ಆ.31ರೊಳಗೆ ನೂತನ ಕಾಂಗ್ರೆಸ್ ಜಿಲ್ಲಾಧ್ಯಕ್ಷರ ನೇಮಕ | ಎಐಸಿಸಿ ವೀಕ್ಷಕರಿಂದ ಮುಖಂಡರು, ಕಾರ್ಯಕರ್ತರ ಅಭಿಪ್ರಾಯ ಸಂಗ್ರಹ | ಹೈಕಮಾಂಡ್ ಗೆ ವರದಿ ಸಲ್ಲಿಕೆ
ಗುರುಮಠಕಲ್: ದೇಶದ 25 ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನಾ ಸೃಜನ ಅಭಿಯಾನ ನಡೆಯುತ್ತಿದೆ ಎಂದು ಎಐಸಿಸಿ ಕಾರ್ಯದರ್ಶಿ, ಯಾದಗಿರಿ ಜಿಲ್ಲಾಧ್ಯಕ್ಷರ ನೇಮಕ ಉಸ್ತುವಾರಿ ಜಟ್ಟಿ ಕುಸುಮ್ ಕುಮಾರ್ ಹೇಳಿದರು.
ಗುರುಮಠಕಲ್ ನ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಳಮಟ್ಟದಿಂದ ಪಕ್ಷ ಸಂಘಟನೆ ಮಾಡಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಆಲೋಚನೆ ಹಿನ್ನೆಲೆ ಸಂಘಟನೆಗೆ ಹಲವು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಅಭಿಯಾನದ ಮೂಲಕ ಜಿಲ್ಲಾಧ್ಯಕ್ಷರ ನೇಮಕ ಮಾಡಲಾಗುತ್ತಿದ್ದು, ಎಐಸಿಸಿ ನಿರ್ದೇಶನದ ಮೇರೆಗೆ ಯಾದಗಿರಿ ಜಿಲ್ಲೆಯ 4 ವಿಧಾನ ಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡಿ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತಿದೆ.
ಕಾರ್ಯಕರ್ತರು, ಮುಖಂಡರು ಅಲ್ಲದೇ ರಾಜಕೀಯೇತರ ಪ್ರಮುಖರ ಅಭಿಪ್ರಾಯವೂ ಪಡೆದು, ಪಕ್ಷದ ಹೈಕಮಾಂಡ್ ಗೆ ವರದಿ ಸಲ್ಲಿಸಲಾಗುವುದು. ಜಿಲ್ಲಾಧ್ಯಕ್ಷರ ನೇಮಕದ ಕುರಿತು ಅಂತಿಮ ನಿರ್ಧಾರ ಹೈಕಮಾಂಡ್ ತೆಗೆದುಕೊಳ್ಳಲಿದೆ. ಆ. 31ರೊಳಗೆ ಅಧ್ಯಕ್ಷ ನೇಮಕ ಜರುಗಲಿದೆ ಎಂದರು.
ಈವರೆಗೆ ಯಾದಗಿರಿ ಜಿಲ್ಲೆಯ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ 20ಕ್ಕೂ ಹೆಚ್ಚು ಆಕಾಂಕ್ಷಿಗಳಿಂದ ಅರ್ಜಿ ಸ್ವೀಕರಿಸಲಾಗಿದೆ. ಪಕ್ಷದ ಹಿರಿಯ ನಾಯಕ, ಮಾಜಿ ಸಚಿವ ಬಾಬುರಾವ್ ಚಿಂಚನಸೂರ ಸೇರಿದಂತೆ ಜಿಲ್ಲೆಯ 3 ಶಾಸಕರ ಜೊತೆ ಚರ್ಚಿಸಿ ಅಭಿಪ್ರಾಯವೂ ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.
ಈ ವೇಳೆ ಬಿಸಿಸಿ ಮಾಜಿ ಅಧ್ಯಕ್ಷ, ಮಾಜಿ ಎಂಎಲ್ಸಿ ಪುಂಡಲೀಕ ರಾವ್, ಶ್ರೀದೇವಿ ಕೆಪಿಸಿಸಿ ಕಾರ್ಯದರ್ಶಿ, ನಿಜಶರಣ ಅಂಬಿಗರ ಚೌಡಯ್ಯ ನಿಗಮ ಅಧ್ಯಕ್ಷರೂ ಮಾಜಿ ಸಚಿವ ಬಾಬುರಾವ್ ಚಿಂಚನಸೂರ, ಗುರುಮಠಕಲ್ ಉಸ್ತುವಾರಿ ರಾಜಗೋಪಾಲ್ ರಡ್ಡಿ, ಬಸರೆಡ್ಡಿ ಅನಪೂರ, ಬ್ಲಾಕ್ ಅಧ್ಯಕ್ಷ ಕೃಷ್ಣ ಚಪೆಟ್ಲಾ, ಸಾಯಬಣ್ಣ ಬೋರಬಂಡ, ಸಂಜೀವ ಕುಮಾರ್ ಚಂದಾಪೂರ ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು.
ಕಾರ್ಯಕರ್ತರ ಸಭೆ : ಇದೇ ವೇಳೆ ಎಐಸಿಸಿ ಕಾರ್ಯದರ್ಶಿ ಜಟ್ಟಿ ಕುಸುಮ್ ಕುಮಾರ್ ಅವರು ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮತಕ್ಷೇತ್ರದ ಕಾರ್ಯಕರ್ತರು, ಮುಖಂಡರ ಸಭೆ ನಡೆಸಿದರು.
ವಿಜಯ ಕುಮಾರ್ ನೀರೆಟಿ ಅರ್ಜಿ ಸಲ್ಲಿಕೆ: ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ಹಿರಿಯ ಕಾರ್ಯಕರ್ತ ವಿಜಯ ಕುಮಾರ್ ನೀರೆಟಿ ಅವರು ವೀಕ್ಷಕರಿಗೆ ಅರ್ಜಿ ಸಲ್ಲಿಸಿದ್ದರು.
