ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಶರಣಪ್ಪ ಯಲ್ಹೇರಿ ಅವರಿಂದ | ಕರ್ನಾಟಕ ರಾಜ್ಯ ವೈದ್ಯಕೀಯ ಮಂಡಳಿ ರಿಜಿಸ್ಟ್ರಾರ್ ಗೆ ಮನವಿ

ಬೆಂಗಳೂರು : ಯಾದಗಿರಿ ಜಿಲ್ಲೆಯ ಗುರುಮಠಕಲ್ ಮತಕ್ಷೇತ್ರದಲ್ಲಿ ನಕಲಿ ವೈದ್ಯರು ಹಾಗೂ ಅನಧಿಕೃತವಾಗಿ ವೈದ್ಯಕೀಯ ಚಿಕಿತ್ಸೆ ನೀಡುತ್ತಿರುವವರ ವಿರುದ್ಧ  ತನಿಖೆ ನಡೆಸಲು ರಾಜ್ಯ ಮಟ್ಟದ ತಂಡ ರಚಿಸಿ ಕ್ರಮಕೈಗೊಳ್ಳುವಂತೆ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣಶೆಟ್ಟಿ ಬಣ) ತಾಲೂಕು ಅಧ್ಯಕ್ಷ ಶರಣಪ್ಪ ಯಲ್ಹೇರಿ ಬೆಂಗಳೂರಿನಲ್ಲಿ ಮನವಿ ಸಲ್ಲಿಸಿದ್ದಾರೆ.

ಮತಕ್ಷೇತ್ರದ ಕೆಲವು ಗ್ರಾಮಗಳಲ್ಲಿ ನಾಲ್ಕರಿಂದ ಐದು ಜನರನ್ನು ಆರ್‌ಎಂಪಿ ಹೆಸರಿನಲ್ಲಿ ವೈದ್ಯಕೀಯ ಸೇವೆ ನಡೆಸುತ್ತಿರುವುದು ಕಂಡುಬರುತ್ತಿದೆ ಎಂಬ ಸಾರ್ವಜನಿಕ ದೂರುಗಳು ಕೇಳಿಬಂದಿವೆ. ಯಾವುದೇ ಸೂಕ್ತ ವೈದ್ಯಕೀಯ ಅರ್ಹತೆ ಇಲ್ಲದೆ ರೋಗಿಗಳಿಗೆ ನೇರವಾಗಿ ಇಂಜೆಕ್ಷನ್ ನೀಡುವುದು, ಗ್ಲೋಕೋಸ್ ಬಾಟಲಿ ಹಾಕುವುದು, ಆಂಟಿಬಯೋಟಿಕ್ ಔಷಧಿಗಳನ್ನು ನೀಡುವುದು ಹಾಗೂ ವಿವಿಧ ರೀತಿಯ ಚಿಕಿತ್ಸಾ ವಿಧಾನಗಳನ್ನು ಅನುಸರಿಸುತ್ತಿರುವುದು ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಮಾರಕವಾಗಿದೆ ಎಂದಿದ್ದಾರೆ. ಗ್ರಾಮೀಣ ಪ್ರದೇಶದ ಬಡ ಮತ್ತು ಸಾಮಾನ್ಯ ಜನರು ಇಂತಹವರನ್ನು ನಂಬಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅರ್ಹತೆ ಇಲ್ಲದ ವ್ಯಕ್ತಿಗಳಿಂದ ತಪ್ಪಾದ ಚಿಕಿತ್ಸೆ ದೊರೆತರೆ ಸಾರ್ವಜನಿಕರ ಆರೋಗ್ಯಕ್ಕೆ ಗಂಭೀರ ಹಾನಿಯಾಗುವ ಸಾಧ್ಯತೆ ಇದೆ. ವಿಶೇಷವಾಗಿ ಆಂಟಿಬಯೋಟಿಕ್ ಔಷಧಿಗಳ ಅನಗತ್ಯ ಬಳಕೆ, ವೈದ್ಯಕೀಯ ಮೇಲ್ವಿಚಾರಣೆಯಿಲ್ಲದೆ ಇಂಜೆಕ್ಷನ್ ಹಾಗೂ ಗ್ಲೂಕೋಸ್ ನೀಡುವುದು ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಆತಂಕಕಾರಿ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಪ್ರಮುಖವಾಗಿ ಮತಕ್ಷೇತ್ರದ ಎಲ್ಲಾ ಗ್ರಾಮಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆರ್‌ಎಂಪಿ ಹಾಗೂ ಖಾಸಗಿ ಕ್ಲಿನಿಕ್‌ಗಳ ಸಮಗ್ರ ತನಿಖೆ ನಡೆಸಬೇಕು, ವೈದ್ಯಕೀಯ ಸೇವೆ ನೀಡುತ್ತಿರುವವರ ವೈದ್ಯಕೀಯ ಪದವಿ, ಪ್ರಮಾಣಪತ್ರ ಹಾಗೂ ವೈದ್ಯಕೀಯ ಮಂಡಳಿಯ ನೋಂದಣಿ ಸಂಖ್ಯೆಯನ್ನು ಪರಿಶೀಲಿಸಬೇಕು ಮತ್ತು ಅರ್ಹತೆ ಅಥವಾ ನೋಂದಣಿ ಇಲ್ಲದೆ ವೈದ್ಯಕೀಯ ವೃತ್ತಿ ನಡೆಸುತ್ತಿರುವವರನ್ನು ಗುರುತಿಸಿ ತನಿಖೆ ನಡೆಸಬೇಕು, ಅನಧಿಕೃತ ಕ್ಲಿನಿಕ್‌ಗಳು ಹಾಗೂ ವೈದ್ಯಕೀಯ ಕೇಂದ್ರಗಳ ನೋಂದಣಿ ಮತ್ತು ಕಾನೂನುಬದ್ಧ ಸ್ಥಿತಿಯನ್ನು ಪರಿಶೀಲಿಸಬೇಕು ಹಾಗೂ ನಕಲಿ ವೈದ್ಯರು ಮತ್ತು ಅನಧಿಕೃತ ವೈದ್ಯಕೀಯ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲು ಜಿಲ್ಲಾಮಟ್ಟದ ವಿಶೇಷ ತನಿಖಾ ತಂಡವನ್ನು ನಿಯೋಜಿಸಬೇಕು ಎಂಬ ವಿವಿಧ ಬೇಡಿಕೆಗಳನ್ನು ಸಲ್ಲಿಸಿ, ಜನಸಾಮಾನ್ಯರ ಆರೋಗ್ಯದ ಹಿತದೃಷ್ಟಿಯಿಂದ ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.

Spread the love

Leave a Reply

Your email address will not be published. Required fields are marked *

error: Content is protected !!