದೇಶ ಸಾರುವ ಅವಶ್ಯಕತೆ ಇದೆ. ಆಸ್ತಿ, ಹಣ ಮತ್ತು ಸ್ವಾರ್ಥಕ್ಕಾಗಿ ಸಂಬಂಧಗಳನ್ನು ಕೊಲೆ ಮಾಡುತ್ತಿರುವ ಈ ಕಾಲದಲ್ಲಿ, ನೈತಿಕ ಶಿಕ್ಷಣ ಮತ್ತು ಬಸವಣ್ಣನವರ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೊಂದೇ ಸಮಾಜದ ಸಕಲ ಸಮಸ್ಯೆಗಳಿಗೆ ಮದ್ದಾಗಿದೆ. “ಸರ್ವೇ ಜನಾ ಸುಖಿನೋ ಭವಂತು” ಎಂಬ ಆಶಯದೊಂದಿಗೆ ಎಲ್ಲರೂ ಬದುಕೋಣ ಎಂದರು.
ನಮ್ಮ ಸರ್ಕಾರ ಅನುಭವ ಪಂಟಪ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದ್ದು. ಈಗಾಗಲೇ 280 ಕೋಟಿ ಬಿಡುಗಡೆ ಮಾಡಿದೆ ಇನ್ನು 250 ಕೋಟಿ ಬೇಕಾಗುವ ಸಾಧ್ಯತೆ ಇದೇ ಅವುಗಳನ್ನು ಅಂದುಕೊಂಡದಂತೆ ನಡೆದರೆ ಮುಂದಿನ ಬಸವ ಜಯಂತಿ ಒಳಗಾಗಿ ಲೋಕಾರ್ಪಣೆಗೊಳಿಸಲಾಗುವುದು. ನಾನು ಮುತುವರ್ಜಿ ವಹಿಸಿ ಬೆಂಗಳೂರಿನಲ್ಲಿ 153 ಎಕರೆ ನಿರ್ಮಾಣವಾಗುತ್ತಿರುವ ಸಸ್ಯ ಉದ್ಯಾನವನಕ್ಕೆ ಬಸವೇಶ್ವರರ ಹೆಸರಿಟ್ಟಿದ್ದೇನೆ ಎಂದರು.
ಪೌರಾಡಳಿತ ಹಾಗೂ ಹಜ್ ಖಾತೆ ಸಚಿವ ರಹೀಮ್ ಖಾನ್ ಮಾತನಾಡಿ, ಬಸವಣ್ಣನವರ ಸಂದೇಶ ಮತ್ತು ವಚನ ಸಿದ್ಧಾಂತಗಳು ಕೇವಲ ಮಾತಿಗೆ ಸೀಮಿತವಾಗದೆ, ನಮ್ಮ ದೈನಂದಿನ ಬದುಕಿನ ಭಾಗವಾಗಬೇಕು. ಬೀದರ್ ಜಿಲ್ಲೆಯ ಜನರು ಈ ಬಸವಣ್ಣನವರ ತತ್ವಾರ್ದಶಗಳನ್ನು ಶೇ. 100ರಷ್ಟು ಪಾಲಿಸಿದಾಗ ಮಾತ್ರ ವಿಶ್ವಗುರು ಬಸವಣ್ಣನವರ ಆಶಯಗಳು ಜಗತ್ತಿಗೆ ತಲುಪಲು ಸಾಧ್ಯ,” ಎಂದು ಪೌರಾಡಳಿತ ಹಾಗೂ ಹಜ್ ಸಚಿವ ರಹೀಂ ಖಾನ್ ಅವರು ತಿಳಿಸಿದರು.
ಬೀದರ ದಕ್ಷಿಣ ಕ್ಷೇತ್ರದ ಶಾಸಕ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ಜಗತ್ತಿನ ವಿವಿಧ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಯುದ್ಧಗಳು ಮತ್ತು ದೇಶದ ಒಳಗಿನ ಜನಾಂಗೀಯ ಸಂಘರ್ಷಗಳು ಮನುಕುಲವನ್ನು ಅತಂತ್ರಗೊಳಿಸಿವೆ. ಇಂತಹ ಸಂದರ್ಭದಲ್ಲಿ ಬಸವಣ್ಣನವರ “ದಯೆಯೇ ಧರ್ಮದ ಮೂಲವಯ್ಯ” ಎನ್ನುವ ಮೌಲ್ಯಗಳು ಜಗತ್ತಿಗೆ ಶಾಂತಿಯ ದಾರಿದೀಪವಾಗಿವೆ ಎಂದರು.
ವೇದಿಕೆ ಕಾರ್ಯಕ್ರಮ ಚಾಲನೆಗೂ ಮುನ್ನ ಬಸವಣ್ಣ ನವರ ಭಾವಚಿತ್ರ ಮೆರವಣಿಗೆಯೂ ನಗರದ ಬಸವೇಶ್ವರ ವೃತ್ತದ ಬಳಿ ಗಣ್ಯರ ಸಮ್ಮುಖದಲ್ಲಿ ಚಾಲನೆಗೊಂಡು ಭಗತ್ ಸಿಂಗ್ ವೃತ್ತ, ಅಂಬೇಡ್ಕರ್ ವೃತ್ತ, ರೋಟರಿ ವೃತ್ತ ಮಾರ್ಗದಿಂದ ಸಾಗಿ ಪೂಜ್ಯ ಡಾ. ಚನ್ನಬಸವ ಪಟ್ಟದೇವರ ರಂಗಮಂದಿಕ್ಕೆ ತಲುಪಿತು.
ಯಾದಗಿರಿ ಜಿಲ್ಲೆಯ ಗುರುಮಠಕಲ್ ನಲ್ಲಿ ವಿಶ್ವಗುರು ಬಸವೇಶ್ವರ ಜಯಂತಿ ಹಿನ್ನೆಲೆಯಲ್ಲಿ ಬಸವೇಶ್ವರ ವೃತ್ತದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಜಯಂತಿ ಆಚರಿಸಲಾಯಿತು. ಪೂಜ್ಯ ಶಾಂತವೀರ ಗುರು ಮುರುಘರಾಜೇಂದ್ರ ಸ್ವಾಮೀಜಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಸಂಜೆ ನಾರಾಯಣಪುರ ಬಡವಣೆಯಲ್ಲಿ ವೈಭವದ ಮೆರವಣಿಗೆ ನೆರವೇರಿತು. ಸ್ಥಳೀಯರಾದ ಶರಣಪ್ಪ ವಿಕ್ಕಿ, ಗೋವಿಂದರಾವ ಮೇಂಗಜಿ, ಲಾಲಪ್ಪ ತಿವಾರಿ, ಶ್ರೀಕಾಂತ್, ಅಶೋಕ ಶನಿವಾರಂ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.
ಅತಿಥಿ ಉಪನ್ಯಾಸ ನೀಡಿ ಮಾತನಾಡಿದ ಶ್ರೀ ಚರಮೂರ್ತಿ ಚರಂತೇಶ್ವರ ವಿರಕ್ತಮಠ ಬಸವಬೆಳವಿಯ ಶ್ರೀ ಶರಣ ಬಸವ ಮಹಾಸ್ವಾಮಿ, ಬಸವ ಜಯಂತಿಯ ಆಚರಣೆಯು ಶರಣ ಸಂಸ್ಕೃತಿಯ ಇತಿಹಾಸದಲ್ಲಿ ಒಂದು ಮಹತ್ವದ ಮೈಲಿಗಲ್ಲಾಗಿದೆ. 1913ರಲ್ಲಿ ದಾವಣಗೆರೆಯ ವಿರಕ್ತ ಮಠದಲ್ಲಿ ಪೂಜ್ಯ ಮೃತ್ಯುಂಜಯ ಸ್ವಾಮಿಗಳು ಮತ್ತು ‘ಕರ್ನಾಟಕದ ಗಾಂಧಿ’ ಹರಡೇಕರ್ ಮಂಜಪ್ಪನವರ ನೇತೃತ್ವದಲ್ಲಿ ಈ ಆಚರಣೆಗೆ ಚಾಲನೆ ನೀಡಲಾಯಿತು.
ಅಂದಿನ ಕಾಲದಲ್ಲಿ ಬಸವಣ್ಣನವರ ತತ್ವಗಳು ಮತ್ತು ವಚನ ಸಾಹಿತ್ಯವು ಕೇವಲ ಮಠಗಳ ಗದ್ದಿಗೆಗಳಿಗೆ ಹಾಗೂ ಪಂಡಿತರ ಓದಿಗೆ ಸೀಮಿತವಾಗಿದ್ದವು; ಜನಸಾಮಾನ್ಯರಿಗೆ ಅವರ ವೈಚಾರಿಕ ಕ್ರಾಂತಿಯ ಅರಿವು ಹೆಚ್ಚಾಗಿ ಇರಲಿಲ್ಲ. ಮುಂಬೈನಲ್ಲಿ ಇತರ ಮಹಾತ್ಮರ ಜಯಂತಿ ಆಚರಣೆಗಳಿಂದ ಪ್ರೇರಿತರಾದ ಹರಡೇಕರ್ ಮಂಜಪ್ಪನವರು, ಬಸವಣ್ಣನವರ ವಿಚಾರಗಳನ್ನು ಜನಮಾನಸಕ್ಕೆ ತಲುಪಿಸಲು ನಿರ್ಧರಿಸಿದರು. ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ಅಕ್ಷಯ ತೃತೀಯ ದಿನದಂದೇ ಬಸವಣ್ಣನವರು ಜನಿಸಿದರೆಂದು ನಿಶ್ಚಯಿಸಿ, ಅಂದಿನಿಂದ ಹಳ್ಳಿ-ಹಳ್ಳಿಗಳಲ್ಲಿ ಪ್ರವಚನ ಹಾಗೂ ಸಮಾರಂಭಗಳ ಮೂಲಕ ಶರಣರ ಸಮಾನತೆಯ ಸಂದೇಶವನ್ನು ಪಸರಿಸಲಾಯಿತು. ಈ ಪ್ರಯತ್ನದ ಫಲವಾಗಿ ಇಂದು ಬಸವ ಜಯಂತಿಯು ಸಾಮಾಜಿಕ ಬದಲಾವಣೆಯ ಮತ್ತು ವೈಚಾರಿಕತೆಯ ಸಂಕೇತವಾಗಿ ಜಗತ್ತಿನಾದ್ಯಂತ ಆಚರಿಸಲ್ಪಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ರವೀಂದ್ರ ದಾಮಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಸಿದ್ರಾಮ್ ಸಿಂಧೆ, ತಹಸೀಲ್ದಾರ್ ಗ್ರೇಡ್ -2 ಜಿಯಾವೋದ್ದಿನ್, ಬಸವ ಜಯಂತಿ ಉತ್ಸವ ಸಮಿತಿಯ ಅಧ್ಯಕ್ಷ ರಾಜನೀಶ್ ವಾಲಿ, ಪ್ರಧಾನ ಕಾರ್ಯದರ್ಶಿ ಶಶಿಧರ ಹೊಸಳ್ಳಿ, ಮಹಿಳಾ ಘಟಕದ ಅಧ್ಯಕ್ಷ ದೇವಿಕಾ ಅಶೋಕ ನಾಗೋರೆ, ಸಮಾಜದ ಹಿರಿಯರಾದ ಶಿವಶರಣಪ್ಪ ವಾಲಿ, ಪ್ರಮುಖರಾದ ಶ್ರೀಕಾಂತ್ ಸ್ವಾಮಿ, ಶಾಮಣ್ಣ ಬಾವಗಿ, ಸುರೇಶ ಚನ್ನಶೆಟ್ಟಿ ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.
