ಪತ್ರಕರ್ತರ ಧ್ವನಿ ಸಂಘಟನೆ ಜಿಲ್ಲಾ ಪದಾಧಿಕಾರಿಗಳ ಪದಗ್ರಹಣ, ಪತ್ರಿಕಾ ದಿ ಆಚರಣೆ | ಜಿಲ್ಲೆಯ ಅಭಿವೃದ್ಧಿಯಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದು | ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಅಭಿಮತ
ಯಾದಗಿರಿ: ಗಡಿ ಜಿಲ್ಲೆಯಾದ ಯಾದಗಿರಿಯ ಜನರ ಸಮಸ್ಯೆಗಳನ್ನು ಪತ್ರಕರ್ತರು ತಮ್ಮ ನೈಜ ಹಾಗೂ ವಾಸ್ತವಿಕ ವರದಿಗಳ ಮೂಲಕ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕೆ ನೆರವಾಗುತ್ತಿರುವುದು ಜಿಲ್ಲೆಯ ಅಭಿವೃದ್ಧಿಗೆ ಪೂರಕವಾಗಿದೆ ಎಂದು ಶಾಸಕ ಚನ್ನಾರಡ್ಡಿ ಪಾಟೀಲ್ ತುನ್ನೂರ ಹೇಳಿದರು.
ನಗರದ ಸರ್ಕಾರಿ ಪದವಿ ಮಹಾವಿದ್ಯಾಲಯ ಸಭಾಂಗಣದಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಜಿಲ್ಲಾ ಘಟಕದ ಪದಾಧಿಕಾರಿಗಳ ಪದಗ್ರಹಣ ಹಾಗೂ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪತ್ರಕರ್ತರು ಯಾವುದೇ ವಿಷಯವನ್ನು ಸಮಗ್ರ ಮಾಹಿತಿ ಸಂಗ್ರಹಿಸಿ, ಸಕಾರಾತ್ಮಕ ಹಾಗೂ ಜವಾಬ್ದಾರಿಯುತವಾಗಿ ವರದಿ ಮಾಡಿದಾಗ ಮಾತ್ರ ಜನರಲ್ಲಿ ಮಾಧ್ಯಮಗಳ ಮೇಲಿನ ವಿಶ್ವಾಸ ಮತ್ತಷ್ಟು ಹೆಚ್ಚುತ್ತದೆ. ಪತ್ರಕರ್ತರ ಸಂಘಟನೆ ಕೂಡ ಜನಪರ ಸಮಸ್ಯೆಗಳಿಗೆ ಧ್ವನಿಯಾಗಿ ಕಾರ್ಯನಿರ್ವಹಿಸಿ ಜಿಲ್ಲೆಯ ಗೌರವ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಲವೀಶ್ ಓರಾಡಿಯಾ ಮಾತನಾಡಿ, ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಮಾಧ್ಯಮ ಕ್ಷೇತ್ರ ಮತ್ತು ಆಡಳಿತ ವ್ಯವಸ್ಥೆ ಸಾಮಾಜಿಕ ಕಳಕಳಿ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಪರಸ್ಪರ ಪೂರಕವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಹೇಳಿದರು.
ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಅವರು ವಿಶೇಷ ಉಪನ್ಯಾಸ ನೀಡಿದರು. ಬಿಜೆಪಿ ಮುಖಂಡರಾದ ರಾಚನಗೌಡ ಮುದ್ನಾಳ ಹಾಗೂ ಮಹೇಶರೆಡ್ಡಿ ಮುದ್ನಾಳ, ಹಾಸ್ಯ ಕಲಾವಿದ ಬಸವರಾಜ ಮಹಾಮನಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಚಂದ್ರಶೇಖರಗೌಡ ಮಾಗನೂರ, ಗುಂಡಪ್ಪ ಕಲಬುರಗಿ ಸೇರಿದಂತೆ ಹಲವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಡಾ. ಕಮಲಾ ಇಂದೂಧರ ಸಿನ್ನೂರ ಅವರ “ಹೊಸ ಕನ್ನಡ ಸಾಹಿತ್ಯದಲ್ಲಿ ಅಕ್ಕ ಮಹಾದೇವಿ” ಕೃತಿಯನ್ನು ಬಿಡುಗಡೆ ಮಾಡಲಾಯಿತು. ಕೃತಿಯ ಕುರಿತು ಸರ್ಕಾರಿ ಪದವಿ ಕಾಲೇಜಿನ ಪ್ರಾಂಶುಪಾಲ ಡಾ. ಸುಭಾಷ್ಚಂದ್ರ ಕೌಲಗಿ ಮಾತನಾಡಿ, ಅಕ್ಕ ಮಹಾದೇವಿಯ ಜೀವನ, ಆಧ್ಯಾತ್ಮಿಕ ಸಾಧನೆ ಹಾಗೂ ವಚನ ಸಾಹಿತ್ಯದ ಮಹತ್ವವನ್ನು ವಿವರಿಸಿದರು.
ಸಂಘಟನೆಯ ನೂತನ ಜಿಲ್ಲಾಧ್ಯಕ್ಷರಾಗಿ ಇಂದೂಧರ ಸಿನ್ನೂರ, ಉಪಾಧ್ಯಕ್ಷರಾಗಿ ದಿನೇಶ್ ವಿಸಿ, ಖಜಾಂಚಿಯಾಗಿ ನಾಗಪ್ಪ ಮಾಲಿ ಪಾಟೀಲ್, ಪ್ರಧಾನ ಕಾರ್ಯದರ್ಶಿಯಾಗಿ ಖುದಾನ್ಸಾಬ್, ಸಂಘಟನಾ ಕಾರ್ಯದರ್ಶಿಯಾಗಿ ರೂಪೇಶ್ ಪದಗ್ರಹಣ ಮಾಡಿದರು. ಸಮಾರಂಭದಲ್ಲಿ ಪತ್ರಕರ್ತರು ಹಾಗೂ ಪತ್ರಿಕೆ ವಿತರಕರನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ನಗರಸಭೆ ಆಯುಕ್ತ ಉಮೇಶ್ ಚವ್ಹಾಣ, ಅಪರ ಜಿಲ್ಲಾಧಿಕಾರಿ ರಮೇಶ್ ಕೋಲಾರ, ಉದ್ಯಮಿಗಳಾದ ಮಲ್ಲಿಕಾರ್ಜುನ ಶಿರಗೋಳ, ದಿನೇಶ್ ದೋಕಾ, ಭೀಮಾವತಿ, ಡಾ. ಕಮಲಾ ಸಿನ್ನೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
