ಶಾಂತಿಯುತ, ಪಾರದರ್ಶಕವಾಗಿ ನಡೆದ NEET(UG) ಮರುಪರೀಕ್ಷೆ | ಜಿಲ್ಲಾಧಿಕಾರಿ ರಾಹುಲ್ ತುಕಾರಾಮ ಪಾಂಡ್ವೆ ಮಾಹಿತಿ
ಯಾದಗಿರಿ: ಜಿಲ್ಲಾಡಳಿತದ ತೀವ್ರ ಕಣ್ಗಾವಲಿನಲ್ಲಿ NEET(UG) ಮರುಪರೀಕ್ಷೆಯು ಸುಸೂತ್ರವಾಗಿ ಹಾಗೂ ಶಾಂತಿಯುತವಾಗಿ ನಡೆದಿದೆ ಎಂದು ಜಿಲ್ಲಾಧಿಕಾರಿ ಶ್ರೀ ರಾಹುಲ್ ತುಕಾರಾಮ ಪಾಂಡ್ವೆ ಅವರು ತಿಳಿಸಿದ್ದಾರೆ.
ಓಇಇಖಿ ಮರುಪರೀಕ್ಷೆಯು ನಕಲು ಮುಕ್ತ, ಪಾರದರ್ಶಕ ಹಾಗೂ ವ್ಯವಸ್ಥಿತವಾಗಿ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಇತ್ತೀಚೆಗೆ ಮಾನ್ಯ ಜಿಲ್ಲಾಧಿಕಾರಿಗಳು ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ತೀವ್ರ ಕಣ್ಗಾವಲಿನಲ್ಲಿ ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ಈ ಪರೀಕ್ಷೆಗಳನ್ನು ಯಾವುದೇ ರೀತಿಯ ಲೋಪಗಳಿಗೆ ಅವಕಾಶ ನೀಡದೆ ಪಾರದರ್ಶಕವಾಗಿ ಹಾಗೂ ಸುಗಮವಾಗಿ ನಡೆಸಲಾಯಿತು.
ಯಾದಗಿರಿ ನಗರದ ಆರು ಪರೀಕ್ಷಾ ಕೇಂದ್ರಗಳಲ್ಲಿ ಇಂದು ನಡೆದ ಈ ಪರೀಕ್ಷೆಗೆ ಒಟ್ಟು 2075 ವಿದ್ಯಾರ್ಥಿಗಳ ಪೈಕಿ,1789 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ. ಒಟ್ಟು 286 ವಿದ್ಯಾರ್ಥಿಗಳು ಈ ಪರೀಕ್ಷೆಗೆ ಗೈರು ಹಾಜರಾಗಿದ್ದಾರೆ. ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ 467 ವಿದ್ಯಾರ್ಥಿಗಳ ಪೈಕಿ, 391 ವಿದ್ಯಾರ್ಥಿಗಳು ಹಾಜರಾಗಿದ್ದು,76 ವಿದ್ಯಾರ್ಥಿಗಳು ಗೈರಾಗಿದ್ದಾರೆ.
ಲಿಂಗೇರಿ ಕೋನಪ್ಪ ಪ್ರೌಢ ಶಾಲೆ ಪರೀಕ್ಷೆ ಕೇಂದ್ರದಲ್ಲಿ 360 ವಿದ್ಯಾರ್ಥಿಗಳ ಪೈಕಿ, 310 ವಿದ್ಯಾರ್ಥಿಗಳು ಹಾಜರಿದ್ದು,50 ಗೈರಾಗಿದ್ದಾರೆ. ಜವಾಹರ್ ಪಿ.ಯು ಕಾಲೇಜು ಪರೀಕ್ಷೆ ಕೇಂದ್ರದಲ್ಲಿ 240 ವಿದ್ಯಾರ್ಥಿಗಳ ಪೈಕಿ, 209 ವಿದ್ಯಾರ್ಥಿಗಳು ಹಾಜರಾಗಿದ್ದು,31 ವಿದ್ಯಾರ್ಥಿಗಳು ಗೈರಾಗಿದ್ದಾರೆ. ಸರ್ಕಾರಿ ಪಿಯು ಕಾಲೇಜು ಪರೀಕ್ಷೆ ಕೇಂದ್ರದಲ್ಲಿ 288 ವಿದ್ಯಾರ್ಥಿಗಳ ಪೈಕಿ, 251, ವಿದ್ಯಾರ್ಥಿಗಳು ಪರೀಕ್ಷೆ ಗೆ ಹಾಜರಾಗಿದ್ದು,37 ಗೈರಾಗಿದ್ದಾರೆ.
ಸರ್ಕಾರಿ ಪದವಿ ಕಾಲೇಜು ಪರೀಕ್ಷೆ ಕೇಂದ್ರದಲ್ಲಿ 480 ವಿದ್ಯಾರ್ಥಿಗಳ ಪೈಕಿ, 420 ವಿದ್ಯಾರ್ಥಿಗಳು ಹಾಜರಾಗಿದ್ದು,60 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ. ಸರ್ಕಾರಿ ಹೆಣ್ಣು ಮಕ್ಕಳ ಪಿಯು ಕಾಲೇಜು ಪರೀಕ್ಷೆ ಕೇಂದ್ರದಲ್ಲಿ 240 ವಿದ್ಯಾರ್ಥಿಗಳ ಪೈಕಿ, 208 ವಿದ್ಯಾರ್ಥಿಗಳು ಹಾಜರಾಗಿದ್ದು,32 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ.
ಈ ಪರೀಕ್ಷೆಗಾಗಿ ಒಟ್ಟು 174 ಅಧಿಕಾರಿ ಹಾಗೂ ಸಿಬ್ಬಂದಿಗಳ ನ್ನು ನೇಮಿಸಲಾಗಿತ್ತು. ನವದೆಹಲಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್.ಟಿ.ಎ.) ಯಿಂದ ನೇಮಕ ಮಾಡಿದ್ದ ಪರೀಕ್ಷಾ ಕೇಂದ್ರದ ವೀಕ್ಷಕರ ನಿಗಾದಲ್ಲಿ ಪರೀಕ್ಷೆಯನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದ್ದು, ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಗಳು, ಪರೀಕ್ಷೆ ಮೇಲ್ವಿಚಾರಕರು, ನೋಡಲ್ ಅಧಿಕಾರಿಗಳು, ಪರೀಕ್ಷಾ ಮುಖ್ಯಸ್ಥರ, ಸಂಯೋಜಕರ ಸಹಕಾರದಿಂದ ಪರೀಕ್ಷೆಯನ್ನು ಎನ್ ಟಿ ಎ ನಿಯಮ ಹಾಗೂ ಮಾರ್ಗಸೂಚಿಯಂತೆ ಸಿಸಿಟಿವಿ ಕಣ್ಗಾವಲಿನಲ್ಲಿ, ಜಿಲ್ಲಾಡಳಿತದವತಿಯಿಂದ ಅವಶ್ಯಕ ಮುಂಜಾಗೃತಾ ಕ್ರಮಗಳಿಂದಾಗಿ ಪರೀಕ್ಷೆ ಶಾಂತಿಯುತವಾಗಿ ನಡೆದಿದೆ. ಸಹಕಾರ ನೀಡಿದ ಎಲ್ಲರಿಗೂ ಜಿಲ್ಲಾಧಿಕಾರಿಗಳು ಅಭಿನಂದನೆ ಸಲ್ಲಿಸಿದ್ದಾರೆ.
ಇಂದು ಮಧ್ಯಾಹ್ನ 2 ರಿಂದ ಸಂಜೆ 5-15 ಗಂಟೆಯವರೆಗೆ ಪರೀಕ್ಷೆ ನಡೆದಿದ್ದು, ವಿಶೇಷ ಚೇತನರಿಗೆ ಹೆಚ್ಚುವರಿ ಒಂದು ಗಂಟೆ ಕಾಲಾವಕಾಶ ನೀಡಲಾಗಿತ್ತು. ಅದರಂತೆ ಈ ಬಾರಿಯ ಪರೀಕ್ಷೆಯಲ್ಲಿ ಎಲ್ಲ ಅಭ್ಯರ್ಥಿಗಳಿಗೆ ಹೆಚ್ಚುವರಿ 15 ನಿಮಿಷಗಳ ಕಾಲಾವಕಾಶ ಸಹ ನೀಡಿರುವುದು ವಿಶೇಷವಾಗಿದೆ ಎಂದು ಅವರು ತಿಳಿಸಿದ್ದಾರೆ.
