ಯಾದಗಿರಿಯಲ್ಲಿ 486ನೇ ಜಯಂತೋತ್ಸವ ಆಚರಣೆ | ಸಮಾಜದ ಸಾಧಕ ಮಕ್ಕಳಿಗೆ ಸನ್ಮಾನ
ಯಾದಗಿರಿ: ಮಹಾರಾಣಾ ಪ್ರತಾಪ್ ಸಿಂಹ ಅವರು ದೇಶ ಕಂಡ ಅತ್ಯಂತ ಬಲಿಷ್ಠ ಮತ್ತು ಶೂರ ರಾಜನಾಗಿದ್ದರೆಂದು ಬಣ್ಣಿಸಿದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ, ಅವರ ಜೀವನಾದರ್ಶಗಳನ್ನು ಪ್ರತಿಯೊಬ್ಬರು ಅನುಸರಿಸಬೇಕು ಎಂದರು.
ನಗರದ ಸಹ್ಯಾದ್ರಿ ಶಾಲೆಯಲ್ಲಿ ಜಿಲ್ಲಾ ರಜಪೂತ ಸಮಾಜ ಹಾಗೂ ಸರ್ಕಾರಿ ಮತ್ತು ಅರೆ ಸರ್ಕಾರಿ ನೌಕರರ ಸಂಘಗಳ ಸಂಯುಕ್ತಾಶ್ರಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಶ್ರೀ ವೀರ ಶಿರೋಮಣಿ ಮಹಾರಾಣಾ ಪ್ರತಾಪ್ ಸಿಂಹರ 486ನೇ ಜಯಂತೋತ್ಸವ ಹಾಗೂ 2025–26ನೇ ಸಾಲಿನ ಎಸ್ಎಸ್ಎಲ್ ಸಿ, ಪಿಯುಸಿ ಹಾಗೂ ಉನ್ನತ ಶಿಕ್ಷಣದಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಪ್ಪಟ್ಟ ದೇಶಭಕ್ತರಾಗಿದ್ದ ಅವರು, ಸಮರ ಕಲೆಗಳು, ಕುದುರೆ ಸವಾರಿ ಮತ್ತು ಬಿಲ್ಲುಗಾರಿಕೆಯಲ್ಲಿ ತರಬೇತಿ ಪಡೆದಿದ್ದರು.1572 ರಲ್ಲಿ ತನ್ನ ತಂದೆಯ ಮರಣದ ನಂತರ, ಮಹಾರಾಣಾ ಪ್ರತಾಪ್ ಮೇವಾರ್ ರಾಜವಂಶದ 13 ನೇ ರಾಜರಾದರು. ಅವರು ತಮ್ಮ ಅವಧಿಯಲ್ಲಿ ಎದುರಾದ ಯುದ್ಧಗಳನ್ನು ಅತ್ಯಂತ ಧೈರ್ಯದಿಂದ ಎದುರಿಸಿದ ಕ್ರಾಂತಿಕಾರಿ ವ್ಯಕ್ತಿಯಾಗಿದ್ದರೆಂದು ಶಾಸಕರು ಬಣ್ಣಿಸಿದರು.
ರಜಪೂತ ಸಮಾಜ ಅತ್ಯಂತ ಶೂರ,ಧೀರರನ್ನು ಹೊಂದಿದೆ. ತಮ್ಮ ಕಾಯಕದಡಿಯಲ್ಲಿಯೇ ಬದುಕು ಕಟ್ಟಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ. ಈ ಸಮಾಜ ಇಷ್ಟು ವಿದ್ಯಾರ್ಥಿಗಳು ಓದಿನಲ್ಲಿಸಾಧನೆ ಮಾಡಿದ್ದು ನೋಡಿ ಸಂತಸವಾಗಿದೆ. ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಿ, ವಿದ್ಯೆಯಿಂದಲ್ಲೆ ಎಲ್ಲವೂ ಇದೆ. ಅವರು ಮಹಾನ್ ಸಾಧಕರಾಗಿ ದೇಶ ಕಟ್ಟುವಲ್ಲಿ ಶ್ರಮಿಸುತ್ತಾರೆ. ಜನ್ಮ ನೀಡಿದ ಪಾಲಕರ ಕೀರ್ತಿ ಹೆಚ್ಚಿಸುತ್ತಾರೆಂದು ಶಾಸಕರು ಕಿವಿ ಮಾತು ಹೇಳಿದರು. ಸಮಾಜಕ್ಕೆ ನಿವೇಶನ,ಇತರೆ ಬೇಡಿಕೆಗಳ ಬಗ್ಗೆ ಸೂಕ್ತ ಭರವಸೆ ನೀಡಿದರು.
ಗಂಗಾವತಿ ರಜಪೂತ ಸಮಾಜದ ಮಹಿಳಾ ಮುಖಮಡರಾದ ಅನ್ನಪೂರ್ಣಸಿಂಗ್ ಮಾತನಾಡಿ, ರಜಪೂತ ಸಮಾಜ ವಿಶ್ವಾಸ,ನಂಬಿಕೆಗೆ ಮತ್ತು ಧೈರ್ಯಕ್ಕೆ ಹೆಸರುವಾಸಿಯಾಗಿರುವ ಸಮಾಜವಾಗಿದೆ ಎಂದರು.
ಅಪ್ಪಟ್ಟ ದೇಶಭಕ್ತರ ಸಮಾಜಗಳಲ್ಲಿ ರಜಪೂತ ಸಮಾಜವೂ ಒಂದಾಗಿದೆ. ಅಖಂಡ ಭಾರತದ ಉಳುವಿಗೆ ತ್ಯಾಗ, ಬಲಿದಾನ ನೀಡಿದ ಸಮಾಜ ಯಾವುದಾದರೂ ಇದ್ದರೇ ಅದು ರಜಪೂತ ಸಮಾಜವೆಂದು ಅವರು ವಿವರಿಸಿದರು. ಸಮಾಜಕ್ಕೆ ಇಲ್ಲೊಂದು ಭವನ ನಿರ್ಮಾಣ ಮಾಡಲು ನಿವೇಶನದ ಅವಶ್ಯಕತೆ ಇದೆ. ಅದನ್ನು ಶಾಸಕರು ಒದಗಿಸಬೇಕೆಂದರು.
ಸಮಾಜದ ಮಕ್ಕಳು ಶಿಕ್ಷಣದಲ್ಲಿ ಸಾಧನೆ ಮಾಡಿ ಇಂದು ಸನ್ಮಾನಿಸಿಕೊಂಡಿದ್ದು ಗಮನಿಸಿದರೇ ರಜಪೂತ ಸಮಾಜದಲ್ಲಿ ಮುಂದೇ ಸಾವಿರಾರು ಪ್ರತಿಭೆಗಳು ಹೊರಬರುತ್ತವೆ ಎಂಬ ವಿಶ್ವಾಸ ಮೂಡಿದೆ ಎಂದು ಶ್ಲಾಘಿಸಿದರು.
ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಕಲಬುರಗಿ ಪೀಠದ ರಾಜ್ಯ ಮಾಹಿತಿ ಆಯುಕ್ತ ವೆಂಕಟ ಸಿಂಗ್ ರಾಯಚೂರ್ ಮಾತನಾಡಿ,ಎಲ್ಲ ಸಮಾಜಗಳ ಜನರೊಂದಿಗೆ ಪ್ರೀತಿ,ವಿಶ್ವಾಸದಿಂದ ನಡೆದುಕೊಳ್ಳವ ಸಮಾಜ ಇದಾಗಿದೆ.ಈ ಸಮಾಜಕ್ಕೆ ಬೇಕಾಗುವ ಸೌಲಭ್ಯಗಳನ್ನು ಸರ್ಕಾರ ನೀಡಬೇಕೆಂದರು.
ಈ ಕಾರ್ಯಕ್ರಮದಲ್ಲಿ ಯಾದಗಿರಿ ಜಿಲ್ಲಾ ರಜಪೂತ ಸಮಾಜದ ಅಧ್ಯಕ್ಷರಾದ ಸಂಜೀವ ಸಿಂಗ್ ರಾಯಚೂರಕರ್, ಬಿಜೆಪಿ ರಾಜ್ಯ ಕಾರ್ಯಕಾರಿ ಸದಸ್ಯ ಮಹೇಶರೆಡ್ಡಿ ಮುದ್ನಾಳ, ಕಲಬುರಗಿ ಸರ್ಕಾರಿ, ಅರೆ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವರಾಜ್ ತಿವಾರಿ, ಯಾದಗಿರಿ ಜಿಲ್ಲಾ ಉಪಾಧ್ಯಕ್ಷ ಸತ್ಯನಾರಾಯಣ ಪ್ರಸಾದ್ ತಿವಾರಿ, ಗುರುಮಠಕಲ್ ತಾಲೂಕು ಅಧ್ಯಕ್ಷ ಉದಯ ಸಿಂಗ್ ರಜಪೂತ, ಪ್ರದಾನ ಕಾರ್ಯದರ್ಶಿ ಸೋಹನ್ ಪ್ರಸಾದ್, ಕಾರ್ಯಕ್ರಮ ನಿರ್ವಹಣಾ ಕಾರ್ಯದರ್ಶಿ ವಿಕ್ರಮ್ ಸಿಂಗ್ ಗೌತಮ್, ಯುವ ಮುಖಂಡರಾದ ಸಂದೀಪ್ ಹಜಾರೆ, ಅಶೀಷ ಹಜಾರೆ, ರಾಹುಲ್ ಹಜಾರೆ, ಗಣೇಶ ಬಾಪಕರ್, ವಿನೊಂದ ಹಜಾರೆ, ರಾಜಾಸಿಂಗ್, ಅಮರ್ ಸಿಂಗ್, ವಿಠ್ಠಲ್ ಸಿಂಗ್, ಭೀಮಸಿಂಗ್, ದಶರಥ ಸಿಂಗ್, ಮುನಿರಾಜ್ ಸಿಂಗ್, ಶಶಿಕಾಂತ ದಿಕ್ಷೀತ್, ಅಮರಸಿಂಗ್ ಅಫಜಲಪೂರ್, ಅನಂದ ಹಜಾರೆ, ಪವನ ರಜಪೂತ, ವಿಶಾಲ್ ಹಜಾರೆ ಸೇರಿದಂತೆ ಸಮಾಜದ ಬಂದವರು ಹಾಜರಿದ್ದರು.
ಪ್ರತಿಭಾವಂತ ಸಾಧಕ ಮಕ್ಕಳಿಗೆ ಸನ್ಮಾನ: ಎಸ್ಎಸ್ಎಲ್ಸಿ ವಿಭಾಗಯಲ್ಲಿ ಸಾಹಿತಿ ಎಸ್. ತಿವಾರಿ 93.28% ಅಂಕ ಗಳಿಸಿ ಪ್ರಥಮ ಸ್ಥಾನ ಗಳಿಸಿದ್ದು, ಆಯುಷ್ ಸಿಂಗ್ (88.48%) ಮತ್ತು ಶೋರಾಪುರದ ಸ್ನೇಹಾ (87.04%) ಅತ್ಯುತ್ತಮ ಸಾಧನೆ ಮಾಡಿದ್ದಾರೆ.
ಇವರೊಂದಿಗೆ ಅಭಯ್ಸಿಂಗ್ (85.12%), ಪೂಜಾ (84.14%), ಅಂಗದ್ಸಿಂಗ್ (82.88%), ಅಂಕಿತಾ (81.28%) ಮತ್ತು ವಿನಯ್ಸಿಂಗ್ ಠಾಕೂರ್ (75.52%) ಅವರನ್ನು ಸನ್ಮಾನಿಸಲಾಯಿತು.
ದ್ವಿತೀಯ ಪಿಯುಸಿ (PUC-II) ವಿಭಾಗದಲ್ಲಿ ಸುರಪುರ ತಾಲೂಕಿನ ಅಮೂಲ್ಯಾ ಠಾಕೂರ್ 93.17% (559/600) ಗಳಿಸಿ ಅತ್ಯುತ್ತಮ ಸಾಧನೆ ತೋರಿದ್ದಾರೆ. ತಿಪ್ಪಂಟಗಿಯ ಪ್ರಿಯಾಂಕಾ ಸಿಂಗ್ ಆರ್. (84.16%) ಅಂಕಗಳೊಂದಿಗೆ ಗೌರವಕ್ಕೆ ಪಾತ್ರರಾಗಿದ್ದಾರೆ.
ಪದವಿ (Graduation) ವಿಭಾಗದಲ್ಲಿ ಶಹಾಪುರದ ಶ್ರದ್ಧಾ (BSc) ಅವರು 9.13/10 (92%) ಸಿಜಿಪಿಎ ಗಳಿಸಿ ಸಾಧನೆ ಮಾಡಿದ್ದಾರೆ. ಇವರ ಜೊತೆಗೆ ಶಹಾಪುರದ ಅಂಕಿತಾ (BA) ಮತ್ತು ಅಭಿಲಾಷ್ (BA) ಅವರಿಗೆ ಗೌರವ ಸಲ್ಲಿಸಲಾಯಿತು.
ಸ್ನಾತಕೋತ್ತರ ಮತ್ತು ವೃತ್ತಿಪರ ಶಿಕ್ಷಣ ವಿಭಾಗ: ವೈದ್ಯಕೀಯ ಮತ್ತು ತಾಂತ್ರಿಕ ಕ್ಷೇತ್ರದಲ್ಲಿ ಸಾಧನೆ ಮಾಡಿದ ಶಹಾಪುರದ ಡಾ. ಶ್ರೇಯಾ (MBBS), ಡಾ. ಅಕ್ಷತಾ (BAMS), ಗುರುಮಠಕಲ್ನ ಶೀತಲ್ ತಿವಾರಿ (BE – ECE ಯಲ್ಲಿ 85.80%) ಮತ್ತು ಯಾದಗಿರಿಯ ಈಶಾ ಠಾಕೂರ್ (ಪ್ಯಾರಾಮೆಡಿಕಲ್ – DHI) ಅವರನ್ನು ಸನ್ಮಾನಿಸಲಾಯಿತು.
ವಿಶೇಷ ಸಾಧಕರಿಗೆ ಗೌರವ ಸನ್ಮಾನ: ಶಿಕ್ಷಣ ಮಾತ್ರವಲ್ಲದೆ ಕಲೆ, ಸಂಸ್ಕೃತಿ ಮತ್ತು ವಿಶಿಷ್ಟ ಪ್ರತಿಭೆ ಹೊಂದಿರುವ ಸಮಾಜದ ಸಾಧಕರನ್ನು ಈ ಸಂದರ್ಭದಲ್ಲಿ ಗುರುಮಠಕಲ್ನ ಶಿಕ್ಷಕರಾದ ಸುನಿಲ್ಪ್ರಸಾದ್ ಶುಕ್ಲಾ ಅವರಿಗೆ ರಾಜ್ಯ ಮಟ್ಟದ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದ ಹಿನ್ನೆಲೆಯಲ್ಲಿ ಗೌರವಿಸಲಾಯಿತು.
ಸಂಸ್ಕೃತಿ ಮತ್ತು ನೃತ್ಯ ಸಾಧನೆ: ಶಹಾಪುರದ 6ನೇ ತರಗತಿ ವಿದ್ಯಾರ್ಥಿನಿ ಇಂದ್ರಾಸಿಂಗ್ ಹಜಾರೆ ಅವರು ಭರತನಾಟ್ಯದಲ್ಲಿ ರಾಜ್ಯ ಮಟ್ಟದ ಸಾಧನೆ ಮಾಡಿದ್ದಕ್ಕಾಗಿ ಸನ್ಮಾನಿಸಲಾಯಿತು.
ವಿಶಿಷ್ಟ ಪ್ರತಿಭೆ: ಯಾದಗಿರಿಯ 4ನೇ ತರಗತಿಯ ಬಾಲಕ ಅನುರೂಪ್ ವಿ. ಠಾಕೂರ್ ಕಣ್ಣಿಗೆ ಬಟ್ಟೆ ಕಟ್ಟಿ ಪ್ರದರ್ಶಿಸುವ ವಿಶಿಷ್ಟ ‘ಘನಧಾರಿ ವಿದ್ಯಾ’ (Blindfold) ಪ್ರತಿಭೆಗಾಗಿ ನೆರೆದಿದ್ದವರ ಪ್ರಶಂಸೆಗೆ ಪಾತ್ರರಾದರು.
